ಲಂಡನ್, ಸೆ 7: ಗುತ್ತಿಗೆ ನಿಯಮ ಉಲ್ಲಂಘಿಸಿದ ಆರೋಪದ ಮೇರೆಗೆ ಭಾರತ ತಂಡದ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಅವರಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ನೋಟಿಸ್ ನೀಡಿದೆ. ಕೆರಿಬಿಯನ್ ಪ್ರೀಮಿಯರ್ ಲೀಗ್ನ ಸೇಂಟ್ ಕಿಸ್ಟ್ ಹಾಗೂ ನೆವಿಸ್ ಪ್ಯಾಟ್ರಿಯಟ್ಸ್ ತಂಡಗಳ ನಡುವಿನ ಉದ್ಘಾಟನಾ ಪಂದ್ಯದ ವೇಳೆ ದಿನೇಶ್ ಕಾರ್ತಿಕ್ ಟ್ರಿಬ್ಯಾಂಗೊ ನೈಟ್ ರೈಡರ್ಸ್ ಡ್ರೆಸ್ಸಿಂಗ್ ಕೋಣೆಯಲ್ಲಿ ಕಾಣಿಸಿಕೊಂಡಿದ್ದರು. ಹಾಗಾಗಿ, ಅವರಿಗೆ ನೋಟಿಸ್ ನೀಡಲಾಗಿದೆ ಎಂದು ಇಎಸ್ಪಿಎನ್ ಕ್ರಿಕ್ಇನ್ಫೋ ವರದಿ ಮಾಡಿದೆ. ಬಿಸಿಸಿಐ ನಿಯಮದ ಪ್ರಕಾರ ಕೇಂದ್ರ ಗುತ್ತಿಗೆ ಹೊಂದಿರುವ ಭಾರತ ತಂಡದ ಯಾವೊಬ್ಬ ಆಟಗಾರ ಅನುಮತಿ ಇಲ್ಲದೆ ಯಾವುದೇ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವಂತಿಲ್ಲ. ಸಿಪಿಎಲ್ ನಡೆಯುತ್ತಿದ್ದ ವೇಳೆ ಕಾರ್ತಿಕ್ ಅವರು ಕಿವೀಸ್ ಮಾಜಿ ನಾಯಕ ಬ್ರೆಂಡಮ್ ಮೆಕಲಮ್ ಅವರ ಸಮೀಪ ಕುಳಿತುಕೊಂಡಿದ್ದರು. ಇಂಡಿಯನ್ ಪ್ರೀಮಿಯರ್ ಲೀಗ್ ಪ್ರಾಂಚೈಸಿಯಾದ ಕೊಲ್ಕತಾ ನೈಟ್ ರೈಡರ್ಸ್ ತಂಡದ ಮಾಲೀಕರೇ ಟ್ರಿಬ್ಯಾಂಗೊ ನೈಟ್ ರೈಡರ್ಸ್ ತಂಡದ ಮಾಲೀಕರಾಗಿದ್ದಾರೆ. ಹಾಗಾಗಿ, ಕಾರ್ತಿಕ್ ಅಲ್ಲಿಗೆ ತೆರಳಿದ್ದರು ಎನ್ನಲಾಗಿದೆ. ಈ ಬಗ್ಗೆ ಸ್ಪಷ್ಟನೆ ನೀಡುವಂತೆ ಬಿಸಿಸಿಐ ಈಗಾಗಲೇ ನೋಟಿಸ್ ನೀಡಿದ್ದು, ಒಂದು ವಾರದ ಒಳಗಡೆ ಇದಕ್ಕೆ ಕಾರ್ತಿಕ್ ಉತ್ತರ ನೀಡಬೇಕಾಗಿದೆ.