ಏಷ್ಯನ್ ಚಾಂಪಿಯನ್ಶಿಪ್(ವಾಲಿಬಾಲ್): ಭಾರತ ಕ್ವಾರ್ಟರ್ ಪೈನಲ್ಗೆ ಚೊಚ್ಚಲ ಪ್ರವೇಶ

ನವದೆಹಲಿ, ಆ 6   ಮಯಾನ್ಮರ್ನಲ್ಲಿ ನಡೆಯುತ್ತಿರುವ 23 ವಯೋಮಿತಿ ಪುರುಷರ ವಾಲಿಬಾಲ್ ಏಷ್ಯನ್ ಚಾಂಪಿಯನ್ಶಿಪ್ ಟೂರ್ನಿಯಲ್ಲಿ ಇದೇ ಮೊದಲ ಬಾರಿ ಭಾರತ ತಂಡ ಕ್ವಾರ್ಟರ್ ಫೈನಲ್ಗೆ ಪ್ರವೇಶ ಮಾಡಿದೆ.  

ಮಂಗಳವಾರ ನಡೆದ ಗುಂಪು 'ಡಿ' ಪ್ರೀ ಕ್ವಾರ್ಟರ್ ಫೈನಲ್ ಹಣಾಹಣಿಯಲ್ಲಿ ಭಾರತ 3-2 ಅಂತರದಲ್ಲಿ ಥಾಯ್ಲೆಂಡ್ ತಂಡವನ್ನು ಮಣಿಸಿ ಅಂತಿಮ ಎಂಟರ ಘಟ್ಟಕ್ಕೆ ಪ್ರವೇಶ ಮಾಡಿತು. ಆ ಮೂಲಕ ನ್ಯೂಜಿಲೆಂಡ್, ಚೀನಾ ಹಾಗೂ ಥಾಯ್ಲೆಂಡ್ ತಂಡಗಳನ್ನು ಒಳಗೊಂಡಿರುವ ಗುಂಪಿನಲ್ಲಿ ಭಾರತ ಅಗ್ರ ಸ್ಥಾನಕ್ಕೇರಿತು. ಇತಿಹಾಸದಲ್ಲೇ ಭಾರತ ಇದೇ ಮೊದಲ ಬಾರಿ ಪ್ರಸಕ್ತ ಟೂರ್ನಿಯಲ್ಲಿ ಎಂಟರ ಘಟ್ಟಕ್ಕೆ ಪ್ರವೇಶ ಮಾಡಿದೆ. 

ಈ ಪಂದ್ಯಕ್ಕೂ ಮೊದಲು ಅಮಿತ್ ಗುಲಿಯಾ ಅವರ ನಾಯಕತ್ವದ ಭಾರತ ತಂಡ, ಚೀನಾ ಹಾಗೂ ನ್ಯೂಜಿಲೆಂಡ್ ವಿರುದ್ಧ ಕ್ರಮವಾಗಿ ಜಯ ಸಾಧಿಸಿತ್ತು. ಡಿ ಗುಂಪಿನ ಕೊನೆಯ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಭಾರತ ಅಂಕಪಟ್ಟಿಯಲ್ಲಿ ಒಟ್ಟು ಆರು ಅಂಕಗಳನ್ನು ಪಡೆಯುವ ಮೂಲಕ ಅಗ್ರ ಸ್ಥಾನ ಅಲಂಕರಿಸಿತು.  

ಭಾರತದ ಜತೆಗೆ ಆರು ಅಂಕಗಳನ್ನು ಹೊಂದಿರುವ ಚೀನಾ ಕೂಡ ಕ್ವಾರ್ಟರ್ ಫೈನಲ್ಗೆ ಲಗ್ಗೆ ಇಟ್ಟಿದೆ. ಥಾಯ್ಲೆಂಡ್ ಮುಂದಿನ ಸುತ್ತಿಗೆ ಅರ್ಹತೆ ಪಡೆಯುವಲ್ಲಿ ವಿಫಲವಾಗಿದ್ದು, ಕ್ಲಾಸಿಪಿಕೇಷನ್ ಸುತ್ತಿನಲ್ಲಿ ಪಂದ್ಯವಾಡಲಿದೆ. ಭಾರತ ಕ್ಲಾಸಿಪಿಕೇಷನ್ ಸುತ್ತಿನಲ್ಲಿ ಕಝಕೀಸ್ತಾನ ಹಾಗೂ ಜಪಾನ್ ವಿರುದ್ಧ ಎರಡು ಪಂದ್ಯಗಳಾಡಲಿದೆ.