ಬಲ್ಡೋಟಾ ಸೇರಿ ಮಾರಕ ಕಾರ್ಖಾನೆಗಳಿಗೆ ಬೀಗ ಹಾಕುವವರೆಗೆ ವಿರಮಿಸಲ್ಲ!

We will not rest until the deadly factories, including Baldota, are locked down!

ಬಲ್ಡೋಟಾ ಸೇರಿ ಮಾರಕ ಕಾರ್ಖಾನೆಗಳಿಗೆ ಬೀಗ ಹಾಕುವವರೆಗೆ ವಿರಮಿಸಲ್ಲ! 

ಕೊಪ್ಪಳ 04: ನಗರಕ್ಕೆ ಹೊಂದಿಕೊಂಡು ಮೋಸದಿಂದ ಬಂದಿರುವ ಹೆಸರು ಬದಲಿಸಿಕೊಂಡಿರುವ ಬಲ್ಡೋಟಾದ ಎಂಎಸ್‌ಪಿಲ್ ನ ಬಿಎಸ್‌ಪಿಎಲ್ ಕಾರ್ಖಾನೆ ಸೇರಿದಂತೆ ಜನರಿಗೆ ಮಾರಕವಾಗಿರುವ ಎಲ್ಲಾ ಕಂಪನಿಗಳನ್ನು ಕೊಪ್ಪಳ ಬಿಟ್ಟು ತೊಲಗಿಸುವವರೆಗೆ ವಿರಮಿಸುವದಿಲ್ಲ ಎಂಬ ನಿರ್ಣಯದೊಂದಿಗೆ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಕರೆ ನೀಡಿದ್ದ ಹೋರಾಟದ ರೂಪರೇಷೆ ಸಭೆ ಯಶಸ್ವಿಯಾಯಿತು. 

ಇಲ್ಲಿನ ಶ್ರೀ ಮಹಾಂತಯ್ಯನಮಠ ಕಲ್ಯಾಣ ಮಂಟಪದಲ್ಲಿ ಕರೆದಿದ್ದ ಬಲ್ಡೋಟಾದ ಎಂಎಸ್‌ಪಿಲ್ ನ ಬಿಎಸ್‌ಪಿಎಲ್ ಕಾರ್ಖಾನೆ ವಿರುದ್ಧ ಹೋರಾಟದ ರೂಪರೇಷೆ ಸಿದ್ದಪಡಿಸುವ ಸಭೇಯಲ್ಲಿ ವ್ಯಕ್ತವಾದ ಅಭಿಪ್ರಾಯಗಳನ್ನು ಕ್ರೋಢೀಕರಿಸಿ ಅಂತಿಮ ನಿರ್ಣಯ ತೆಗೆದುಕೊಂಡಿದ್ದು ಎಲ್ಲಾ ಬೆಯ ಹೋರಾಟಕ್ಕೆ ಕೊಪ್ಪಳ ಮತ್ತು ಭಾದಿತ ಪ್ರದೇಶದ ಜನರನ್ನು ಸಜ್ಜುಗೊಳಿಸಲು ನಿರ್ಣಯ ತೆಗೆದುಕೊಳ್ಳಲಾಯಿತು. 

