ಯಡ್ರಾವ ಶಾಲೆಯ ಕೊಠಡಿಗಳ ನಿರ್ಮಾಣಕ್ಕೆ ಎಕ್ಸಿಸ್ ಬ್ಯಾಂಕ್ 50 ಲಕ್ಷ ರೂ. ಸಹಾಯ
ಬೆಳಗಾವಿ 17: ಕೆಎಲ್‌ಇ ಸಂಸ್ಥೆಯು ಶೈಕ್ಷಣಿಕ ಆರೋಗ್ಯ ಸೇವೆಗಳ ಮೂಲಕ ಇಂದು ಜಾಗತಿಕವಾಗಿ ಗುರುತಿಸಿಕೊಂಡಿದೆ. ದಾನಿಗಳು ಹಾಗೂ ಮಹಾದಾನಿಗಳಿಂದ ಬೆಳೆದುನಿಂತಿದೆ. ಈ ನಿಟ್ಟಿನಲ್ಲಿ ಕಾರ್ೋರೇಟ ಕಂಪನಿಗಳು ತಮ್ಮ ಸಾಮಾಜಿಕ ಬದ್ಧತಾ ನಿಧಿಯಡಿ ಶಾಲೆಗಳನ್ನು ಅಭಿವೃದ್ಧಿ ಪಡಿಸಲು ಆರ್ಥಿಕ ಸಹಾಯ ನೀಡಬೇಕು. ಮುಖ್ಯವಾಗಿ ಶಾಲಾ ಕಟ್ಟಡಗಳ ನಿರ್ಮಾಣಕ್ಕೆ ಹಾಗೂ ಅಗತ್ಯ ಮೂಲಭೂತ ಸೌಲಭ್ಯಗಳಿಗೆ ಆರ್ಥಿಕ ಸಹಾಯ ಒದಗಿಸಬೇಕು. ಇಂದು ಎಕ್ಸಿಸ್ ಬ್ಯಾಂಕ್ 50 ಲಕ್ಷ ರೂ.ಗಳ ಸಹಾಯವನ್ನು ರಾಯಬಾಗದಲ್ಲಿರುವ ಕನ್ನಡ ಮಾಧ್ಯಮ ಶಾಲೆಗೆ ನೀಡಿರುವುದಕ್ಕೆ ಸಂಸ್ಥೆಯು ಕೃತಜ್ಞತೆಯನ್ನು ಸಲ್ಲಿಸುತ್ತದೆ ಎಂದು ಡಾ. ಪ್ರಭಾಕರ ಕೋರೆ ಹೇಳಿದರು.
ಗ್ರಾಮೀಣ ಭಾಗದ ಕನ್ನಡ ಶಾಲೆಗಳ ನಿರ್ಮಾಣಕ್ಕೆ ಎಕ್ಸಿಸ್ ಬ್ಯಾಂಕ ಕೈ ಜೋಡಿಸಿದ್ದು, ಜಿಲ್ಲೆಯ ರಾಯಭಾಗ ತಾಲೂಕಿನ ಯಡ್ರಾವ ಗ್ರಾಮದ ಕನ್ನಡ ಶಾಲೆಯ 6 ಕೊಠಡಿಗಳ ನಿರ್ಮಾಣಕ್ಕೆ ಸುಮಾರು 50 ಲಕ್ಷ ರೂ.ಗಳನ್ನು ಸಾಮಾಜಿಕ ಬದ್ದತಾ ನಿಧಿ ಯೋಜನೆಯಡಿ ನೀಡಿದ್ದು ಎಕ್ಸಿಸ್ ಬ್ಯಾಂಕ ಅಧ್ಯಕ್ಷ ಪ್ರಶಾಂತ ಶ್ರೀನಿವಾಸ ಅವರಿಂದ ಚೆಕ್ ಸ್ವೀಕರಿಸಿ ಮಾತನಾಡಿದ ಅವರು ಕಟ್ಟಡದ ಕಾಮಗಾರಿಯು ಪ್ರಗತಿ ಹಂತದಲ್ಲಿದೆ ಎಂದರು.
