ವಿಜಯಪುರ 06: ತನ್ನ ನೆಮ್ಮದಿಯ ಜೀವನವನ್ನು ತೊರೆದು, ತನ್ನ ಕುಟುಂಬಕ್ಕಾಗಿ ತನ್ನ ಸರ್ವಸ್ವವನ್ನೇ ಮುಡಿಪಾಗಿಟ್ಟುಕೊಂಡು ಯಾವುದೇ ವಂಚನೆ ಮೋಸ ಮಾಡದೇ ಮಳೆ, ಗಾಳಿ, ಬಿಸಿಲು ಇವೆಲ್ಲವನ್ನು ಲೆಕ್ಕಿಸದೇ ಬೆವರಿನೊಂದಿಗೆ ದುಡಿಯುವ ಇಳಿವಯಸ್ಸಿನ ಕಾರ್ಮಿಕ ಮೂರು ಚಕ್ರದ ಸೈಕಲ್ ಸವಾರ ಚಂದ್ರು ಹುಚ್ಚಪ್ಪ ಪೂಜಾರಿ ಇಂದಿನ ಯುವಕರಿಗೆ ಸ್ಫೂರ್ತಿ ಎಂದು ಚಂದ್ರಶೇಖರ ಬುರಾಣಪುರ ಹೇಳಿದರು.
ಅವರು ಮುದ್ರಣ ಕಾರ್ಮಿಕ ಸಂಘದ ವತಿಯಿಂದ ಕಾರ್ಮಿಕರ ದಿನಾಚರಣೆ ಅಂಗವಾಗಿ ಕಾರ್ಮಿಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇಂದಿನ ಯುಗದಲ್ಲಿ ಯುವಕರು ಮೊಬೈಲ್ಗೆ ಅಂಟಿಕೊಂಡಿದ್ದಾರೆ. ಇತ್ತೀಚಿನ ದಿನದಲ್ಲಿ ಜೀವನ ಸಾಗಿಸುವುದು ದುಬಾರಿಯಾಗಿದೆ. ಅಪ್ಪನ ಆದಾಯಕ್ಕೆ ಅಂಟಿಕೊಂಡಿರುವ ಯುವಕರು ದಾರಿ ತಪ್ಪುತ್ತಿದ್ದಾರೆ. ಈಗ ಅವರು ದಾರಿ ತಪ್ಪಿದರೆ ಇಳಿವಯಸ್ಸಿನಲ್ಲಿ ದುಡಿಯುವ ಕಾರ್ಮಿಕ ಚಂದ್ರು ಅವರ ಹಾಗೆ ಪರಿಸ್ಥಿತಿ ಉಂಟಾಗುತ್ತದೆ. ಅದಕ್ಕಾಗಿ ಯುವಕರು ವಿದ್ಯಾವಂತರಾಗಬೇಕೆಂದು ಕಿವಿ ಮಾತು ಹೇಳಿದರು.
ಅಧ್ಯಕ್ಷ ಚಿದಾನಂದ ವಾಲಿ ಮಾತನಾಡಿ, ಕಾರ್ಮಿಕರಲ್ಲಿ ತಾರತಮ್ಯ ತೋರುತ್ತಿರುವ ಸರ್ಕಾರ ಜನರ ಪರಿಸ್ಥಿತಿಯನ್ನು ಅರಿತುಕೊಳ್ಳಬೇಕು. ನಮ್ಮ ಮುದ್ರಣ ಕಾರ್ಮಿಕರಿಗೂ ಸಹಿತ ಕಾರ್ಮಿಕ ಇಲಾಖೆಯಿಂದ ಸೌಲಭ್ಯ ಸಿಗುವಂತೆ ಸರ್ಕಾರ ಗಮನ ಹರಿಸಬೇಕೆಂದು ಒತ್ತಾಯಿಸಿದರು.
ಹಿರಿಯ ಕಾರ್ಮಿಕ ಚಂದ್ರ ಪೂಜಾರಿ ಅವರನ್ನು ಶಾಲು ಹೊದಿಸಿ ಅವರು ಮಾಡುತ್ತಿರುವ ಕಾರ್ಯ ಶ್ಲ್ಯಾಘನೀಯವೆಂದು ಹೃದಯಸ್ಪರ್ಶಿ ಸನ್ಮಾನ ನೆರವೇರಿಸಲಾಯಿತು.
ಅಧ್ಯಕ್ಷ ಚಿದಾನಂದ ವಾಲಿಕಾರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಕಪಾಲಿ, ನಿರ್ದೇಶಕರಾದ ನಾಗರಾಜ ಬಿಸನಾಳ, ಬಸವರಾಜ ಹಾವಿನಾಳ, ಖಜಾಂಚಿ ಹನೀಪ್ ಮುಲ್ಲಾ, ಜಗದೀಶ ಶಹಾಪೂರ, ಉಮೇಶ ಶಿವಶರಣ, ದೀಪಕ ಜಾಧವ, ನಬಿ ಮಕಾಂದಾರ, ಬಸವರಾಜ ಬಿರಾದಾರ, ಸದಸ್ಯರಾದ ಬಸವರಾಜ ಬಿರಾದಾರ, ಕುಮಾರಸ್ವಾಮಿ ವಿಭೂತಿಮಠ ಮುಂತಾದವರು ಇದ್ದರು.