ಬಳ್ಳಾರಿ: ಡೆಂಗ್ಯೂವಿನಿಂದ ದೂರವಿರಿ ಡಾ.ಶಿವರಾಜ ಕರೆ

ಲೋಕದರ್ಶನ ವರದಿ

ಬಳ್ಳಾರಿ 01: ಸೋಂಕು ಹೊಂದಿದ ಈಡಿಸ್ ಇಜಿಪ್ಟೆ ಸೊಳ್ಳೆಯು ವ್ಯಕ್ತಿಗೆ ಕಚ್ಚುವುದರಿಂದ ಡೆಂಗ್ಯೂ ರೋಗ ಹರಡುತ್ತದೆ. ಆದ್ದರಿಂದ ಸಾರ್ವಜನಿಕರು ತಮ್ಮ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಶಿವರಾಜ ಹೆಡೆ ಅವರು ಹೇಳಿದರು.

     ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಾನಗರ ಪಾಲಿಕೆ, ಹಾಗೂ ನಗರ ಆರೋಗ್ಯ ಕೇಂದ್ರ  ಇವರ ಸಂಯುಕ್ತಾಶ್ರಯದಲ್ಲಿ  ನಗರದ ರೇಣುಕಾನಗರ 7ನೇ ಕ್ರಾಸ್ನಲ್ಲಿ ಜರುಗಿದ ಡೆಂಗ್ಯೂ ನಿಯಂತ್ರಣ ಕುರಿತು ಸಾರ್ವಜನಿಕರಿಗೆ ಮಂಗಳವಾರ ಏರ್ಪಡಿಸಿದ್ದ ಆರೋಗ್ಯ ಜಾಗೃತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. 

    ಸಾಮಾನ್ಯವಾಗಿ ಹಗಲು ಕಚ್ಚುವ ಈ ಸೊಳ್ಳೆಯು ಸ್ವಚ್ಛ ನೀರಿನಲ್ಲಿ ಮೊಟ್ಟೆಯಿಟ್ಟು ತನ್ನ ಸಂತತಿ ವೃದ್ದಿ ಮಾಡಿಕೊಂಡು ಮೊಟ್ಟೆಯಿಟ್ಟ 7 ದಿನಗಳ ನಂತರ ಪುನಃ ಸೊಳ್ಳೆಯಾಗಿ ಹೊರಬರುತ್ತದೆ. ಸೋಂಕು ಹೊಂದಿದ ಸೊಳ್ಳೆಯು ಹತ್ತಿರವಿರುವ ವ್ಯಕ್ತಿಯನ್ನು ಕಚ್ಚಿದಾಗ ಅವರಿಗೆ ಡೆಂಗ್ಯೂ ರೋಗ ಬರುತ್ತದೆ ಎಂದು ವಿವರಿಸಿದರು. 

ಜಿಲ್ಲಾ ಮಲೇರಿಯಾ ನಿಯಂತ್ರಣ ಅಧಿಕಾರಿ ಡಾ.ಅಬ್ದುಲ್ಲಾ ಅವರು  ಮಾತನಾಡಿ, ಸಾರ್ವಜನಿಕರು ತಮ್ಮ ಮನೆಯ ಮುಂದಿನ ಬಳಿಕೆಗಾಗಿ ನೀರು ಸಂಗ್ರಹಿಸಿಡುವ ಸಿಮೇಂಟ್ ತೊಟ್ಟಿ, ಕಲ್ಲು ಚಪ್ಪಡಿಯಿಂದ ನಿರ್ಮಸಿದ ತೊಟ್ಟಿ, ಡ್ರಮ್ಮು, ಬ್ಯಾರೆಲ್, ಮಣ್ಣಿನ ಮಡಿಕೆ, ಮುಂತಾದವುಗಳನ್ನು ವಾರಕ್ಕೊಮ್ಮೆ ತೊಳೆದು ಖಾಲಿ ಮಾಡಿ ನೀರು ತುಂಬಿದ ನಂತರ ಮುಚ್ಚಳವನ್ನು ಭದ್ರವಾಗಿ ಮುಚ್ಚುವುದು ಅಥವಾ ನೀರಿನ ಮೇಲೆ ಬಟ್ಟೆಯನ್ನು ಕಟ್ಟುವುದು ತಪ್ಪದೇ ಪಾಲಿಸಬೇಕು ಎಂದು ಹೇಳಿದರು.

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಸಂಸ್ಥೆಯ ರೂಪಶ್ರೀ ಹಾಗೂ ಎನ್.ವಿ.ಬಿ.ಡಿ.ಸಿ.ಪಿ ಕನ್ಸಲ್ಟೆಂಟ್ ಹೆಚ್.ಪ್ರತಾಪ್  ಅವರು ಮಾತನಾಡಿದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್. ದಾಸಪ್ಪನವರ್ ಅವರು ಸ್ವಾಗತಿಸಿ ವಂದಿಸಿದರು. 

ಈ ಸಂದರ್ಭದಲ್ಲಿ ತಾಲೂಕಾ ಆರೋಗ್ಯಾಧಿಕಾರಿ ಡಾ.ಕೆ.ಜಿ.ವಿರೇಂದ್ರ ಕುಮಾರ, ಜಿಲ್ಲಾ ಗುಣಮಟ್ಟ ಖಾತರಿ ವ್ಯವಸ್ಥಾಪಕ ಡಾ.ಲಕ್ಷ್ಮೀಕಾಂತ, ವೈದ್ಯಾಧಿಕಾರಿ ಡಾ.ಸುಧಾರಾಣಿ, ಡಾ.ತಬ್ಸುಮ್, ಕ್ಷೇತ್ರ ಆರೋಗ್ಯ ಶಿಕ್ಷಣ ಅಭಿವೃದ್ಧಿ ಇಲಾಖೆಯ ಶಾಂತವ್ವ ಉಪ್ಪಾರ, ಶಕೀಲ್ ಅಹಮ್ಮದ್, ಎಂಟಿಎಸ್ ಬಾಬುರಾವ್, ಹಿಮಅಸ ಜಲಜಾಕ್ಷಿ ಸೇರಿದಂತೆ ನಗರ ಆರೋಗ್ಯ ಕೇಂದ್ರದ ಸಿಬ್ಬಂದಿ ವರ್ಗ ಮತ್ತು ಆಶಾ ಕಾರ್ಯಕತರ್ೆಯರು ಹಾಗೂ ಬಡಾವಣೆಯ ನಾಗರಿಕರು ಇದ್ದರು.