ಈ ಭಾಗದ ಸುತ್ತಮುತ್ತಲಿನ ರೈತರು ಮತ್ತು ಕಾರ್ಮಿಕರ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ಪಡೆಯುವಲ್ಲಿ ಈ ಶಾಲೆಯಿಂದ ಅನುಕೂಲವಾಗುವುದು. ಕೆಎಲ್‌ಇ ಸಂಸ್ಥೆಯು ಇಂದು ಗುಣಾತ್ಮಕವಾದ ಶಿಕ್ಷಣವನ್ನು ನೀಡುತ್ತಿದ್ದರೆ ಅದರ ಶಿಕ್ಷಣ ಸಂಸ್ಥೆಗಳಲ್ಲಿ ಸೌಕಯ್ಯಗಳು ಅತ್ಯುನ್ನತವಾಗಿವೆ. ಆರ್ಥಿಕವಾಗಿ ಒಂದು ನೆಲೆಯಲ್ಲಿ ಗಟ್ಟಿಯಾಗಿದ್ದರೂ ಮತ್ತೊಂದು ನೆಲೆಯಲ್ಲಿ ಹಲವು ತೊಂದರೆಗಳನ್ನು ಸರಿದೂಗಬೇಕಾಗುತ್ತದೆ. ಈ ನಿಟ್ಟಿನಲ್ಲಿ ಇಂತಹ ಕಾರ್ೋರೇಟ್ ಕಂಪನಿಗಳ ಕೊಡುಗೆಯನ್ನು ಮರೆಯಲಾಗುವುದಿಲ್ಲ ಎಂದು ಸ್ಮರಿಸಿದರು.
ಇತ್ತೀಚಿಗೆ ಕೆಎಲ್‌ಇ ಕ್ಯಾನ್ಸರ್ ಆಸ್ಪತ್ರೆಯ ನಿರ್ಮಾಣಕ್ಕೆ ಅಥಣಿ ಮೂಲದ ಶಿವಣಗಿ ದಂಪತಿಗಳು ಬೃಹತ್ದಾನವನ್ನು ನೀಡಿ ಆರೋಗ್ಯಸೇವೆಗೆ ಕೈಜೋಡಿಸಿದ್ದನ್ನು ಮರೆಯುವುದಿಲ್ಲ. ಕಾಳುಕಡಿ ಮಾರಿ ಜೀವನ ನಡೆಸುತ್ತಿದ್ದ ಅಥಣಿ ನೀಲವ್ವ ಗಂಗಾವತಿಯ 50 ಸಾವಿರ ರೂ.ಗಳ ದಾನವು ಕೆಎಲ್‌ಇ ಸಂಸ್ಥೆಗೆ ಬಹುದೊಡ್ಡದು ಎಂದು ಸ್ಮರಿಸಿದರು. ಇಂದು ಕೆಎಲ್‌ಇ ಸಂಸ್ಥೆಯು ಗ್ರಾಮೀಣ ಭಾಗದಲ್ಲಿ ಭಾಗಶಃ ಅಂಗಸಂಸ್ಥೆಗಳನ್ನು ಮುನ್ನಡೆಸುತ್ತಿದೆ. ಅಷ್ಟೇ ಅಲ್ಲದೆ ಆರೋಗ್ಯ ಸೇವೆಗಳನ್ನು ಗ್ರಾಮೀಣ ಭಾಗದಲ್ಲಿ ವಿಸ್ತರಿಸಿದೆ. ಭವಿಷ್ಯತ್ತಿನಲ್ಲಿ ಅದನ್ನು ಇನ್ನೂ ಹೆಚ್ಚು ಮುಂದುವರೆಸಲಾಗುವದು. ಹುಬ್ಬಳ್ಳಿಯಲ್ಲಿ ಸಾವಿರ ಹಾಸಿಗೆಗಳ ಆಸ್ಪತ್ರೆ ಸಿದ್ಧಗೊಳ್ಳುತ್ತಿದೆ, ಪುಣೆಯಲ್ಲಿ ಈಗಾಗಲೇ 300 ಹಾಸಿಗೆಗಳ ಆಸ್ಪತ್ರೆ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.