ಪ್ರಮುಖವಾಗಿ ಪ್ರತಿ ವಾರ್ಡಲ್ಲಿ ಪರಿಸರ ಜಾಗೃತಿ ಸಭೆ ನಡೆಸುವದು ಅದರಲ್ಲಿ ಕೊಪ್ಪಳದ 31 ಮತ್ತು ಭಾಗ್ಯನಗರದ 19 ಹಾಗೂ ಸುಮಾರು 30 ಗ್ರಾಮಗಳಲ್ಲಿ ಸಭೆ ನಡೆಸುವದು. ನಗರದ ಅಶೋಕ ವೃತ್ತದಲ್ಲಿ ನಿರಂತರ ಧರಣಿ ಸತ್ಯಾಗ್ರಹ ಹಮ್ಮಿಕೊಂಡು ಪ್ರತಿಯೊಂದು ಸಂಘಟನೆಗಳನ್ನು ಅದರಲ್ಲಿ ತೊಡಗಿಸಿಕೊಳ್ಳುವದು. ಕ್ಷೇತ್ರದ ಸುಮಾರು 35 ಸಾವಿರ ಕುಟುಂಬಗಳಿಂದ ಪ್ರತಿ ಕುಟುಂಬದಿಂದ ರಾಷ್ಟ್ರಪತಿಗಳು, ಪರಿಸರ ಸಚಿವಾಲಯ ಮತ್ತು ಹಸಿರು ನ್ಯಾಯಾಧಿಕರಣಕ್ಕೆ ಒಟ್ಟು ಮೂರರಂತೆ ಒಂದು ಲಕ್ಷ ಪತ್ರ ಬರೆಸುವ ಮೂಲಕ ಪತ್ರ ಚಳುವಳಿ ನಡೆಸುವದು. ನಂತರ ಹೋರಾಟದ ಮುಖ್ಯ ನೇತೃತ್ವವನ್ನು ಗವಿಮಠದ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ವಹಿಸಿಕೊಳ್ಳುವಂತೆ ಮತ್ತು ಜಿಲ್ಲೆಯ ಎಲ್ಲಾ ಮಠಾದೀಶರು ಭಾಗವಹಿಸುವಂತೆ ಮನವಿ ಸಲ್ಲಿಸುವದು ಸೇರಿದಂತೆ ನಿರಂತರ ಜನಹೋರಾಟವಾಗಿ ರೂಪಿಸಿ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿರ್ಣಯ ಅಂಗೀಕರಿಸಲಾಯಿತು. 

ಪರಿಸರಕ್ಕಾಗಿ ನಾವು ಸಂಘಟನೆಯ ರಾಜ್ಯ ಕಾರ್ಯದರ್ಶಿ ಕಾಶಿನಾಥ ಪಾಟೀಲ್, ಹೋರಾಟಗಾರ ಜನಾರ್ಧನ, ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಪ್ರಧಾನ ಸಂಚಾಲಕ ಪ್ರೊ. ಅಲ್ಲಮಪ್ರಭು ಬೆಟ್ಟದೂರು, ಹಿರಿಯ ವಕೀಲರಾದ ರಾಜು ಬಾಕಳೆ ಮತ್ತು ಪೀರಾಹುಸೇನ್ ಹೊಸಳ್ಳಿ, ಹಿರಿಯ ಪತ್ರಕರ್ತ ಸೋಮರಡ್ಡಿ ಅಳವಂಡಿ, ವರ್ತಕರಾದ ಪ್ರಭು ಹೆಬ್ಬಾಳ ಮತ್ತು ಬಸವರಾಜ ಬಳ್ಳೊಳ್ಳಿ, ರೈತ ಮುಖಂಡರಾದ ನಜೀರ್‌ಸಾಬ್ ಮೂಲಿಮನಿ ಮತ್ತು ಹನುಮಂತಪ್ಪ ಹೊಳೆಯಾಚೆ, ವಕೀಲ ಶಿವಾನಂದ ಹೊಸಮನಿ ಮತ್ತು ಬಿ.ಎಸ್‌. ವೀರಾಪೂರ, ಸಾವಿತ್ರಿ ಮುಜುಂದಾರ, ಸಂಘಟಕರಾದ ಬಸವರಾಜ ಶೀಲವಂತರ, ಮಹಾಂತೇಶ ಕೊತಬಾಳ, ಡಿ.ಎಚ್‌.ಪೂಜಾರ, ಮಂಜುನಾಥ ಜಿ. ಗೊಂಡಬಾಳ, ಶರಣು ಗಡ್ಡಿ, ಸಂತೋಷ ದೇಶಪಾಂಡೆ, ಶರಣು ಪಾಟೀಲ ಇತರರು ಮಾತನಾಡಿ, 

