ಶರಣರ ವೈಭವ ರಥಯಾತ್ರೆಗೆ ಭವ್ಯ ಸ್ವಾಗತ
ದೇವರಹಿಪ್ಪರಗಿ 25: ವಿಶ್ವಗುರು ಬಸವಣ್ಣನವರ ಬದುಕು, ಸಂದೇಶ ಮತ್ತು ಚಿಂತನೆ ಪ್ರಚುರ ಪಡಿಸುವ ನಿಟ್ಟಿನಲ್ಲಿ ಸರ್ಕಾರ ಹಮ್ಮಿಕೊಂಡಿರುವ ಅನುಭವ ಮಂಟಪ ಬಸವಾದಿ ಶರಣರ ವೈಭವ ರಥಯಾತ್ರೆ ಏ. 17ರಿಂದ 29ರ ವರೆಗೆ ರಾಜ್ಯದಾದ್ಯಂತ ಸಂಚರಿಸಿ ಏಪ್ರಿಲ್ 29, 30ರಂದು ಕೂಡಲಸಂಗಮದಲ್ಲಿ ಆಯೋಜಿಸಿರುವ ಅನುಭವ ಮಂಟಪ-ಬಸವಾದಿ ಶರಣ ವೈಭವ ಕಾರ್ಯಕ್ರಮ ಅಂಗವಾಗಿ ರಥೆಯಾತ್ರೆ ನಡೆಯುತ್ತಿದೆ.
ಶುಕ್ರವಾರದಂದು ಸಿಂದಗಿ ತಾಲೂಕಿನಿಂದ ದೇವರಹಿಪ್ಪರಗಿ ತಾಲೂಕಿನ ಬಮ್ಮನಜೋಗಿ ಕ್ರಾಸ್ ಹತ್ತಿರ ತಹಸೀಲ್ದಾರ್ ಪ್ರಕಾಶ ಸಿಂದಗಿ ಅವರು ಸ್ವಾಗತಿಸಿ ಪಟ್ಟಣದ ಮಲ್ಲಯ್ಯನ ದೇವಸ್ಥಾನದಿಂದ ಮೊಹರೆ ವೃತ್ತದ ಮೂಲಕ ಬಸವನ ಬಾಗೇವಾಡಿ ಮಾರ್ಗವಾಗಿ ಸಾತಿಹಾಳ ಗ್ರಾಮದ ಬಳಿ ಬೀಳ್ಕೊಟ್ಟರು.
ಪಟ್ಟಣದ ಮೊಹರೆ ವೃತ್ತದಲ್ಲಿ ಮಾತನಾಡಿದ ತಹಶೀಲ್ದಾರ್ ಪ್ರಕಾಶ ಸಿಂದಗಿ ಅವರು ಮಾತನಾಡಿ, ಬಸವಣ್ಣನವರ ಜಯಂತಿ ಅಂಗವಾಗಿ ಅವರ ಬದುಕು, ತತ್ವಗಳನ್ನು ಜನತೆಗೆ ತಿಳಿಸಲು ಸರಕಾರ ಕೈಗೊಂಡಿರುವ ಅನುಭವ ಮಂಟಪ-ಬಸವಾದಿ ಶರಣರ ವೈಭವ ರಥಯಾತ್ರೆ ಪಟ್ಟಣಕ್ಕೆ ಆಗಮಿಸಿದೆ. ಬಸವಣ್ಣನವರ ವಚನಗಳ ಸಾರವನ್ನು ತಿಳಿದು ನಡೆದರೆ, ಕಲ್ಯಾಣ ರಾಜ್ಯ ಸಾಕಾರಗೊಳ್ಳಲಿದೆ ಎಂದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಜಿ.ಪಿ.ಬಿರಾದಾರ ಅವರು ಮಾತನಾಡಿ, ಬಸವಾದಿ ಶರಣರ ಸಂದೇಶಗಳನ್ನು ಸರಕಾರ ನಾಡಿಗೆ ಪಸರಿಸಲು ಹೊರಟಿರುವುದು ಸ್ವಾಗತಾರ್ಹ. ಶಾಲಾ, ಕಾಲೇಜುಗಳಲ್ಲಿ ಬಸವಣ್ಣನವರ ಬಗ್ಗೆ ವಿಚಾರ ಸಂಕಿರಣ, ಕಾರ್ಯಾಗಾರಗಳನ್ನು ನಡೆಸುವುದರ ಜತೆಗೆ ತಾಲೂಕು ಕೇಂದ್ರಗಳಲ್ಲಿ ಬಸವಭವನ ನಿಮಾರ್ಣ ಮಾಡಬೇಕೆಂಬುದು ಬಹು ಜನರ ಬೇಡಿಕೆಯಾಗಿದೆ. ಸರ್ಕಾರ ಈ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ರೂಪಿಸಬೇಕೆಂಬುದು ಶರಣರ ಒತ್ತಾಯವಾಗಿದೆ ಎಂದರು.
ಕಂದಾಯ ಶಿರಸ್ತೇದಾರ ಸುರೇಶ ಮ್ಯಾಗೇರಿ, ಕಂದಾಯ ನೀರೀಕ್ಷಕ ಸಂಗಮೇಶ ಗ್ವಾಳೇದ, ಪ್ರಥಮ ದರ್ಜೆ ಸಹಾಯಕರಾದ ಕುಮಾರ ಅವರಾದಿ, ಚನಬಸು ಹೊಸಮನಿ, ಗ್ರಾಮ ಆಡಳಿತ ಅಧಿಕಾರಿ ಮಹಾದೇವಿ ಅಳ್ಳೊಳ್ಳಿ, ಶಿಕ್ಷಕರಾದ ಕೆ.ಐ. ಕಿಲಾರಿ, ಈರಣ್ಣ ಗಂಗಶೆಟ್ಟಿ, ರವೀಂದ್ರ ಕೊಟೀನ ಸೇರಿದಂತೆ ಪಟ್ಟಣದ ಪ್ರಮುಖರು, ಗಣ್ಯರು, ಪೊಲೀಸ್ ಸಿಬ್ಬಂದಿ ಹಾಗೂ ಇತರರು ಉಪಸ್ಥಿತರಿದ್ದರು.