ಸಂಸ್ಕಾರ ಪಡೆದ ಮಾನವ ದೇವಮಾನವನಾಗಬಲ್ಲ : ಡಾ. ಅಲ್ಲಮಪ್ರಭುಶ್ರೀ
ಬೆಳಗಾವಿ 15: ಸಂಸ್ಕಾರ ಪಡೆದ ನೀರು ತೀರ್ಥವಾದಂತೆ, ಸಂಸ್ಕಾರ ಪಡೆದ ಆಹಾರ ಪ್ರಸಾದವಾದಂತೆ ಸಂಸ್ಕಾರ ಪಡೆದ ಮಾನವ ದೇವಮಾನವನಾಗಬಲ್ಲ ಎಂದು ನಾಗನೂರು ರುದ್ರಾಕ್ಷಿ ಮಠದ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.
ಅವರು ಇಂದು ನಾಗನೂರು ರುದ್ರಾಕ್ಷಿ ಮಠದಲ್ಲಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಶರಣ ಸಂಸ್ಕೃತಿ ಸಂಸ್ಕಾರ ಶಿಬಿರದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಪರೋಪಕಾರದ ಗುಣದಿಂದ ವ್ಯಕ್ತಿಯ ವ್ಯಕ್ತಿತ್ವ ಉನ್ನತ ಸ್ಥಾನಕ್ಕೆ ಏರುತ್ತದೆ. ಕಾರಣ ವಿದ್ಯಾರ್ಥಿಗಳು ಸ್ವಾರ್ಥ ಸಾಧನೆ ಬಿಟ್ಟು ಬಾಲ್ಯದಿಂದಲೇ ಪರೋಪಕಾರದ ಗುಣ ಅಳವಡಿಸಿಕೊಳ್ಳಬೇಕು. ಬಾಲ್ಯದಲ್ಲಿಯೇ ವಿದ್ಯಾರ್ಥಿಗಳಲ್ಲಿ ಕಾಯಕ, ದಾಸೋಹ ಹಾಗು ಪ್ರಸಾದದ ಮಹತ್ವವನ್ನು ತಿಳಿಸಿ ಕೊಡುತ್ತಾ ವಚನ ಸಾಹಿತ್ಯವನ್ನು ಪರಿಚಯಿಸಿ ವಿದ್ಯಾರ್ಥಿಗಳಲ್ಲಿ ಶಿಸ್ತು, ನಿಯಮ ಪಾಲನೆ, ಹೃದಯ ವೈಶಾಲ್ಯತೆ ಮುಂತಾದ ಮಾನವೀಯ ಮೌಲ್ಯಗಳನ್ನು ಬೆಳೆಸುವ ಉದ್ದೇಶದಿಂದ ಈ ಶಿಬಿರ ಹಮ್ಮಿಕೊಂಡಿದ್ದು ಶಿಬಿರಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ನಿವೃತ್ತ ಮುಖ್ಯೋಪಾಧ್ಯಾಯ ಮಡಿವಾಳಪ್ಪ ಸಂಗೊಳ್ಳಿ ಮಾತನಾಡಿ ಜಗತ್ತಿನಲ್ಲಿ ಸಾವಿರಾರು ಭಾಷೆಗಳಿದ್ದರೂ ಎಲ್ಲಾ ಭಾಷೆಗಳಲ್ಲಿ ಧರ್ಮ ಉದಯವಾಗಿಲ್ಲ. ಆದರೆ ನಮ್ಮ ಮಾತೃಭಾಷೆ ಕನ್ನಡದಲ್ಲಿ ಶರಣಧರ್ಮ ಉದಯವಾಗಿರುವುದು ಕನ್ನಡ ಭಾಷೆಯ ಶ್ರೀಮಂತಿಕೆ ತೋರಿಸುತ್ತದೆ. ಶರಣ ಧರ್ಮದಲ್ಲಿ ಯಾವುದೇ ಮಧ್ಯವರ್ತಿಗಳ ಹಾವಳಿ ಇಲ್ಲದೆ ಭಗವಂತನನ್ನು ಪೂಜಿಸುವ, ಪ್ರಾರ್ಥಿಸುವ ಹಾಗೂ ಭಜಿಸುವ ಅವಕಾಶ ಇದೆ. ಇದನ್ನು ಅರಿತು ವೈಚಾರಿಕ ತಳಹದಿಯ ಮೇಲೆ ಎಲ್ಲರೂ ಜೀವನ ರೂಪಿಸಿಕೊಳ್ಳಬೇಕು ಎಂದರು.
ವಿಜ್ಞಾನ ಕೇಂದ್ರದ ಯೋಜನಾ ಅಧಿಕಾರಿ ರಾಜಶೇಖರ ಪಾಟೀಲ ಸ್ವಾಗತಿಸಿದರು. ಶಿಕ್ಷಕರಾದ ಮನೋಹರ ಉಳ್ಳೇಗಡ್ಡಿ ನಿರೂಪಿಸಿದರು. ಬಸಯ್ಯ ಶಿವಲಿಂಗಯ್ಯಗೋಳ ಪ್ರಾರ್ಥಿಸಿದರು. ಶ್ರೀಧರ ನೇಮಗೌಡ ವಂದಿಸಿದರು