ಲೋಕದರ್ಶನ ವರದಿ
ಬಳ್ಳಾರಿ 26: ವಿವಿಧ ಇಲಾಖೆಗಳ ಯೋಜನೆಗಳನ್ನು ಸಮೀಕರಿಸಿ ಜಲಶಕ್ತಿ ಅಭಿಯಾನದ ಅಡಿ ನಾನಾ ಕೆಲಸಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದರ ಮೂಲಕ ಜಲಸಂರಕ್ಷಣೆ ಮತ್ತು ಅಂತರ್ಜಲಮಟ್ಟ ಹೆಚ್ಚಳಕ್ಕೆ ಕ್ರಮಕೈಗೊಳ್ಳುವಂತೆ ರಾಷ್ಟ್ರೀಯ ಔಷಧೀಯ ಬೆಲೆ ಪ್ರಾಧಿಕಾರದ ಸದಸ್ಯ ಕಾರ್ಯದಶರ್ಿ ರೀತು ದಿಲ್ಲಾನ್ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಲಶಕ್ತಿ ಅಭಿಯಾನದ ಅನುಷ್ಠಾನಕ್ಕೆ ಸಂಬಂಧಿಸಿದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಲಶಕ್ತಿ ಅಭಿಯಾನದ ಪರಿಣಾಮಕಾರಿ ಅನುಷ್ಠಾನದ ವಿಷಯದಲ್ಲಿ ದೇಶದಲ್ಲಿಯೇ ಬಳ್ಳಾರಿ ಸದ್ಯ 5ನೇ ಸ್ಥಾನದಲ್ಲಿರುವುದು ಅತ್ಯಂತ ಹೆಮ್ಮೆಯ ವಿಷಯ; ಇದೇ ರೀತಿ ಅಂತರ್ಜಲಮಟ್ಟ ಹೆಚ್ಚಳ ಮತ್ತು ಅರಣ್ಯೀಕರಣದಂತ ಕ್ರಮಗಳನ್ನು ಕೈಗೊಳ್ಳುವುದರ ಮೂಲಕ ಜಲಶಕ್ತಿ ಅಭಿಯಾನದ ಉದ್ದೇಶಗಳನ್ನು ಈಡೇರಿಸಿ ಎಂದು ಅವರು ಹೇಳಿದರು.
ದೇಶದಾದ್ಯಂತ ಅಂತರ್ಜಲ ಕೊರತೆ, ನೀರಿನ ಅಭಾವದ ಆಧಾರದ ಮೇಲೆ 1590 ಬ್ಲಾಕ್ ಗಳನ್ನು ಗುರುತಿಸಲಾಗಿದ್ದು, ಆ ಬ್ಲಾಕ್ ಗಳಲ್ಲಿ ಜಲಸಂರಕ್ಷಣೆ, ಅಂತರ್ಜಲಮಟ್ಟ ಹೆಚ್ಚಳ ಸೇರಿದಂತೆ ಇನ್ನೀತರ ಜಲ ಸಂಬಂಧಿತ ಕ್ರಮಗಳ ಅನುಷ್ಠಾನಕ್ಕೆ ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಜಲಶಕ್ತಿ ಅಭಿಯಾನದಡಿ ಉದ್ದೇಶಿಸಲಾಗಿದ್ದು, ಈ ಮೊದಲ ಹಂತದಲ್ಲಿ ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ಮತ್ತು ಹಗರಿ ಬೊಮ್ಮನಹಳ್ಳಿ ತಾಲೂಕುಗಳು ಆಯ್ಕೆಯಾಗಿವೆ ಎಂದು ವಿವರಿಸಿದ ಅವರು ಅಂತರ್ಜಲಮಟ್ಟ ತೀವ್ರವಾಗಿ ಕುಸಿದಿರುವ ಈ ತಾಲೂಕುಗಳಲ್ಲಿ ವಿವಿಧ ಜಲಸಂಬಂಧಿತ ಕ್ರಮಗಳನ್ನು ಕೈಗೊಂಡು ಅಂತರ್ಜಲಮಟ್ಟ ಹೆಚ್ಚಳ ಮಾಡಲಾಗುವುದು ಎಂದರು.
ಪಾರಂಪರಿಕ ಜಲಮೂಲಗಳಾದ ಕೆರೆ, ಬಾವಿ, ನದಿಗಳ ರಕ್ಷಣೆ, ಜಲಸಂರಕ್ಷಣೆ, ಜಲಮರುಪೂರಣ, ಅರಣ್ಯೀಕರಣ ಮಾಡುವುದು ಜಲಶಕ್ತಿ ಅಭಿಯಾನದ ಪ್ರಮುಖ ಉದ್ದೇಶಗಳಾಗಿವೆ. ಮೊದಲ ಹಂತದ ಜಲಶಕ್ತಿ ಅಭಿಯಾನದ ಅನುಷ್ಠಾನ ಈಗಾಗಲೇ ಆರಂಭವಾಗಿದ್ದು, ಸೆಪ್ಟೆಂಬರ್ 15ರವರೆಗೆ ನಡೆಯಲಿದೆ. ಹಗರಿಬೊಮ್ಮನಹಳ್ಳಿ ಮತ್ತು ಹರಪನಳ್ಳಿ ತಾಲೂಕುಗಳಲ್ಲಿ ಈ ಜಲಶಕ್ತಿ ಅಭಿಯಾನದಡಿ ನಾನಾ ಕೆಲಸಗಳನ್ನು ಕೈಗೊಳ್ಳಲು ತೀರ್ಮಾನಿಸಲಾಗಿದೆ ಎಂದರು.
ಕೃಷಿ, ಸಣ್ಣ ನೀರಾವರಿ, ಬೃಹತ್ ನೀರಾವರಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಪಿಆರ್ ಇಡಿ, ತೋಟಗಾರಿಕೆ ಸೇರಿದಂತೆ ವಿವಿಧ ಇಲಾಖೆಗಳು ಜಲಶಕ್ತಿ ಅಭಿಯಾನದ ಅನುಷ್ಠಾನಕ್ಕೆ ನರೇಗಾ ಅಡಿ ಮತ್ತು ತಮ್ಮ ಇಲಾಖೆಗಳ ರಾಜ್ಯ ಮತ್ತು ಕೇಂದ್ರ ಸರಕಾರದ ಅನುದಾನದ ಮೂಲಕ ಕ್ರಮ ಕೈಗೊಳ್ಳಬೇಕು ಎಂದರು.
ಜಿಲ್ಲಾ ಖನಿಜ ನಿಧಿ ಮತ್ತು ಎಚ್ಕೆಆರ್ಡಿಬಿ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ಜಲಸಂರಕ್ಷಣೆ ಮತ್ತು ಅಂತರ್ಜಲಮಟ್ಟದ ಹೆಚ್ಚಳ ಮಾಡಲು ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಅವರು ವಿವರಿಸಿದರು. ಜಿಪಂ ಸಿಇಒ ಕೆ.ನಿತೀಶ್ ಮಾತನಾಡಿದರು.
ಈ ಸಂದರ್ಭದಲ್ಲಿ ಕೃಷಿ, ಸಣ್ಣನೀರಾವರಿ, ಬೃಹತ್ ನೀರಾವರಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.