ಅನುಭವ ಮಂಟಪ-ಬಸವಾದಿ ಶರಣರ ವೈಭವ
ಬಾಗಲಕೋಟೆ 26: ವಿಶ್ವಗುರು ಬಸವಣ್ಣನವರ ಜಯಂತಿ ಅಂಗವಾಗಿ ಕೂಡಲ ಸಂಗಮದಲ್ಲಿ ಎರಡು ದಿನಗಳ ಕಾಲ ಅನುಭವ ಮಂಟಪ-ಬಸವಾದಿ ಶರಣರ ವೈಭವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಹೇಳಿದರು.
ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಕರ್ನಾಟಕ ಸರಕಾರ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ್ದು, ಈ ಹಿನ್ನಲೆಯಲ್ಲಿ ಬಸಣ್ಣನವರ ತತ್ವ, ಸಂದೇಶಗಳನ್ನು ಪ್ರಚೂರಪಡಿಸುವ ನಿಟ್ಟಿನಲ್ಲಿ ಕೂಡಲಸಂಗಮದಲ್ಲಿ ಎರಡು ದಿನಗಳ ಕಾಲ ಸಾಂಸ್ಕೃತಿ ವೈಭವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಸಾಂಸ್ಕೃತಿಕ ವೈಭವದಲ್ಲಿ ಮೊದಲ ದಿನ ಎಪ್ರೀಲ್ 29 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5.30 ವರೆಗೆ ವಚನ ಸಾಹಿತ್ಯ ಸಮಕಾಲಿನ ಸಂವೇದನೆ ಕುರಿತು ವಿಚಾರಗೋಷ್ಠಿ ನಡೆಯಲಿವೆ. ಗೋಷ್ಟಿ-1ರಲ್ಲಿ ಸಾಂಸ್ಕೃತಿಕ ನಾಯಕ ಬಸವಣ್ಣ-ವರ್ತಮಾನದ ಜರೂರು ವಿಷಯ ಕುರಿತು ರಂಜಾನ್ ದುರ್ಗಾ, ಡಾ.ತಾರಿಣಿ ಶುಭದಾಯಿನಿ, ಡಾ.ವಿಕ್ರಂ ವಸಾಜಿ ವಿಷಯ ಮಂಡನೆ ಮಾಡಲಿದ್ದಾರೆ. ಅಧ್ಯಕ್ಷತೆಯನ್ನು ಪ್ರೊ.ಎಸ್.ಜಿ.ಸಿದ್ದರಾಮಯ್ಯ ವಹಿಸುವರು. ಗೋಷ್ಠಿ-2ರಲ್ಲಿ ವಚನ ಸಾಹಿತ್ಯ ಮತ್ತು ಭಾರತದ ಸಂವಿದಾನ ಕುರಿತು ಡಾ.ಕೆ.ನೀಲಾ, ಪ್ರೊ.ಎಂ.ಎಸ್.ಶೇಖರ್ ಮಂಡನೆ ಮಾಡಲಿದ್ದಾರೆ.
ಗೋಷ್ಠಿ-3ರಲ್ಲಿ ವಚನ ಸಾಹಿತ್ಯ ಮತ್ತು ಮಹಿಳೆ ಕುರಿತು ಡಾ.ಬಸವರಾಜ ಸಾದರ್, ಡಾ.ಸಚಿತಾ ಬನ್ನಾಡಿ, ಡಾ.ಪ್ರಜ್ಞಾ ಮತ್ತಿಹಳ್ಳಿ ವಿಷಯ ಮಂಡನೆ ಮಾಡಿದರೆ, ಗೋಷ್ಠಿ 4ರಲ್ಲಿ ವಿಶ್ವಶಾಂತಿ ಹಾಗೂ ಸಾಮರಸ್ಯ ಕುರಿತು ಡಾ.ಮೀನಾಕ್ಷಿ ಬಾಳಿ, ಡಾ.ಡೊಮಿನಿಕ್, ಡಾ.ಮೈಸೂರು ಉಮೇಶ್ ಮಂಡನೆ ಮಾಡಲಿದ್ದಾರೆ. ಗೋಷ್ಠಿಯ ಅಧ್ಯಕ್ಷತೆಯನ್ನು ಡಾ.ಸವಿತಾ ನಾಗಭೂಷಣ, ಪ್ರೊ.ಕಾಳೇಗೌಡ ನಾಗವಾರ ವಹಿಸಲಿದ್ದಾರೆ ಎಂದು ತಿಳಿಸಿದರು.
