ಶಿವಮೊಗ್ಗ, ಫೆ 8 ,ಸಾಗರದ ಅರಣ್ಯ ಇಲಾಖೆಯ ದಾಸ್ತಾನು ಕೇಂದ್ರದ ಭದ್ರತಾ ಸಿಬ್ಬಂದಿಯನ್ನು ಹತ್ಯೆ ಮಾಡಿರುವ ದರೋಡೆಕೋರರು ಗಂಧದ ಕೊರಡುಗಳನ್ನು ಹೊತ್ತೊಯ್ದಿದ್ದಾರೆ. ಭದ್ರತಾ ಸಿಬ್ಬಂದಿಯನ್ನು ಸಮೀಪದ ಬಾಳೆಗುಂಡಿ ಗ್ರಾಮದ ನಿವಾಸಿ ನಾಗರಾಜ್ (47) ಎಂದು ಗುರುತಿಸಲಾಗಿದೆ. ದಾಸ್ತಾನಿನ ಮುಂಬಾಗಿಲ ಬೀಗ ಒಡೆದಿದ್ದು ಒಳಪ್ರವೇಶಿಸಿರುವ ದುಷ್ಕರ್ಮಿಗಳು ವಿದ್ಯುತ್ ಬಲ್ಬ್ ಹಾಗೂ ಸಿಸಿಟಿವಿ ಕ್ಯಾಮೆರಾಗಳಿಗೂ ಹಾನಿಯುಂಟು ಮಾಡಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ಪರಿಶೀಲನೆ ನಡೆಸಿದಾಗ ಕೆಲ ಗಂಧದ ಕೊರಡುಗಳು ಕಾಣೆಯಾಗಿರುವುದು ಬೆಳಕಿಗೆ ಬಂದಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರಂಭದಲ್ಲಿ ಭದ್ರತಾ ಸಿಬ್ಬಂದಿ ನಾಪತ್ತೆಯಾಗಿದ್ದು, ಆತನ ಮೊಬೈಲ್ ಕೂಡ ಸ್ವಿಚ್ ಆಫ್ ಆಗಿರುವುದನ್ನು ತಿಳಿದ ಪೊಲೀಸರು ಆತನ ಮೇಲೆಯೇ ಅನುಮಾನ ವ್ಯಕ್ತಪಡಿಸಿದ್ದರು. ಆದರೆ, ನಂತರ ಸಾಗರ ಪಟ್ಟಣದ ಹೊರವಲಯದ ನೆಡರವಳ್ಳಿ ಬಳಿ ಆತನ ಮೃತದೇಹ ಪತ್ತೆಯಾಗಿತ್ತು. ನಾಗರಾಜ್ ದರೋಡೆಕೋರರನ್ನು ತಡೆಯಲು ಯತ್ನಿಸಿದಾಗ ಆತನ ಹತ್ಯೆಯಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಘಟನೆಯಲ್ಲಿ ಎಷ್ಟು ಗಂಧದ ಕೊರಡು ಕಾಣೆಯಾಗಿದೆ ಎಂಬುದು ಇನ್ನೂ ಖಚಿತಗೊಂಡಿಲ್ಲ.