ವೀರಭದ್ರೇಶ್ವರ -ಭದ್ರಕಾಳಿ ಅಮ್ಮನವರ ಜಾತ್ರೆ: 120 ಕೆ.ಜಿ ಬೆಳ್ಳಿ ರಥ ಎಳೆದ ಮಹಿಳೆಯರು

Veerabhadreshwar-Bhadrakali Ammanavara Jatra: Women Pulling 120 Kg Silver Chariot

ವೀರಭದ್ರೇಶ್ವರ -ಭದ್ರಕಾಳಿ ಅಮ್ಮನವರ ಜಾತ್ರೆ: 120 ಕೆ.ಜಿ ಬೆಳ್ಳಿ ರಥ ಎಳೆದ ಮಹಿಳೆಯರು 

ಸಿಂದಗಿ 07: ಪಟ್ಟಣದ ಸಾರಂಗಮಠ-ಗಚ್ಚಿನಮಠದ ವೀರಭದ್ರೇಶ್ವರ ಹಾಗೂ ಭದ್ರಕಾಳಿ ಅಮ್ಮನವರ ಜಾತ್ರಾ ಮಹೋತ್ಸವ ಸಂಪನ್ನಗೊಂಡಿತು. 

ಅಪಾರ ಸಂಖ್ಯೆಯಲ್ಲಿ ಸಮಾವೇಶ ಗೊಂಡಿದ್ದ ಮಹಿಳೆಯರು ಸಂಭ್ರಮ ದಿಂದ ಸಾರಂಗಮಠದಿಂದ ಒಂದು ಕಿ.ಮೀ. ಅಂತರದ ಗಚ್ಚಿನಮಠದ ವರೆಗೆ ಬೆಳ್ಳಿ ರಥವನ್ನು ಎಳೆದರು. 

ಮಠದ ಪೀಠಾಧ್ಯಕ್ಷ ಪ್ರಭು ಸಾರಂಗದೇವ ಶಿವಾಚಾರ್ಯ ಸ್ವಾಮೀಜಿ ಸಂಕಲ್ಪದಂತೆ 2018ರಲ್ಲಿ 120 ಕೆ.ಜಿ ಬೆಳ್ಳಿಯಲ್ಲಿ ರಥವನ್ನು ಉಡುಪಿ ಜಿಲ್ಲೆಯ ಕುಂದಾಪೂರ ತಾಲ್ಲೂಕಿನ ಗೋಪಾಡಿ ಗ್ರಾಮದ ಶಿಲ್ಪಿಗಳಾದ ಪ್ರಭಾಕರ ಆಚಾರ್ಯ, ಕೃಷ್ಣಯ್ಯ ಆಚಾರ್ಯ ಸಹೋದರರು ನಿರ್ಮಿಸಿದ್ದಾರೆ. 

ರಥದಲ್ಲಿ ವೀರಭದ್ರೇಶ್ವರ ಮತ್ತು ಭದ್ರಕಾಳಿ ಅಮ್ಮನವರ ಉತ್ಸವ ಮೂರ್ತಿ ರಾರಾಜಿಸುತ್ತಿದ್ದವು. ರಥೋತ್ಸವದ ಮುಂಚೂಣಿಯಲ್ಲಿ ಪುರವಂತರ ಸೇವೆ ಮುಂದುವರೆದಿತ್ತು. ಉಡುಪಿ ಜಿಲ್ಲೆಯ ವಡಭಾಂಡೇಶ್ವರದ ಸ್ಕಂದ ಚಂಡೆ ಬಳಗದ ವಾದ್ಯ ಪ್ರದರ್ಶನ, ಮಹಿಳೆಯರ ನೃತ್ಯ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು. 

ರಥೋತ್ಸವದ ಸಮ್ಮುಖವನ್ನು ಸಾರಂಗಮಠ-ಗಚ್ಚಿನಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯ ಸ್ವಾಮೀಜಿ, ಜಮಖಂಡಿ-ಕೊಣ್ಣುರ ಹೊರಗಿನ ಕಲ್ಯಾಣಮಠದ ಡಾ.ವಿಶ್ವಪ್ರಭುದೇವ ಶಿವಾಚಾರ್ಯ ಸ್ವಾಮೀಜಿ, ಕನ್ನೊಳ್ಳಿ ಹಿರೇಮಠದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ಯಂಕಂಚಿ ಕುಂಟೋಜಿ ಹಿರೇಮಠದ ಅಭಿನವ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಕಲಕೇರಿ ಮಡಿವಾಳೇಶ್ವರ ಶಿವಾಚಾರ್ಯ ಸ್ವಾಮೀಜಿ, ಶಹಾಪೂರ ಸೂಗುರೇಶ್ವರ ಶಿವಾಚಾರ್ಯ ಸ್ವಾಮೀಜಿ, ಸಿಂದಗಿ ಊರನಹಿರಿಯಮಠದ ಲಿಂಗದೇವರು ವಹಿಸಿದ್ದರು. 

ಶಾಸಕ ಅಶೋಕ ಮನಗೂಳಿ, ಪುರಸಭೆ ಅಧ್ಯಕ್ಷ ಶಾಂತವೀರ ಬಿರಾದಾರ, ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಶಾಖೆ ಅಧ್ಯಕ್ಷ ಅಶೋಕ ವಾರದ, ತಾಲೂಕು ಜಂಗಮ ಕ್ಷೇಮಾಭಿವೃದ್ದಿ ಸಂಘದ ಉಪಾಧ್ಯಕ್ಷ ಶ್ರೀಶೈಲ ನಂದಿಕೋಲ ಸೇರಿದಂತೆ ಭಕ್ತರು ಭಾಗವಹಿಸಿದ್ದರು.