ನವದೆಹಲಿ, ಜ23 : ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮ ವಾರ್ಷಿಕೋತ್ಸವ ಅಂಗವಾಗಿ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮತ್ತು ಉಪರಾಷ್ಟ್ರಪತಿ ಎಂ ವೆಂಕಯ್ಯನಾಯ್ಡು ಗುರುವಾರ ಮಹಾ ನಾಯಕನಿಗೆ ಗೌರವ ನಮನ ಸಲ್ಲಿಸಿದ್ದಾರೆ.
ರಾಷ್ಟ್ರಪತಿಇ ಭವನದಲ್ಲಿ ನೇತಾಜಿಯವರ ಭಾವಚಿತ್ರಕ್ಕೆ ರಾಮನಾಥ್ ಕೋವಿಂದ್ ಪುಷ್ಪನಮನ ಸಲ್ಲಿಸಿದರು.
‘ರಾಷ್ಟ್ರನಾಯಕ ಮತ್ತು ಭಾರತ ಸ್ವಾತಂತ್ರ್ಯ ಸಂಗ್ರಾಮದ ಮಹಾ ನಾಯಕ ನೇತಾಜಿ ಸುಭಾಷ್ ಚಂದ್ರಬೋಸ್ ಜೀ ಅವರ ಜನ್ಮ ವಾರ್ಷಿಕೋತ್ಸವ ಅಂಗವಾಗಿ ಶ್ರದ್ಧಾಂಜಲಿ ಸಮರ್ಪಿಸುತ್ತಿದ್ದೇನೆ.’ ಎಂದು ಎಂ.ವೆಂಕಯ್ಯನಾಯ್ಡು ಶ್ರದ್ಧಾಂಜಲಿ ಸಲ್ಲಿಸಿ ತಮ್ಮ ಸಂದೇಶದಲ್ಲಿ ಹೇಳಿದ್ದಾರೆ.
‘ಸುಭಾಷ್ ಚಂದ್ರ ಬೋಸ್ ಅವರು ಜನರಲ್ಲಿ ದೇಶಭಕ್ತಿಯನ್ನು ತುಂಬಿದರು. ಅವರು ನೀಡಿದ ‘ಜೈಹಿಂದ್’ ಘೋಷಣೆ ಸಾವಿರಾರು ಜನರಿಗೆ ಸ್ಫೂರ್ತಿಯಾಗಿ, ಸ್ವಾತಂತ್ರ ಸಂಗ್ರಾಮದಲ್ಲಿ ಧುಮುಕುವಂತೆ ಮಾಡಿದೆ.’ ಎಂದು ವೆಂಕಯ್ಯನಾಯ್ಡು ಹೇಳಿದ್ದಾರೆ.