ವೈಭವದ ಎರಡನೇ ದಿನ ಎಪ್ರೀಲ್ 30 ರಂದು ಬೆಳಿಗ್ಗೆ 11 ಗಂಟೆಗೆ ಕಾರ್ಯಕ್ರಮದ ಉದ್ಘಾಟನೆ ಹಾಗೂ ಬಸವ ರಾಷ್ಟ್ರೀಯ ಪುರಸ್ಕಾರ ಪ್ರಶಸ್ತಿ ಪ್ರಧಾನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾಡಲಿದ್ದಾರೆ. ವಿಶ್ವಗುರು ಬಸವಣ್ಣ ಸಾಂಸ್ಕೃತಿ ನಾಯಕ ಪುಸ್ತಕವನ್ನು ಉಪ ಮುಖ್ಯಮಂತ್ರಿ ಡಿ.ಕೆ.ಶವಕುಮಾರ ಬಿಡುಗಡೆ ಮಾಡಲಿದ್ದಾರೆ. ಅಧ್ಯಕ್ಷತೆಯನ್ನು ಹುನಗುಂದ ಶಾಸಕ ಹಾಗೂ ರಾಜ್ಯ ವೀರಶೈವ ಲಿಂಗಾಯ ಅಭಿವೃದ್ದಿ ನಿಗಮದ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ವಹಿಸಲಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ಸಭಾಪತಿ ಯು.ಟಿ.ಖಾದರ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಸಚಿವರಾದ ಶಿವರಾಜ ತಂಗಡಗಿ, ಆರ್.ಬಿ.ತಿಮ್ಮಾಪೂರ ಸೇರಿದಂರೆ ಇತರೆ ಸಚಿವ ಸಂಪುಟದ ಸಚಿವರು, ವಿಧಾನಸಭೆ ಶಾಸಕರು, ವಿಧಾನ ಪರಿಷತ್ ಶಾಸಕರು ಹಾಗೂ ಗಣ್ಯಮಾನ್ಯರು, ಸಾಹಿತಿಗಳು, ವಿದ್ವಾಂಸರು ಭಾಗವಹಿಸಲಿದ್ದಾರೆಂದು ತಿಳಿಸಿದರು.
30 ರಂದು ಬೆಳಿಗ್ಗೆ ಕೂಡಲಸಂಗಮೇಶ್ವರ ದೇವಸ್ಥಾನದಿಂದ ಸಭಾಮಂಟಪವರೆಗೆ ವಿವಿಧ ಜಾನಪದ ಕಲಾತಂಡಗಳ ಮೇರವಣಿಗೆ ಹಾಗೂ 29 ಮತ್ತು 30 ರಂದು ಸಂಜೆ 9 ರಿಂದ ವಿವಿಧ ಸಾಂಸ್ಕೃತಿ ಕಾರ್ಯಕ್ರಮಗಳು ಸಹ ಜರುಗಲಿವೆ. ಈ ಎರಡು ದಿನಗಳ ಕಾಲ ಜರಗುವ ಸಾಂಸ್ಕೃತಿಕ ವೈಭವ ಕಾರ್ಯಕ್ರಮಕ್ಕೆ ನಾಡಿನ ಹಾಗೂ ಜಿಲ್ಲೆಯ ಜನತೆ ಸಾಕಷ್ಟು ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಲು ತಿಳಿಸಿದರು. ಈ ಸಂದರ್ಭದಲ್ಲಿ ರನ್ನವೈಭವದ ಕಾರ್ಯಕ್ರಮದ ಲೆಕ್ಕಪತ್ರದ ವಿವರವನ್ನು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಗುರುಪಾದ ಡೂಗನವರ ಸೇರಿದಂತೆ ಇತರರು ಉಪಸ್ಥಿತರಿದ್ದರು.