ಕೊಪ್ಪಳ 13: ಇಲ್ಲಿನ ಪ್ರಸಿದ್ಧ ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದಲ್ಲಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಯುನಿಸೆಫ್ ಮಕ್ಕಳ ಸಂರಕ್ಷಣಾ ಯೋಜನೆ ಹಾಗೂ ಮಕ್ಕಳ ವಿಶೇಷ ಪೊಲೀಸ್ ಘಟಕದ ಸಹಭಾಗಿತ್ವದಲ್ಲಿ ಮಕ್ಕಳ ಹಕ್ಕುಗಳ ಜಾಗೃತಿ ಕಾರ್ಯಕ್ರಮ ನಡೆಯುತ್ತಿದೆ.
ಜಾತ್ರೆಯ ಶ್ರೀರುದ್ರಮುನೀಶ್ವರ ಮಹಾದ್ವಾರದ ಮೂಲಕ ಒಳಸಾಗಿದರೆ ಸಾವಿರ ಮಕ್ಕಳ ಉಚಿತ ಪ್ರಸಾದ ನಿಲಯದ ಬಳಿ ಸ್ಥಾಪಿಸಿರುವ ಮಳಿಗೆಯ ಮೂಲಕ ಮಹಿಳೆಯರು ಮತ್ತು ಮಕ್ಕಳ ಹಕ್ಕುಗಳು, ರಕ್ಷಣೆ, ಬಾಲ ನ್ಯಾಯ ಕಾಯ್ದೆ ಮತ್ತಿತರ ವಿಷಯಗಳ ಕುರಿತು ಯಾತ್ರಾರ್ಥಿಗಳಿಗೆ ಮಾಹಿತಿ ನೀಡಲಾಗುತ್ತಿದೆ.
ಮಕ್ಕಳಿಗೆ ಹಾಗೂ ಪಾಲಕರಿಗೆ "ಮಕ್ಕಳ ಸುರಕ್ಷಿತ ಮತ್ತು ಅಸುರಕ್ಷಿತ ಸ್ಪರ್ಶದ ಬಗ್ಗೆ ತಿಳಿಸಲಾಗುತ್ತಿದೆ. ನಮ್ಮ ದೇಹ ನಮ್ಮ ಖಾಸಗಿ ಸ್ವತ್ತಾಗಿದ್ದು, ಅದನ್ನು ನಮ್ಮ ಪಾಲಕರು, ಅಥವಾ ಚಿಕಿತ್ಸೆಗಾಗಿ ವೈದ್ಯರು ಮಾತ್ರ ಮುಟ್ಟಬಹುದಾಗಿದ್ದು, ಬೇರೆ ಯಾರು ಸಹ ಯಾವುದೇ ಸಂಧರ್ಭದಲ್ಲಿ ಮುಟ್ಟುವಂತಿಲ್ಲ, ಒಂದು ವೇಳೆ ಯಾರಾದರೂ ತುಟಿ, ಕೆನ್ನೆ, ಎದೆ, ಪೃಷ್ಠ ಮತ್ತು ತೊಡೆಗಳ ನಡುವಿನ ಭಾಗವನ್ನು ಮುಟ್ಟಿದರೆ ಅಂಥವರಿಗೆ ಲೈಂಗಿಕ ಅಫರಾಧಗಳಿಂದ ಮಕ್ಕಳ ಸ್ವಂರಕ್ಷಣಾ ಕಾಯ್ದೆ 2012 ರನ್ವಯ 3ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ದಂಡವನ್ನು ವಿಧಿಸಬಹುದಾಗಿದೆ ಎಂಬ ಅಂಶ ತಿಳಿಸಲಾಗುತ್ತಿದೆ.
ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದರೆ ಗಲ್ಲು ಶಿಕ್ಷೆ ಅಥವಾ ಆಜೀವ ಜೈಲು ಶಿಕ್ಷೆ ಮತ್ತು ದಂಡವನ್ನು ವಿಧಿಸಬಹುದಾಗಿದೆ. ಜಿಲ್ಲೆಯಲ್ಲಿ ಅಪ್ರಾಪ್ತ ವಯಸ್ಸಿನ ಮಕ್ಕಳು ಸಂಸಾರಿಕ ಜೀವನವನ್ನು ನಡೆಸಿ ಗರ್ಭಿಣಿಯರಾಗಿರುವ ಪ್ರಕರಣಗಳು ವರದಿಯಾಗಿವೆ, ಇಂತಹ ಪ್ರಕರಣಗಳಲ್ಲಿ ಬಾಲಕಿಯ ಪತಿಗೂ ಸಹ ಗಲ್ಲು ಶಿಕ್ಷೆಯನ್ನು ವಿಧಿಸಬಹುದಾಗಿದೆ. ಅಲ್ಲದೆ ಮದುವೆಗೆ ಸಹಕರಿಸಿದ ತಂದೆ, ತಾಯಿ ಮತ್ತು ಪೋಷಕರಿಗೆ ಶಿಕ್ಷೆಯನ್ನು ವಿಧಿಸಬಹುದಾಗಿದೆ, ಆದ್ದರಿಂದ ಬಾಲ್ಯ ವಿವಾಹ ಶಿಕ್ಷಾರ್ಹ ಅಪರಾಧವಾಗಿದೆ ಎಂದು ವಿವರಿಸಲಾಗುತ್ತಿದೆ.
ಅಪ್ರಾಪ್ತ ಮಕ್ಕಳೊಂದಿಗಿನ ಒಪ್ಪಿತ ಲೈಂಗಿಕ ಕ್ರಿಯೆಯು ಕೂಡ ಅಪರಾಧವಾಗಿದೆ ಎಂಬ ಕರಪತ್ರ, ಭಿತ್ತಿಪತ್ರ, ಸಚಿತ್ರ ಮಾಹಿತಿಗಳನ್ನು ವಿತರಿಸಲಾಗುತ್ತಿದೆ.
ಯುನಿಸೆಫ್ ಮಕ್ಕಳ ಸಂರಕ್ಷಣಾ ಯೋಜನೆಯ ಹರೀಶ ಜೋಗಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಶಿವಲೀಲಾ, ಸುಮಲತಾ ಎಂ. ಡೊಳ್ಳಿನ, ರವಿ ಪವಾರ್, ರವಿ ಬಡಿಗೇರ,ಯಮನಮ್ಮ, ವಿಶೇಷ ಪೊಲೀಸ್ ಘಟಕದ ಬಸಪ್ಪ, ಜಗದೀಶ್ವರಯ್ಯ ಹಿರೇಮಠ ಮತ್ತಿತರರು ಜಾಗೃತಿ ಕಾರ್ಯನಿರ್ವಹಿಸುತ್ತಿದ್ದಾರೆ. ಜ. 22ರವರೆಗೂ ಜಾತ್ರೆಯಲ್ಲಿ ಈ ಮಳಿಗೆ ಇರಲಿದೆ.