ಗವಿಶ್ರೀ ನೇತೃತ್ವದಲ್ಲಿ ಎಲ್ಲ ಮಠಾಧೀಶರು 10 ಸಾವಿರ ಜನರೊಂದಿಗೆ ಕಂಪನಿಯನ್ನು ಲಾಕ್ ಮಾಡಿ ಹೋರಾಟ ಮಾಡಬೇಕು. ಪ್ರಗತಿಪರರು, ಶಿಕ್ಷಣ ಸಂಸ್ಥೆಗಳು, ವಕೀಲರು, ವೈದ್ಯರು, ಮಹಿಳಾ ಸಂಘಟನೆಗಳು ಒಂದೊಂದು ದಿನ ನಿರಂತರವಾಗಿ ಹೋರಾಟ ಮಾಡಬೇಕು. ಕ್ರಾಂತಿಯ ಮೂಲಕ ಹೋರಾಟ ಮಾಡೋಣ. ಅಕ್ರಮವಾಗಿ ಹಾಕಿದ ಕಂಪೌಂಡ್ ಒಡೆಯುವದು ಸೇರಿದಂತೆ ಏಳೆಂಟು ತಂಡಗಳನ್ನು ಮಾಡಿ ಜೈಲ್ ಭರೋ ಕಾರ್ಯಕ್ರಮ ಸೇರಿ ಎಲ್ಲ ಬೆಯ ಹೋರಾಟದ ಅಸ್ತ್ರಗಳನ್ನು ಪ್ರಯೋಗಿಸಲು ನಿರ್ಧರಿಸಲಾಗಿದೆ. ಜನರ ದೇಣೀಉಗೆ ಮೂಲಕ ಹೋರಾಟ ಕಟ್ಟಿ ಜನಹೋರಾಟವಾಗಿಸಲು ಶೀಘ್ರ ದಿನಾಂಕ ಗೊತ್ತುಪಡಿಸಿ ಪ್ರಮುಖರ ಸಭೆ ಮಾಡಿ ಹೋರಾಟಕ್ಕೆ ಅಣಿಯಾಗಲು ಸಲಹೆ ನೀಡಿದರು. 

ಈ ವೇಳೆ ಪ್ರಮುಖರಾದ ಅಂದಣ್ಣ ಅಗಡಿ, ಸಿದ್ದಣ್ಣ ನಾಲ್ವಾಡ, ಡಾ. ಚಂದ್ರಶೇಖರ ಕರಮುಡಿ, ಮಹಾಂತೇಶ ಮಲ್ಲನಗೌಡರ್, ಶರಣು ಡೊಳ್ಳಿನ, ಕಾಶಪ್ಪ ಛಲವಾದಿ, ಬಿ. ಜಿ. ಕರಿಗಾರ, ವೈ.ಬಿ. ಬಂಡಿ, ನಿವೃತ್ತ ಪ್ರಾಂಶುಪಾಲ ರಾಜೂರ, ವಿಪಿನ್ ತಾಲೇಡಾ, ಮುದುಕಪ್ಪ, ರವಿ ಕಾಂತನವರ, ಮೌನೇಶ ಬಡಿಗೇರ ಸೇರಿ ಅನೇಕರು ಇದ್ದರು. ಬಸವರಾಜ ಶರಣು ಗಡ್ಡಿ ಕ್ರಾಂತಿ ಗೀತೆ ಹಾಡಿದರು, ಸಮಿತಿಯ ಸಂಚಾಲಕ ಡಿ. ಹೆಚ್‌. ಪೂಜಾರ ಸ್ವಾಗತಿಸಿದರು, ಸಮಿತಿ ಪ್ರಧಾನ ಸಂಚಾಲಕ ಪ್ರೊ. ಅಲ್ಲಮಪ್ರಭು ಬೆಟ್ಟದೂರು ಪ್ರಾಸ್ತಾವಿಕವಾಗಿ ಮಾತನಾಡಿದರು, ಸಂಚಾಲಕ ಮಂಜುನಾಥ ಜಿ. ಗೊಂಡಬಾಳ ಕಾರ್ಯಕ್ರಮ ನಿರ್ವಹಸಿದರು, ಸಂಚಾಲಕ ಕೆ. ಬಿ. ಗೋನಾಳ ನಿರ್ಣಯ ಮಂಡಿಸಿ, ವಂದಿಸಿದರು.