ಲೋಕದರ್ಶನ ವರದಿ
ಕಾಗವಾಡ 29: ಸಾಧನೆ ಎಂಬುದು ಯಾರ ಸೊತ್ತಲ್ಲ. ಆದರೆ ಸಾಧಿಸುವ ಛಲ ನಮ್ಮಲ್ಲಿರಬೇಕು. ಅಂದಾಗ ಮಾತ್ರ ನಾವು ಇಟ್ಟ ಗುರಿ ತಲುಪಲು ಸಾಧ್ಯ ಎಂದು ನಾಡೋಜ ಡಾ.ಚಂದ್ರಶೇಖರ ಕಂಬಾರ ಹೇಳಿದರು.
ಅವರು ಇತ್ತೀಚಿಗೆ ಕಾಗವಾಡ ತಾಲೂಕಿನ ಶೇಡಬಾಳ ಗ್ರಾಮದ ಶಾಂತಿಸಾಗರ ಜೈನ ಆಶ್ರಮದಲ್ಲಿ ಏರ್ಪಡಿಸ ಸಮಾರಂಭದಲ್ಲಿ ಕಾಗವಾಡ ಪೋಲಿಸ್ ಠಾಣೆಯ ಪಿಎಸ್ಐ ಹಣಮಂತ ಶಿರಹಟ್ಟಿಯವರು ಸೇವೆಯಲ್ಲಿದ್ದುಕೊಂಡೆ ಕೆಎಎಸ್ ಪರೀಕ್ಷೆ ಬರೆದು ತಹಸೀಲ್ದಾರ ಹುದ್ದೆ ಅಲಂಕರಿಸಿದ್ದಕ್ಕಾಗಿ ಅವರನ್ನು ಸನ್ಮಾನಿಸಿ ಮಾತನಾಡುತ್ತಿದ್ದರು.
ಪೋಲಿಸ್ ಕೆಲಸವೆಂದರೆ ಅದಕ್ಕೆ ಟೈಮ್ ಟೆಬಲ್ ಇರುವದಿಲ್ಲ. ಹಗಲು ರಾತ್ರಿ ಎನ್ನದೆ ಯಾವಾಗ ಬೇಕಾದರು ಸೇವಾ ಕಾರ್ಯಗಳು ಬರುತ್ತವೆ. ಅಂಥ ಯಡಬಿಡದ ಸಮಯದಲ್ಲೂ ಹಣಮಂತ ಶಿರಹಟ್ಟಿಯವರು ಕೆಎಎಸ್ ಪರೀಕ್ಷೆಯ ಅಧ್ಯಯನ ಮಾಡಿ ತಹಸೀಲ್ದಾರ ಹುದ್ದೆ ಅಲಂಕರಿಸಿದ್ದಾರೆಂದರೆ ಸಾಮಾನ್ಯದ ಮಾತಲ್ಲ. ಅದಕ್ಕಾಗಿ ಪ್ರತಿಯೊಬ್ಬರಲ್ಲು ಪ್ರತಿಭೆ ಇರುತ್ತದೆ. ಸಾಧಿಸುವ ಮನಸ್ಸು ಮಾಡಬೇಕು ಅಷ್ಟೇ ಎಂದರು.
ಅವರು ಸೇವೆ ಸಲ್ಲಿಸುತ್ತಾ ಪರೀಕ್ಷೆ ಬರೆದು ತಹಸೀಲ್ದಾರ ಆಗಲಿದ್ದಾರೆ. ಅವರು ಮುಂದೆ ಐಎಎಸ್ ಪರೀಕ್ಷೆಯನ್ನು ಬರುವ ದಿನಮಾನಗಳಲ್ಲಿ ಬರೆಯಲಿದ್ದಾರೆಂದರೆ ಅವರಲ್ಲಿರುವ ಏಕಾಗ್ರತೆ ಮತ್ತು ಛಲವನ್ನು ಮೆಚ್ಚುವಂತದ್ದು ಎಂದರು. ಈ ಸತ್ಕಾರ ಸಮಾರಂಭದಲ್ಲಿ ಸೊಂದಾ ಮಠದ ಭಟ್ಟಾರಕ ಮಹಾಸ್ವಾಮಿಗಳು, ಡಾ,ಸುರೇಂದ್ರಕುಮಾರ ಹೆಗ್ಡೆ,ಮನು ಬಳಿಗಾರ ಡಾ.ಪದ್ಮಿನಿ ನಾಗರಾಜ್, ಇಂಜನೀಯರುಗಳ ಸಂಘದ ರಾಜ್ಯ ಉಪಾರ್ಧಯಕ್ಷ ಅರುಣಕುಮಾರ ಯಲಗುದ್ರಿ, ಸಾತಪ್ಪ ಗೊಂಗಡಿ, ಆಶ್ರಮದ ಮಂತ್ರಿ ರಾಜು ನಾಂದ್ರೆ, ಪತ್ರಕರ್ತರ ಸಂಘದ ಉಪಾರ್ಧಯಕ್ಷ ಕುಮಾರ ಪಾಟೀಲ, ಸೇರಿದಂತೆ ಅನೇಕರು ಇದ್ದರು.