ರಾಯಬಾಗ 13: ಸಮಾಜವನ್ನು ಕಟ್ಟುವ ಕೆಲಸ ಮಾಡುತ್ತಿರುವ ಮಠಮಾನ್ಯಗಳ ಜೊತೆಗೆ ಎಲ್ಲರೂ ಕೈಜೋಡಿಸಬೇಕೆಂದು ಬಿಳಗಿ ಕೃಷಿ ಪಂಡಿತ ಸಿದ್ದಪ್ಪ ಬಿದರಿ ಹೇಳಿದರು.
ಶನಿವಾರ ತಾಲೂಕಿನ ನಂದಿಕುರಳಿ ಗ್ರಾಮದ ಪಂಚಲಿಂಗೇಶ್ವರ ಮಠದಲ್ಲಿ ಹಮ್ಮಿಕೊಂಡಿದ್ದ 38ನೇ ಶರಣ ಸಂಸ್ಕೃತಿ ಉತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇಂದಿನ ರೈತರು ಹಣದ ವ್ಯಾಮೋಹಕ್ಕೆ ಒಳಗಾಗಿ, ಬೆಳೆಗಳಿಗೆ ವಿಷಯುಕ್ತ ರಾಸಾಯನಿಕ ಹಾಕಿ ಭೂಮಾತೆಗೆ ವಿಷ ಉಣ್ಣಿಸುವ ಕಾರ್ಯದಲ್ಲಿ ತೊಡಗಿರುವುದು ಅತ್ಯಂತ ಖೇದಕವಾಗಿದೆ. ಭೂಮಿ ಇದ್ದರೆ ರೈತ ಉಳಿಯುತ್ತಾನೆ, ರೈತ ಉಳಿದರೆ ಈ ಜಗತ್ತು ಉಳಿಯಲು ಸಾಧ್ಯವೆಂದು ಹೇಳಿದರು. ಜಗತ್ತಿಗೆ ಅನ್ನ ನೀಡುವ ರೈತರಿಗೆ ಹೆಣ್ಣು ಕೊಡಲು ಹಿಂದೆ ಮುಂದೆ ನೋಡುತ್ತಿರುವುದು ಶೋಚನೀಯ ವಿಷಯವಾಗಿದೆ ಎಂದರು.
ಮೊಳವಾಡದ ಹರಿಭಕ್ತ ಸುಭಾಷ ಶೇವಾಳಗಿ ಮಾತನಾಡಿ, ಜಗತ್ತಿನ ಕಲ್ಯಾಣಕ್ಕಾಗಿ ಶ್ರೀಗಳು ಶರಣ ಸಂಸ್ಕೃತಿ ಉತ್ಸವ ಹಮ್ಮಿಕೊಂಡಿರುವುದು ಅತ್ಯಂತ ಸಂತೋಷದ ವಿಷಯ. ಸಕಲ ಜೀವರಾಶಿಗಳಿಗೆ ಆಶ್ರಯವಾಗಿರುವ ಭೂಮಾತೆಯನ್ನು ಸಂರಕ್ಷಿಸುವ ಕೆಲಸ ಎಲ್ಲರೂ ಕೂಡಿ ಮಾಡಬೇಕಾಗಿದೆ. ಮಣ್ಣಿನಲ್ಲಿ ಹೊನ್ನು ಬೆಳೆಯಬಹುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪಂಚಲಿಂಗೇಶ್ವರ ಮಠದ ವೀರಭದ್ರ ಸ್ವಾಮೀಜಿ, ಓಂಕಾರ ಆಶ್ರಮದ ಶಿವಶಂಕರ ಸ್ವಾಮೀಜಿ, ಭೃಮರಾಂಬಿಕಾ ಶಿವಯೋಗಿ, ಜೆಡಿಎಸ್ ರಾಷ್ಟ್ರೀಯ ಉಪಾಧ್ಯಕ್ಷ ಪ್ರತಾಪರಾವ ಪಾಟೀಲ, ವಕೀಲರಾದ ಎಲ್.ಬಿ.ಚೌಗಲಾ, ಷಣ್ಮುಖ ಮಾಳಿ ಸೇರಿ ಅನೇಕ ಭಕ್ತಾದಿಗಳು ಇದ್ದರು.