ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಶತಮಾನೋತ್ಸವ

Centenary of the Primary Agricultural Credit Cooperative Society

ಹಾನಗಲ್ 01 :ರೈತರು ಮತ್ತು ಬಡವರ ಸಂಕಷ್ಟಕ್ಕೆ ಸ್ಪಂದಿಸಲು ಕರುನಾಡಿನಲ್ಲಿ ಸಹಕಾರ ಕ್ಷೇತ್ರ ಜನ್ಮ ತಳೆಯಿತು ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು. 

ತಾಲೂಕಿನ ಆಡೂರು ಗ್ರಾಮದ ಮಾಲತೇಶ ದೇವಸ್ಥಾನದ ಆವರಣದಲ್ಲಿ ನಡೆದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಶತಮಾನೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ರೈತರು ಮತ್ತು ಬಡವರು ಶ್ರೀಮಂತರ ಎದುರು ತಲೆ ಬಾಗಿ ನಿಲ್ಲುವಂಥ ಸ್ಥಿತಿ ಹಿಂದೆ ಇತ್ತು. ಸಾಲ ಮರುಪಾವತಿ ಮಾಡದಿದ್ದರೆ ಶ್ರೀಮಂತರ ಮನೆಗಳಲ್ಲಿ ಜೀತದಾಳುಗಳಾಗಿ ತಲೆ ತಲಾಂತರದಿಂದ ಕೆಲಸ ಮಾಡಬೇಕಿತ್ತು. ಇದನ್ನು ತಪ್ಪಿಸಲು ಕಣಗಿನಹಾಳದ ಸಿದ್ದನಗೌಡ ಪಾಟೀಲ ಅವರು ಸಹಕಾರಿ ಸಂಘ ಸ್ಥಾಪಿಸಿದರು. ಸಹಕಾರದ ಮೂಲಕ ನಮ್ಮ ಸಮಸ್ಯೆಗಳಿಗೆ ನಾವೇ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ ಎಂದು ಹೇಳಿದ ಅವರು ಸಂಘದ ಉಗ್ರಾಣ ನಿರ್ಮಾಣಕ್ಕೆ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಡಿ 10 ಲಕ್ಷ ರೂ. ಅನುದಾನ ನೀಡುವ ಭರವಸೆ ನೀಡಿ, ಆಡೂರಿನ ಸಂಘ ನೂರು ವರ್ಷ ಪೂರೈಸಿರುವುದು ಖುಷಿಯ ಸಂಗತಿ. ಸಂಘದ ಬೆಳವಣಿಗೆಯ ವಿಚಾರದಲ್ಲಿ ರಾಜಕಾರಣ ಮಾಡದೇ ಕೈ ಜೋಡಿಸಿ, ಶ್ರಮ ವಹಿಸಿರುವ ಗ್ರಾಮಸ್ಥರು ಅಭಿನಂದನೆಗೆ ಅರ್ಹರು ಎಂದರು.  ಸಾನ್ನಿಧ್ಯ ವಹಿಸಿದ್ದ ಹಾವೇರಿಯ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಮಾತನಾಡಿ, ಗ್ರಾಮೀಣ ಜನರು ಸ್ವಾವಲಂಬನೆಯತ್ತ ಹೆಜ್ಜೆ ಹಾಕಲು ಮತ್ತು ಉಳಿತಾಯ ಮನೋಭಾವ ಹೆಚ್ಚಿಸಿಕೊಳ್ಳಲು ಸಹಕಾರ ಕ್ಷೇತ್ರ ವರದಾನವಾಗಿದೆ. ಅನಗತ್ಯ ಹಸ್ತಕ್ಷೇಪ ಮತ್ತು ಮೇಲಾಟಗಳಿಂದ ಸಹಕಾರ ಕ್ಷೇತ್ರಕ್ಕೆ ತೀವ್ರ ಹಿನ್ನಡೆ ಉಂಟಾಗುತ್ತಿದೆ ಎಂದರು.  ಜಿಪಂ ಮಾಜಿ ಸದಸ್ಯ ಎನ್‌.ಬಿ.ಪೂಜಾರ, ತಾಪಂ ಮಾಜಿ ಉಪಾಧ್ಯಕ್ಷ ಸಿದ್ದಲಿಂಗಪ್ಪ ಶಂಕರಿಕೊಪ್ಪ ಮಾತನಾಡಿ, ಉತ್ತಮ ಸೇವೆಗಾಗಿ ಸಂಘ ರಾಜ್ಯಮಟ್ಟದ ಹತ್ತು, ಹಲವು ಪ್ರಶಸ್ತಿಗಳಿಗೆ ಭಾಜನವಾಗಿದೆ. ಕೂಡಿ ಬಿದ್ದ ಹಾನಿಯನ್ನು ಕಳೆದು ಲಾಭದತ್ತ ಮುಖ ಮಾಡಿದೆ. ಇದಕ್ಕೆ ಪ್ರತಿಯೊಬ್ಬರ ಸಹಕಾರ ಕಾರಣ ಎಂದರು. 

ಸಂಘದ ಅಧ್ಯಕ್ಷ ದೊಡ್ಡಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಹಾವೇರಿಯ ಮಾಜಿ ಶಾಸಕ ಶಿವರಾಜ ಸಜ್ಜನರ, ಕೆಎಂಎಫ್ ಅಧ್ಯಕ್ಷ ಮಂಜನಗೌಡ ಪಾಟೀಲ, ಕೆಸಿಸಿ ಬ್ಯಾಂಕ್ ನಿರ್ದೇಶಕ ಸದಾನಂದ, ಪಿಕಾರ್ಡ್‌ ಬ್ಯಾಂಕಿನ ಅಧ್ಯಕ್ಷ ಮಹೇಶ ಬಣಕಾರ, ಟಿಎಪಿಸಿಎಂಎಸ್ ಅಧ್ಯಕ್ಷ ವಿಜಯೇಂದ್ರ ಕನವಳ್ಳಿ, ಗ್ರಾಪಂ ಅಧ್ಯಕ್ಷ ಮಾಲತೇಶ ಬಾರ್ಕಿ, ಡಾ.ಕೆ.ಎಸ್‌.ಕುಲಕರ್ಣಿ, ಶಿವಬಸಪ್ಪ ಪೂಜಾರ, ಭರಮಣ್ಣ ಶಿವೂರ, ಶಂಕರಗೌಡ ಸುಂಕದ, ಪುಟ್ಟಪ್ಪ ನರೇಗಲ್, ಮಹದೇವಪ್ಪ ಬಾಗಸರ, ಕವಿತಾ ಕಡೇರ, ಗುಡ್ಡಪ್ಪ ಮನ್ನಂಗಿ ಸೇರಿದಂತೆ ಇನ್ನೂ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.