ಕೇಂದ್ರ ಬಸ್ ನಿಲ್ದಾಣಕ್ಕೆ ವೀರರಾಣಿ ಕಿತ್ತೂರು ಚೆನ್ನಮ್ಮ ನಾಮಕರಣ: ಎಂ.ಬಿ.ಪಾಟೀಲ
ವಿಜಯಪುರ 02: ಕೇಂದ್ರ ಬಸ್ ನಿಲ್ದಾಣಕ್ಕೆ ವೀರರಾಣಿ ಕಿತ್ತೂರು ಚೆನ್ನಮ್ಮ ಬಸ್ ನಿಲ್ದಾಣ ಎಂದು ಹೆಸರು ನಾಮಕರಣ ಮಾಡಲು ಸರ್ಕಾರ ಆದೇಶ ಹೊರಡಿಸಿದೆ ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ವಿಜಯಪುರ ಹೃದಯ ಭಾಗದ ಕೇಂದ್ರ ಬಸ್ ನಿಲ್ದಾಣದಲ್ಲಿ ಈಗಾಗಲೇ ಅಶ್ವಾರೂಢ ವೀರರಾಣಿ ಚೆನ್ನಮ್ಮನವರ ಪ್ರತಿಮೆ ಸ್ಥಾಪಿಸಲಾಗಿದೆ. ಶಕ್ತಿ ಯೋಜನೆ ಉದ್ಘಾಟನೆ ಸಂದರ್ಭದಲ್ಲಿ ಬಸ್ ನಿಲ್ದಾಣಕ್ಕೆ ರಾಣಿ ಚೆನ್ನಮ್ಮನವರ ಹೆಸರಿಡುತ್ತೇನೆ ಎಂದು ನಾನು ತಿಳಿಸಿದ್ದೆ. ನನ್ನ ಕೋರಿಕೆ ಮನ್ನಿಸಿ ಇದೀಗ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ಮುತುವರ್ಜಿಯಿಂದ ವೀರರಾಣಿ ಕಿತ್ತೂರು ಚೆನ್ನಮ್ಮನವರ ಹೆಸರು ನಾಮಕರಣ ಮಾಡಲು ಆದೇಶ ಹೊರಡಿಸಿದ್ದಾರೆ. ಅಲ್ಲದೇ, ವಿಜಯಪುರ ವಿಮಾನ ನಿಲ್ದಾಣಕ್ಕೆ ವಿಶ್ವಗುರು ಬಸವೇಶ್ವರರ ಹೆಸರನ್ನು ನಾಮಕರಣಗೊಳಿಸಲಾಗಿದೆ. ಮಮದಾಪುರದಲ್ಲಿ 1200 ಎಕರೆ ಪ್ರದೇಶವನ್ನು ‘ಸಿದ್ದೇಶ್ವರ ಜೀವ ವೈವಿದ್ಯತೇಯ ಪಾರಂಪರಿಕ ಸಂರಕ್ಷಿತ ಅರಣ್ಯ ಪ್ರದೇಶ’ ಎಂದು ಈಗಾಗಲೇ ಹೆಸರಿಸಲಾಗಿದೆ. ಮಹಿಳಾ ವಿಶ್ವವಿದ್ಯಾಲಯಕ್ಕೆ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಎಂದು ನಾಮಕರಣಗೊಳಿಸಿದೆ. ಹೀಗೆ ಹಲವು ಪುಣ್ಯಪುರುಷರ ಹೆಸರು ನಾಮಕರಣಗೊಳಿಸುವುದರ ಮೂಲಕ ಅವರ ಆದರ್ಶಗಳು ಶಾಶ್ವತವಾಗಿ ಜನಮಾನಸದಲ್ಲಿ ನೆಲೆಗೊಳ್ಳುವಂತೆ ಮಾಡಲಾಗಿದೆ. ವಿಜಯಪುರದಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಗೆ ಆಗಮಿಸುವ ಸಂದರ್ಭದಲ್ಲಿ ಮಾನ್ಯ ಮುಖ್ಯಮಂತ್ರಿಗಳು ವಿಜಯಪುರ ಕೇಂದ್ರ ಬಸ್ ನಿಲ್ದಾಣದಲ್ಲಿ ಸ್ಥಾಪಿಸಿರುವ ರಾಣಿ ಚೆನ್ನಮ್ಮನವರ ಬೃಹತ್ ಪ್ರತಿಮೆಯನ್ನು ಅನಾವರಣಗೊಳಿಸುವರು ಎಂದು ಸಚಿವ ಎಂ.ಬಿ.ಪಾಟೀಲ ತಿಳಿಸಿದ್ದಾರೆ.