ಕೊಪ್ಪಳ 29 : ಕರ್ನಾಟಕ ಸಾಂಸ್ಕೃತಿಕ ನಾಯಕ ಬಸವಣ್ಣನವರ ಜಯಂತ್ಯುತ್ಸವವು ಕೊಪ್ಪಳದಲ್ಲಿ ಇದೇ ದಿ.30 ಬುಧವಾರ ಜರುಗಲಿದೆ. ಮುಂಜಾನೆ 9 ಗಂಟೆಗೆ ಬಸವೇಶ್ವರ ವೃತ್ತದಲ್ಲಿ ಷಟಸ್ಥಲ ಧ್ವಜಾರೋಹಣ ಮತ್ತು ಬಸವಣ್ಣನವರ ಪುತ್ಥಳಿಗೆ ಪೂಜೆ ನೆರವೇರಲಿದೆ. ಸಂಜೆ 4 ಗಂಟೆಗೆ ಕೋಟೆ ರಸ್ತೆಯ ಮಹೇಶ್ವರ ದೇವಸ್ಥಾನದಿಂದ - ಶಾರದಾ ಚಿತ್ರಮಂದಿರ ಮಾರ್ಗವಾಗಿ ಗವಿಮಠದ ಆವರಣದವರೆಗೆ ಬಸವೇಶ್ವರರ ಭಾವಚಿತ್ರ ಮೆರವಣಿಗೆ ನಡೆಯಲಿದೆ. ಮೆರವಣಿಗೆ ನಂತರ ಸಂಜೆ 6.00 ಗಂಟೆಗೆ ಗವಿಮಠದ ಆವರಣದಲ್ಲಿ ‘ಬಸವಗೋಷ್ಠಿ’ ನೆರವೇರಲಿದೆ. ಬಸವ ಸಮಿತಿ, ಬೆಂಗಳೂರಿನ ಡಾ. ಅರವಿಂದ ಜತ್ತಿ ಮತ್ತು ಧಾರವಾಡದ ಕೆ.ಎಲ್.ಇ. ಮೃತ್ಯುಂಜಯ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ವೀಣಾ ಯಲಿಗಾರ ಇವರು ಬಸವ ಚಿಂತನೆ ಪ್ರಸ್ತುತ ಪಡಿಸುವರು. ಗವಿಸಿದ್ಧೇಶ್ವರ ಮಹಾಸ್ವಾಮಿಗಳು, ಸಂಸ್ಥಾನ ಗವಿಮಠ ಇವರು ದಿವ್ಯ ಸಾನಿಧ್ಯವನ್ನು ಮತ್ತು ಜನವಾಡದ ಅಲ್ಲಮಪ್ರಭು ಪೀಠದ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು ಪಾವನ ಸಾನಿಧ್ಯವನ್ನು ವಹಿಸುವರು.
ಇದೇ ಸಂದರ್ಭದಲ್ಲಿ ಕಾಯಕ-ಸೇವೆ-ಸಾಧನೆಗಳ ಮೂಲಕ ಸಮಾಜಕ್ಕೆ ಮಾದರಿಯಾದ ಇಬ್ಬರು ಮಹನೀಯರಿಗೆ ‘ಬಸವ ಕಾರುಣ್ಯ’ ಪ್ರಶಸ್ತಿ ನೀಡಿ ಗೌರವಿಸಲಾಗವುದು.
ಬಸವ ಜಯಂತ್ಯುತ್ಸವ ಸಮಿತಿಯ ಈ ಕಾರ್ಯಕ್ರಮದ ಆಯೋಜನೆಯಲ್ಲಿ ಕೊಪ್ಪಳ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ನಗರಸಭೆಯ ಸಹಯೋಗವಿದೆ. ಕಾರ್ಯಕ್ರಮದ ನಂತರ ಪ್ರಸಾದದ ವ್ಯವಸ್ಥೆ ಇರುತ್ತದೆ. ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬಸವಾಭಿಮಾನಿಗಳು ಆಗಮಿಸಿ, ಬಸವ ಜಯಂತ್ಯುತ್ಸವವನ್ನು ಯಶಸ್ವಿಗೊಳಿಸಬೇಕು ಎಂದು ಬಸವ ಜಯಂತ್ಯುತ್ಸವ ಸಮಿತಿಯ ಅಧ್ಯಕ್ಷರಾದ ಬಸವರಾಜ ಬಳ್ಳೊಳ್ಳಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.