ಕಾಂಗ್ರೆಸ್-ಜೆಡಿಎಸ್ ಶಾಸಕರು ಬಿಜೆಪಿಗೆ ಸೇರ್ಪಡೆೆ

ಲೋಕದರ್ಶನವರದಿ

ರಾಣೇಬೆನ್ನೂರು: ರಾಜ್ಯದಲ್ಲಿರುವ ಆಢಳಿತಾರೂಢ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ  ನೇತೃತ್ವದ ಸರ್ಕಾರದ ಅವಧಿ ಪೂರ್ಣಗೊಳಿಸಲು ಹಾಗೂ ಅವರ  ಕೈಬಲಪಡಿಸಲು ಮುಂದಿನ ದಿನಮಾನಗಳಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಅನೇಕ ಶಾಸಕರು ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಹೇಳಿದರು.

ಗುರುವಾರ ಇಲ್ಲಿನ ಬಿಜೆಪಿ ಕಚೇರಿ ಆವರಣದಲ್ಲಿ ಏರ್ಪಡಿಸಿದ್ದ ಬೃಹತ್ ಬಿಜೆಪಿ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಯಡಿಯೂರಪ್ಪನವರ ಸರಕಾರವು ಸುಭದ್ರವಾಗಿದೆ. ಈ ಸರ್ಕಾರವನ್ನು ಅಲುಗಾಡಿಸಲು ಯಾರಿಂದಲೂ ಸಹ ಸಾಧ್ಯವಿಲ್ಲ. ಮುಂದಿನ ಉಳಿದ ಅವಧಿಯನ್ನು ಪೂರೈಸಲಿದ್ದಾರೆ ಎಂದರು. 

 ರಾಜ್ಯದಲ್ಲಿ ನಡೆಯಲಿರುವ 15 ಕ್ಷೇತ್ರಗಳ ಉಪಚುನಾವಣೆಯಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಬಿಜೆಪಿಯು ಗೆಲುವನ್ನು ಸಾಧಿಸಲಿದೆ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರವರು ರಾಜ್ಯ ಬಿಜೆಪಿ ಸರ್ಕಾರಕ್ಕೆ ಬೆಂಬಲ ನೀಡುತ್ತಾರೆ ಎಂದು ಹೇಳಿದರೆ ಇನ್ನೊಂದೆಡೆ ನಾನು ಹಾಗೇ ಹೇಳಿಲ್ಲ ಎಂದು ಧ್ವಂಧ್ವ ನಿಲುವು ತಾಳಿರುವುದು ಅವರ ಯೋಗ್ಯತೆಯನ್ನು ತೋರಿಸುತ್ತದೆ ಎಂದರು. 

 ಇವರುಗಳು ಮುಖ್ಯಮಂತ್ರಿ ಆದ ಸಂದರ್ಭದಲ್ಲಿ ಉತ್ತರ ಕರ್ನಾಟಕ, ಹೈದರಬಾದ್ ಕರ್ನಾಟಕ ಅಭಿವೃದ್ಧಿಗೊಳಿಸಲು ಏನೂ ಮಾಡಿಲ್ಲ. ಇದೀಗ ಉತ್ತರ ಕರ್ನಾಟಕ ಅಭಿವೃದ್ಧಿ ಬಗ್ಗೆ ಮಾತನಾಡುತ್ತಾರೆ. ಇಂತಹ ಇಬ್ಬಗೆಯ ನೀತಿಯಿಂದಾಗಿ ಜೆಡಿಎಸ್ ಪಕ್ಷದ ಶಾಸಕರುಗಳೇ ಅವರುಗಳ ವಿರುದ್ಧ ತಿರುಗಿ ಬಿದ್ದಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಕುಮಾರಸ್ವಾಮಿ ದೇವೇಗೌಡರು ಎಚ್ಚರಿಕೆಯಿಂದ ಮಾತನಾಡುವುದನ್ನು ಕಲಿಯಬೇಕು ಎಂದರು. 

 ಬಿಜೆಪಿಯ ಯುವ ಮುಖಂಡರು ಹಾಗೂ ಸರಳ ವ್ಯಕ್ತಿತ್ವದ ಈ ಕ್ಷೇತ್ರದ ಬಿಜೆಪಿ ಅಭ್ಯರ್ಥಿ  ಅರುಣಕುಮಾರ ಪೂಜಾರ ಅವರಿಗೆ ಮತ ನೀಡುವುದರ ಮೂಲಕ ಅವರನ್ನು ಚುನಾಯಿಸಿ ಕಳಿಸಿದರೆ ಯಡಿಯೂರಪ್ಪನವರ ಕೈ ಬಲಪಡಿಸುವುದರ ಜೊತೆಗೆ ಮುಂದಿನ ಅವಧಿಯ ಸರಕಾರ ಪೂರ್ಣಗೊಳ್ಳಲಿದೆ. ಆದಕಾರಣ ಅರುಣಕುಮಾರ ಅವರ ಗೆಲುವು ಸರಕಾರದ ಮೇಲೆ ಅವಲಂಬಿತವಾಗಿದ್ದು, ಅವರನ್ನು ಗೆಲ್ಲಿಸಿಲ್ಲಾ ಇಂದಿನಿಂದಲೇ ಬಿಜೆಪಿ ಕಾರ್ಯಕರ್ತರು ಸಂಕಲ್ಪ ಮಾಡಬೇಕಿದೆ ಎಂದರು.

  ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಮಾತನಾಡಿ, ಈ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ  ಕೆ.ಬಿ.ಕೋಳಿವಾಡ ಅವರು ಇದೇ ಸಿದ್ದರಾಮಯ್ಯನವರ ವಿರುದ್ಧ ಹಿಗ್ಗಾ ಮುಗ್ಗಾ ಅವಹೇಳನಕಾರಿಯಾಗಿ ಮಾತನಾಡಿದ್ದನ್ನು ಈ ಕ್ಷೇತ್ರದ ಜನತೆ ಇನ್ನೂ ಮರೆತಿಲ್ಲ. ಮರಳನ್ನು ಹಗಲು ದರೋಡೆ ಮಾಡಿದ ಕೆ.ಬಿ.ಕೋಳಿವಾಡ ಅವರು ಸಿದ್ದರಾಮಯ್ಯರವರನ್ನು ಹಣಕೊಟ್ಟು ಪ್ರಚಾರ ಮಾಡಲು ಇಲ್ಲಿಗೆ ಕರೆಸಿದ್ದಾರೆ. ಆದ್ದರಿಂದ ಈ ಕ್ಷೇತ್ರದ ಬಿಜೆಪಿ ಅಭ್ಯರ್ಥಿ  ಅರುಣಕುಮಾರ ಪೂಜಾರ ಅವರನ್ನು ಗೆಲ್ಲಿಸಲು ಶ್ರಮಿಸಬೇಕು ಎಂದು ಹೇಳಿದರು.  

 ಯಡಿಯೂರಪ್ಪ ಎಂದರೆ ಅಭಿವೃದ್ಧಿ, ಅಭಿವೃದ್ಧಿ ಎಂದರೆ ಯಡಿಯೂರಪ್ಪ ರಾಜ್ಯದಲ್ಲಿ ಯಡಿಯೂರಪ್ಪ ಮತ್ತು ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಅಭಿವೃದ್ಧಿ ಪರ್ವ ಆರಂಭಿಸಿದ್ದಾರೆ. 

  ಅವರುಗಳು ರೈತರ ಹಿಂದುಳಿದವರ ಮತ್ತಿತರ ವರ್ಗಗಳ ಏಳ್ಗೆಗಾಗಿ ಶ್ರಮಿಸಲು ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಇಂತಹ ಮಹಾನ್ ನಾಯಕರ ಕೈಬಲಪಡಿಸಲು ಎಲ್ಲಾ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಲು ಮುಂದಾಗಬೇಕು ಎಂದರು. ಬಿಜೆಪಿ ಅಭ್ಯರ್ಥಿ  ಅರುಣಕುಮಾರ ಪೂಜಾರ, ಸಂಸದ ಬಿ.ವೈ. ರಾಘವೇಂದ್ರ, ಮಾಜಿ ಸಂಸದ ಮಂಜುನಾಥ ಕುನ್ನೂರು, ಮಾಜಿ ಸಚಿವ ಆರ್.ಶಂಕರ್, ಶಾಸಕರುಗಳಾದ ವಿರುಪಾಕ್ಷಪ್ಪ ಬಳ್ಳಾರಿ, ಮಾಡಾಳ ವಿರೂಪಾಕ್ಷಪ್ಪ, ರಾಮಪ್ಪ ಲಮಾಣಿ, ವೀರಭದ್ರಪ್ಪ ಹಾಲರವಿ, ಎಸ್.ಎ.ರವೀಂದ್ರನಾಥ್, ಮಾಜಿ ಶಾಸಕ ಬಿ.ಪಿ.ಹರೀಶ, ಮುಖಂಡರಾದ  ಮಾ.ನಾಗರಾಜ್, ಡಾ|| ಬಸವರಾಜ ಕೇಲಗಾರ, ಚೋಳಪ್ಪ ಕಸವಾಳ, ರಾಜೇಂದ್ರ ಬಸೆನಾಯ್ಕರ್, ಭೀಮಣ್ಣ ಯಡಚಿ, ರವಿ ತಳವಾರ, ಎಂ.ಎಂ.ಗುಡಗೂರು, ಹನುಮಂತಪ್ಪ ಚಳಗೇರಿ, ಭಾರತಿ ಅಳವಂಡಿ, ಸಂಕಪ್ಪ ಮಾರನಾಳ ಸೇರಿದಂತೆ ಮತ್ತಿತರರು ಇದ್ದರು.