ಭಾರತದಲ್ಲಿದ್ದ 210 ಆಸ್ಟ್ರೇಲಿಯಾ ಪ್ರಜೆಗಳು ಸಿಡ್ನಿಗೆ ಪ್ರಯಾಣ

ಚೆನ್ನೈ, ಮೇ 20, ಕೊರೊನಾ ಹಿನ್ನೆಲೆಯಲ್ಲಿ ದಕ್ಷಿಣ ಭಾರತದ ವಿವಿಧ  ರಾಜ್ಯಗಳಲ್ಲಿ ಸಿಕ್ಕಿಹಾಕಿಕೊಂಡಿದ್ದ 210 ಆಸ್ಟ್ರೇಲಿಯಾ ದೇಶದ ಪ್ರಜೆಗಳು ವಿಶೇಷ  ವಿಮಾನದಲ್ಲಿ ಚೆನ್ನೈನ ಅಣ್ಣಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸಿಡ್ನಿಗೆ ಇಂದು  ಪ್ರಯಾಣಿಸಲಿದ್ದಾರೆ.ವಿಮಾನ ನಿಲ್ದಾಣದ ಮೂಲಗಳ ಪ್ರಕಾರ ಆಸ್ಟ್ರೇಲಿಯ ದೇಶದ ಪ್ರಜೆಗಳಲ್ಲಿ 62 ಪುರುಷರು, 78  ಮಹಿಳೆಯರು, 48 ಮಕ್ಕಳು, ಹಾಗೂ 22 ಶಿಶುಗಳು ಪ್ರಯಾಣ ಬೆಳೆಸಿದ್ದಾರೆ. ಅವರೆಲ್ಲರೂ ತಮಿಳುನಾಡು, ಕೇರಳ ಆಂಧ್ರಪ್ರದೇಶ ಹಾಗೂ  ಕೇಂದ್ರಾಡಳಿತ ಪ್ರದೇಶವಾದ ಪಾಂಡಿಚೇರಿಯಲ್ಲಿ ಲಾಕ್‌ಡೌನ್‌ನಿಂದಾಗಿ ಸಿಲುಕಿಕೊಂಡಿದ್ದರು.

ಅವರಲ್ಲಿ  ಕೆಲವರು ಕಾರ್ಪೋರೇಟ್‌ ಸಂಸ್ಥೆಗಳಲ್ಲಿ ದುಡಿಯುತ್ತಿರುವವರು, ಕೆಲವರು ಶೈಕ್ಷಣಿಕ ಹಾಗೂ ಪ್ರವಾಸಿ  ವೀಸಾಗಳಲ್ಲಿ ಬಂದವರಾಗಿದ್ದರು.ಈ ಬಗ್ಗೆ ಭಾರತದ ಆಸ್ಟ್ರೇಲಿಯಾ ರಾಯಭಾರ ಕಚೇರಿ ಕೇಂದ್ರ ಸರ್ಕಾರದ ಗಮನ ಸೆಳೆದ ನಂತರ ಅವರಿಗೆ ಅವರ ದೇಶಕ್ಕೆ ಪ್ರಯಾಣಿಸಲು ವ್ಯವಸ್ಥೆ ಮಾಡಲಾಗಿದೆ. ರಾಯಭಾರ ಕಚೇರಿಯ ಅಧಿಕಾರಿಗಳು ವಿಶೇಷ ವಿಮಾನ ಹಾರಾಟಕ್ಕೆ ಅನುಮತಿ ಪಡೆದ ನಂತರ ನಿನ್ನೆ ಸಂಜೆ ಮೆಲ್ಬೋರ್ನ್‌ನಿಂದ ವಿಮಾನ ಭಾರತಕ್ಕೆ ಬಂದಿತ್ತು.ಭಾರತದಲ್ಲಿ ಸಿಲುಕಿಕೊಂಡಿದ್ದ ಎಲ್ಲ ಪ್ರಯಾಣಿಕರನ್ನು ವಿಮಾನ ನಿಲ್ದಾಣಕ್ಕೆ ಕರೆತರಲಾಯಿತುಅಲ್ಲಿ ಅವರ ವೈದ್ಯಕೀಯ ಪರೀಕ್ಷೆ ನಡೆಸಿದ ಬಳಿಕ ಮಧ್ಯಾಹ್ನ ಮೂರು ಗಂಟೆಗೆ ವಿಮಾನ ಸಿಡ್ನಿಗೆ ಹೊರಟಿದೆ.