ಎಕ್ಸಿಸ್ ಬ್ಯಾಂಕ ಅಧ್ಯಕ್ಷ ಪ್ರಶಾಂತ ಶ್ರೀನಿವಾಸ ಅವರು ಮಾತನಾಡಿ, ಸ್ಥಳೀಯ ಭಾಷೆಗಳ ಶಾಲಾ ಕಟ್ಟಡಕ್ಕೆ ಅನುದಾನ ನೀಡುತ್ತಿರುವದು ನಮಗೆ ತುಂಬಾ ಸಂತೋಷವಾಗುತ್ತಿದೆ. ಅದರಲ್ಲಿಯೂ ಮುಖ್ಯವಾಗಿ ಗ್ರಾಮೀಣ ಭಾಗದ ಶಾಲೆಗಳ ಕೊಠಡಿ ಕಟ್ಟಡ ನಿರ್ಮಾಣಕ್ಕೆ ಅನುದಾನ ಕಡಿಮೆ. ಆದರೆ ಅದೇ ನಗರ ಪ್ರದೇಶಗಳಲ್ಲಿ ಶಾಲೆಯ ಮೂಲಭೂತ ಸೌಲಭ್ಯಗಳಿಗೆ ಅಧಿಕ ವೆಚ್ಚ ಮಾಡಲಾಗುತ್ತದೆ. ಆದರೆ ಗ್ರಾಮೀಣ ಶಾಲೆಗಳಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಎದ್ದು ಕಾಣುತ್ತದೆ. ಅದನ್ನು ಹೋಗಲಾಡಿಸಲು ಗ್ರಾಮೀಣ ಭಾಗದ ಶಾಲೆಗಳಿಗೆ ಅದರಲ್ಲಿಯೂ ಮುಖ್ಯವಾಗಿ ಸ್ಥಳೀಯ ಭಾಷಾ ಶಾಲೆಗಳಿಗೆ ಆದ್ಯತೆ ನೀಡಲು ಪ್ರಯತ್ನಿಸಲಾಗುತ್ತದೆ ಎಂದು ಅವರು ಹೇಳಿದರು.
ಕೆಎಲ್‌ಇ ಸಂಸ್ಥೆಯ ಬ್ಯಾಂಕಿಂಗ ವ್ಯವಹಾರಗಳ ನಿರ್ದೇಶಕ ಬಸವರಾಜ ಜೇವರ್ಗಿಕರ ಅವರು ಮಾತನಾಡಿ, ಸಂಸ್ಥೆಯ ವ್ಯವಹಾರ ಹಾಗೂ ಸಶಕ್ತ ಆಡಳಿತ ಮಂಡಳಿಯಿಂದಾಗಿ ಎಕ್ಸಿಸ್ ಬ್ಯಾಂಕನೊಂದಿಗಿನ ಸಂಬಂಧಗಟ್ಟಿಯಾಗಿದೆ. ಶಿಕ್ಷಣಕ್ಕೆ ಆದ್ಯತೆ ನೀಡುವದಕ್ಕಾಗಿ ಬ್ಯಾಂಕ ಸಾಮಾಜಿಕ ಬದ್ದತಾ ನಿಧಿಯಡಿ 50 ಲಕ್ಷ ರೂ.ಗಳನ್ನು ಶಾಲಾ ಕಟ್ಟಡ ನಿರ್ಮಾಣಕ್ಕೆ ನೀಡಿದೆ. ಅಲ್ಲದೇ ಸಾಮಾಜಿಕ ಬದ್ದತಾ ಯೋಜನೆಯು ಕಾನೂನುಬದ್ದವಾಗಿದ್ದು, ಇದರಡಿ ಸಾಮಾಜಿಕ ಕಾರ್ಯಗಳನ್ನು ಕೈಕೊಳ್ಳಲು ಅನುಕೂಲವಾಗುತ್ತಿದೆ ಎಂದು ತಿಳಿಸಿದರು.
ಹಿರಿಯ ಉಪಾಧ್ಯಕ್ಷ ಅವಧೂತ್ ದೀಕ್ಷಿತ್, ಕೆಎಲ್‌ಇ ಸಂಸ್ಥೆಯ ಕಾರ್ಯದರ್ಶಿ ಡಾ.ಬಿ.ಜಿ.ದೇಸಾಯಿ ಉಪಸ್ಥಿತರಿದ್ದರು. ಕೆಎಲ್‌ಇ ಸಂಸ್ಥೆಯ ಆರ್ಥಿಕ ಸಲಹೆಗಾರರಾದ ಬಸವರಾಜ ಜೇವರ್ಗಿಕರ ಮಾಹಿತಿಯನ್ನು ಹಂಚಿಕೊಂಡರು. ಕೆಎಲ್‌ಇ ಆಜೀವ ಸದಸ್ಯರಾದ ಮಹಾದೇವ ಬಳಿಗಾರ ನಿರೂಪಿಸಿ ವಂದಿಸಿದರು.