ಬೆಳಗಾವಿ: 14ನೇ ಹಣಕಾಸು ಹಾಗೂ ಉಳಿತಾಯದ ಹಣದಲ್ಲಿ ಕಾಮಗಾರಿಗಳಿಗೆ ಸೂಚನೆ

ಲೋಕದರ್ಶನ ವರದಿ

ಬೆಳಗಾವಿ 17:  14ನೇ ಹಣಕಾಸು ಯೋಜನೆಯಲ್ಲಿ ನಗರದ ಪ್ರತಿ ವಾರ್ಡಗಳಿಗೆ ರೂ. 20 ಲಕ್ಷದಂತೆ ಅಭಿವೃದ್ಧಿ ಕಾಮಗಾರಿಗಳನ್ನು ಹಂಚಿಕೆ ಮಾಡಲಾಗಿದೆ. ಹಂಚಿಕೆ ಮಾಡಲಾದ ಕಾಮಗಾರಿಗಳನ್ನು ಶೀಘ್ರವಾಗಿ ಕೈಗೆತ್ತಿಕೊಂಡು ಮುಕ್ತಾಯಗೊಳಿಸಲು ಅಧಿಕಾರಿಗಳಿಗೆ ಶಾಸಕ ಅನಿಲ ಬೆನಕೆ ತಿಳಿಸಿದ್ದಾರೆ. ಇಂದು ಮಹಾನಗರ ಪಾಲಿಕೆಯಲ್ಲಿ ನಡೆದ ಅಧಿಕಾರಿಗಳ ಸಭೆ ನಡೆಸಿದ ಅವರು ಯೋಜನೆ ಉಳಿತಾಯದ ಸುಮಾರು 10 ಕೋಟಿ  ಹಣದಲ್ಲಿ ನಗರದ ವಾರ್ಡಗಳಿಗೆ ಅಭಿವೃದ್ಧಿ ಕಾರ್ಯಗಳಿಗೆ ಹಣ ಹಂಚಿಕೆ ಮಾಡಲಾಗಿದ್ದು, ಕಾಮಗಾರಿಗಳನ್ನು ಶೀಘ್ರವಾಗಿ ಅಧಿಕಾರಿಗಳು ಮಾಡಬೇಕು ಎಂದರು. 

ಮಾನ್ಸೂನ್ನಲ್ಲಿ ತೊಂದರೆಯಾಗದಂತೆ ನಗರದ ಎಲ್ಲ ಗಟಾರುಗಳು, ನಾಲೆಗಳು ಸ್ವಚ್ಛವಾಗಬೇಕು ಎಂದು ಶಾಸಕರು ಸೂಚಿಸಿದ್ದು, ಮಳೆಯಿಂದ ಜನರಿಗೆ ಅನಾನುಕೂಲವಾದರೆ ಅಧಿಕಾರಿಗಳನ್ನೇ ಹೊಣೆ ಮಾಡಲಾಗುವುದು ಎಂದು ಶಾಸಕ ಅನಿಲ ಬೆನಕೆ ಎಚ್ಚರಿಸಿದ್ದಾರೆ. ಮಳೆಗಾಲದಲ್ಲಿ ಗಟಾರುಗಳು ತುಂಬಿ, ರಸ್ತೆಗಳಲ್ಲಿ ನೀರು ನಿಂತು ಅಪಾರ ತೊಂದರೆಯಾಗುತ್ತಿದೆ. ಸೊಳ್ಳೆಗಳ ನಿಯಂತ್ರಣ ಮಾಡಬೇಕಾದ ಅನಿವಾರ್ಯತೆ ಇದೆ, ಈ ಬಗ್ಗೆ ಹಲವು ದೂರುಗಳನ್ನು ಜನರಿಂದ ಸ್ವೀಕರಿಸಿದ್ದು ಯಾವುದೇ ತೊಂದರೆಯಾಗದಂತೆ ನಗರದಲ್ಲಿ ವ್ಯವಸ್ಥೆಯಾಗಬೇಕು, ಪಾಲಿಕೆ ಆಡಳಿತ ಸಜ್ಜಾಗಬೇಕು ಎಂದು ಶಾಸಕರು ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.