ಬಳ್ಳಾರಿ 28: ನಗರದ ಹೃದಯ ಭಾಗದಲ್ಲಿರುವ ಏಕಶಿಲಾ ಬೆಟ್ಟಕ್ಕೆ ರೋಪ್ ವೇ ನಿರ್ಮಾಣ ಮಾಡುವ ಸಂಬಂಧ ಕಾರ್ಯ ಸಾಧ್ಯತೆಯ ಕುರಿತು ಸ್ಥಳ ಪರೀಶೀಲನೆ ಮಾಡಲು ಮೇ.ರೈಟ್ಸ್ ಸಂಸ್ಥೆಯ ಪ್ರತಿನಿಧಿಗಳು ಬಳ್ಳಾರಿಯ ಏಕಶಿಲಾ ಬೆಟ್ಟಕ್ಕೆ ಶುಕ್ರವಾರ ಭೇಟಿ ನೀಡಿ ಸ್ಥಳ ಪರೀಶೀಲಿಸಿದರು.
ಸ್ಥಳ ಪರೀಶೀಲನೆ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಆಗಮಿಸಿ ಬಳ್ಳಾರಿ ನಗರದ ಏಕಶಿಲಾ ಬೆಟ್ಟಕ್ಕೆ ರೋಪ್ ವೇ ಅಳವಡಿಸುವ ಸಂಬಂಧ ಅಗತ್ಯ ಸಲಹೆ ಹಾಗೂ ನಿರ್ದೇಶನ ನೀಡಿದರು.
ಮುಖ್ಯವಾಗಿ ರೋಪ್ ವೇ ಯ ಪ್ರಾರಂಭಿಕ ಸ್ಥಳ ಹಾಗೂ ಅಂತ್ಯದ ಸ್ಥಳವನ್ನು ಗುರುತಿಸಲು ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯ ಅಧಿಕಾರಿಗಳಿಂದ ಇದೇ ಸಂದರ್ಭದಲ್ಲಿ ಮಾಹಿತಿ ಪಡೆದುಕೊಂಡರು. ಬೆಟ್ಟದ ಸುತ್ತಲೂ ಸರ್ಕಾರಿ ನಿವೇಶನ ಅಥವಾ ಸ್ಥಳ ಲಭ್ಯವಿದ್ದಲ್ಲಿ ಗುರುತಿಸುವಂತೆ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಏಕಶಿಲಾ ಬೆಟ್ಟಕ್ಕೆ ರೋಪ್ ವೇ ಅಳವಡಿಸುವ ಸಂಬಂಧ ಸ್ಥಳ ಪರೀಶೀಲನಾ ವರದಿಯನ್ನು ಪ್ರವಾಸೋದ್ಯಮ ಇಲಾಖೆಯ ಕೇಂದ್ರ ಕಚೇರಿಗೆ ಸಲ್ಲಿಸುವಂತೆ ಮೇ.ರೈಟ್ಸ್ ಸಂಸ್ಥೆಯ ಪ್ರತಿನಿಧಿಗಳಿಗೆ ಸೂಚಿಸಿದರು.
ಈ ಬಗ್ಗೆ ನವದೆಹಲಿಯ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಮಹಾನಿರ್ದೇಶಕರೊಂದಿಗೆ ಚರ್ಚಿಸಿ ಶೀಘ್ರದಲ್ಲಿಯೇ ಗೂಗಲ್ ಮೀಟ್ ಸಭೆ ಆಯೋಜಿಸಲಾಗುವುದು ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ತಿಳಿಸಿದರು.
ಸ್ಥಳ ಪರೀಶೀಲನೆಯ ಸಂದರ್ಭದಲ್ಲಿ ರೈಟ್ಸ್ ಸಂಸ್ಥೆಯ ಪ್ರತಿನಿಧಿ ಸತೀಶ್ ವರ್ಮ, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ರವೀಂದ್ರ ಸಿ.ಎ., ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಪ್ರಭುಲಿಂಗ.ಎಸ್ ತಳಕೇರಿ ಹಾಗೂ ಮತ್ತೀತರರು ಹಾಜರಿದ್ದರು.