ಮುಂಬೈ, ಜ 13: ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಅವರ ಹಲವು ದಾಖಲೆಗಳನ್ನು ಹಿಂದಿಕ್ಕಿರುವ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತೊಂದು ದಾಖಲೆಯ ಹೊಸ್ತಿಲಲ್ಲಿದ್ದಾರೆ. ತವರು ನೆಲದಲ್ಲಿ ಸಚಿನ್ ಸಿಡಿಸಿರುವ ಶತಕಗಳನ್ನು ದಾಖಲೆ ಸರಿಗಟ್ಟಲು ಇನ್ನೂ ಕೇವಲ ಒಂದು ಶತಕ ಅಗತ್ಯವಿದೆ. ನಾಳೆಯಿಂದ ಆಸ್ಟ್ರೇಲಿಯಾ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಲ್ಲಿ ರನ್ ಮಷೀನ್ ಕೊಹ್ಲಿ ಈ ದಾಖಲೆ ಮಾಡಲು ಸಾಧ್ಯತೆಗಳಿವೆ.
50 ಓವರ್ ಮಾದರಿಯಲ್ಲಿ ಸಚಿನ್ ತೆಂಡೂಲ್ಕರ್ ತವರು ನೆಲದಲ್ಲಿ 20 ಶತಕ ಬಾರಿಸಿದ್ದಾರೆ. ವಿರಾಟ್ ಕೊಹ್ಲಿ 19 ಶತಕ ಗಳಿಸಿದ್ದು ಕೇವಲ ಒಂದೇ-ಒಂದು ಶತಕದ ಅಂತರವನ್ನು ಹೊಂದಿದ್ದಾರೆ. ನಾಳೆ ಆ್ಯರೋನ್ ಫಿಂಚ್ ಬಳಗದ ಎದುರು ವಾಂಖೆಡೆ ಕ್ರೀಡಾಂಗಣದಲ್ಲಿ ಮೂರಂಕಿ ದಾಟಿದ್ದೇ ಆದಲ್ಲಿ ಕೊಹ್ಲಿ, ಸಚಿನ ದಾಖಲೆ ಸರಿಗಟ್ಟಲಿದ್ದಾರೆ.
ಶ್ರೀಲಂಕಾ ವಿರುದ್ಧದ ಮೂರನೇ ಹಾಗೂ ಅಂತಿಮ ಟಿ-20 ಪಂದ್ಯದಲ್ಲಿ ವಿರಾಟ್ ಕೊಹ್ಲಿ ನಾಯಕನಾಗಿ ಅತಿ ವೇಗವಾಗಿ 11,000 ರನ್ ಗಳಿಸಿ ದಾಖಲೆ ಮಾಡಿದ್ದರು.
ಹೊನಲು-ಬೆಳಕಿನ ಟೆಸ್ಟ್ ಆಡಲು ನಾವು ಸಿದ್ಧ:
ಮೂರು ಪಂದ್ಯಗಳ ಏಕದಿನ ಸರಣಿ ನಿಮಿತ್ತ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿರಾಟ್ ಕೊಹ್ಲಿಿ,‘‘ಹೊನಲು-ಬೆಳಕಿನ ಟೆಸ್ಟ್ ಪಂದ್ಯವನ್ನು ನಾವಿಲ್ಲಿ ಆಡಿದ್ದೇವೆ. ಈ ಪಂದ್ಯ ನಡೆದ ಬಗ್ಗೆೆ ನಮಗೆ ತುಂಬಾ ಸಂತೋಷವಿದೆ. ಮುಂದಿನ ಟೆಸ್ಟ್ ಸರಣಿಗಳಲ್ಲೂ ಒಂದು ಫಿಂಕ್ ಚೆಂಡಿನ ಪಂದ್ಯವಾಡಲು ನಾವು ಮುಕ್ತರಾಗಿದ್ದೇವೆ,’’ ಎಂದು ಹೇಳಿದ್ದಾರೆ.
‘‘ಆಸ್ಟ್ರೇಲಿಯಾ ವಿರುದ್ಧ ಗಬ್ಬಾ ಅಥವಾ ಪರ್ತ್ ಯಾವುದೇ ಅಂಗಳದಲ್ಲಿ ನಾವು ಹೊನಲು-ಬೆಳಕಿನ ಪಂದ್ಯವಾಡಲು ಸಿದ್ಧರಿದ್ದೇವೆ. ವಿಶ್ವದ ಯಾವುದೇ ತಂಡ ಅಥವಾ ಯಾವುದೇ ಸ್ಥಳದಲ್ಲಿ ಯಾವುದೇ ಮಾದರಿಯ ಕ್ರಿಕೆಟ ಆಡಲು ನಾವು ಸಿದ್ಧರಿದ್ದೇವೆ,’’ ಎಂದು ವಿರಾಟ್ ಕೊಹ್ಲಿಿ ಸ್ಪಷ್ಟಪಡಿಸಿದ್ದಾರೆ.
ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಮೊದಲನೇ ಏಕದಿನ ಪಂದ್ಯ ನಾಳೆ ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿದೆ.