ಮುಡಾದ ನಿವೇಶನ ಹಂಚಿಕೆ ಪ್ರಕರಣದಲ್ಲಿ ಪಾರ್ವತಿ ಸಿದ್ದರಾಮಯ್ಯ,ಸಚಿವ ಬೈರತಿ ಸುರೇಶ್ ಗೆ ಬಿಗ್ ರಿಲೀಫ್

Big relief to Parvathy Siddaramaiah, Minister Bairati Suresh in Muda land allotment case

ಬೆಂಗಳೂರು 07: ಮುಡಾದ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಮತ್ತು ಸಚಿವ ಬೈರತಿ ಸುರೇಶ್ ಅವರಿಗೆ ಹೈಕೋರ್ಟ್ ಶುಕ್ರವಾರ ಬಿಗ್ ರಿಲೀಫ್ ನೀಡಿದೆ.

ಮುಡಾ ಪ್ರಕರಣ ಸಂಬಂಧ ಇಡಿ ನೀಡಿದ್ದ ಸಮನ್ಸ್ ರದ್ದು ಕೋರಿ ಪತ್ನಿ ಪಾರ್ವತಿ ಮತ್ತು ಸಚಿವ ಬೈರತಿ ಸುರೇಶ್ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಏಕ ಸದಸ್ಯ ಪೀಠ, ತೀರ್ಪು ಕಾಯ್ದಿರಿಸಿತ್ತು.

ಇಂದು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ ಇಡಿ ಸಮನ್ಸ್​ ರದ್ದುಗೊಳಿಸಿ ಆದೇಶ ಹೊರಡಿಸಿದೆ. ಇದರಿಂದ ಸಿಎಂ ಸಿದ್ದರಾಮಯ್ಯ ಸಹಿತ ಪತ್ನಿ ಪಾರ್ವತಿ ಹಾಗೂ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ನಿರಾಳಾಗಿದ್ದಾರೆ.

ವಿಚಾರಣೆಯ ಸಮಯದಲ್ಲಿ, ಪಾರ್ವತಿ ಪರ ವಾದ ಮಂಡಿಸಿದ್ದ ಹಿರಿಯ ವಕೀಲ ಸಂದೇಶ್ ಜೆ ಚೌಟ ಅವರು, ಈಗಾಗಲೇ ಪ್ರಶ್ನಾರ್ಹ ನಿವೇಶನಗಳನ್ನು ಮರಳಿಸಲಾಗಿದೆ. ಸೈಟ್ ಗಳನ್ನು ಮರಳಿಸಿರುವುದಿರಂದ ಇಡಿಗೆ ತನಿಖೆ ನಡೆಸುವ ಅಧಿಕಾರ ಇಲ್ಲ. ಪಾರ್ವತಿ ಅವರು ಅಕ್ಟೋಬರ್ 1, 2024 ರಂದು ವಿವಾದಿತ ಸೈಟ್ ಗಳನ್ನು ಹಿಂದಿರುಗಿಸಿದ್ದಾರೆ|ಮುಡಾದ 14 ಸೈಟ್ ಗಳಲ್ಲದೇ 1708 ಸೈಟ್ ಗಳ ಬಗ್ಗೆಯೂ ತನಿಖೆ ನಡೆಸುತ್ತಿದೆ. ಈಗಾಗಲೇ 160 ಸೈಟ್ ಗಳನ್ನು ಇಡಿ ತಾತ್ಕಾಲಿಕ ಜಪ್ತಿ ಮಾಡಿದೆ. ತನ್ನ ಕಾರ್ಯವ್ಯಾಪ್ತಿ ಮೀರಿ ಇಡಿ ಪರ್ಯಾಯ ತನಿಖೆ ನಡೆಸುತ್ತಿದೆ. ಇಡಿ ತಾತ್ಕಾಲಿಕ ಜಪ್ತಿ ಆದೇಶದಲ್ಲಿ ಹಲವು ಅಂಶಗಳನ್ನು ಪ್ರಸ್ತಾಪಿಸಿದೆ. ಭೂಸ್ವಾಧೀನ, ಭೂಪರಿವರ್ತನೆ ಇತ್ಯಾದಿಗಳ ಬಗ್ಗೆಯೂ ತನಿಖೆ ನಡೆಸಿದೆ. ಲೋಕಾಯುಕ್ತ ಪೊಲೀಸರ ತನಿಖಾ ವ್ಯಾಪ್ತಿಯಲ್ಲಿ ಇಡಿ ಪ್ರವೇಶಿಸಿದೆ. ಮುಡಾಗೆ ಹಿಂತಿರುಗಿಸಿರುವ 14 ಸೈಟ್​ಗಳನ್ನು ಇಡಿ ಜಪ್ತಿ ಮಾಡಿಲ್ಲ. ಆದರೆ ಇತರೆ 160 ಸೈಟ್ ಗಳನ್ನು ಇಡಿ ಜಪ್ತಿ ಮಾಡಿದೆ. ಈಗಾಗಲೇ ಲೋಕಾಯುಕ್ತ ಪೊಲೀಸರು ಬಿ ರಿಪೋರ್ಟ್ ಸಲ್ಲಿಸಿದ್ದಾರೆ. ತನಿಖೆಯಲ್ಲಿ ಯಾವುದೇ ಅಕ್ರಮ ಕಂಡುಬಂದಿಲ್ಲವೆಂದು ವರದಿ ಸಲ್ಲಿಸಿದ್ದಾರೆ ಎಂದು ಸಿಎಂ ಪತ್ನಿ ಪಾರ್ವತಿ ಪರ ಸಂದೇಶ್ ಚೌಟ ವಾದ ಮಂಡಿಸಿದ್ದರು.