ನಾಗರಿಕ ರಕ್ಷಣೆ : ಜಿಲ್ಲೆಯಲ್ಲಿ ಮಾಕ್ ಡ್ರೀಲ್ ಇಂದು

Civil Defence: Mock drill in the district today

ನಾಗರಿಕ ರಕ್ಷಣೆ : ಜಿಲ್ಲೆಯಲ್ಲಿ ಮಾಕ್ ಡ್ರೀಲ್ ಇಂದು 

ಬಾಗಲಕೋಟೆ 11:  ರಾಜ್ಯ ಸರಕಾರದ ನಿರ್ದೇಶನದ ಮೇರೆಗೆ ಜಿಲ್ಲಾಡಳಿತ ಭವನದ ಆವರಣದಲ್ಲಿ ಮೇ 12 ರಂದು ಬೆಳಿಗ್ಗೆ 9.30 ಗಂಟೆಗೆ ನಾಗರಿಕ ಸುರಕ್ಷತಾ ಕುರಿತು ಮಾಕ್ ಡ್ರೀಲ್ ನಡೆಸಲಾಗುತ್ತಿದೆ ಎಂದು ಅಪರ ಪೊಲೀಸ್ ವರಿಷ್ಠಾಧಿಕಾರಿ ಪ್ರಸನ್ನ ದೇಸಾಯಿ ತಿಳಿಸಿದರು. 

ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿಂದು ಮಾಕ್ ಡ್ರೀಲ್ ನಡೆಸುವ ಕುರಿತು ಜರುಗಿದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಜಿಲ್ಲೆಯಲ್ಲಿ ನಾಗರಿಕ ಸುರಕ್ಷತಾ ತಾಲೀಮು ನಡೆಸುವ ಮೂಲಕ ತುರ್ತು ಪರಿಸ್ಥಿತಿ ಎದುರಾದ ವೇಳೆ ಸಾರ್ವಜನಿಕರು ಹೇಗೆ ತಮ್ಮನ್ನು ರಕ್ಷಣೆ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಅರಿವು ಮೂಡಿಸಲಾಗುತ್ತದೆ ಎಂದು ತಿಳಿಸಿದರು. 

ಜಿಲ್ಲಾಡಳಿತ, ಪೊಲೀಸ್, ಅಗ್ನಿಶಾಮಕದಳ, ಗೃಹರಕ್ಷಕದಳ, ಟ್ರಾಪಿಕ್, ಎನ್‌.ಸಿ.ಸಿ ಸೇರಿದಂತೆ ಇತರೆ ಇಲಾಖೆಗಳ ಸಹಯೋಗದಲ್ಲಿ ಮಾಕ್ ಡ್ರೀಲ್ ಹಮ್ಮಿಕೊಳ್ಳಲಾಗುತ್ತಿದೆ ಎಂದ ಅವರು ಮಾಕ್ ಡ್ರಿಲ್‌ಗೆ ಅಗತ್ಯವಾದ ಎಲ್ಲ ಸಿದ್ದತೆಗಳನ್ನು ಮಾಡಿಕೊಳ್ಳಬೇಕು. ಯಾವುದೇ ರೀತಿಯಲ್ಲಿ ಯಾರಿಗೂ ಅಪಾಯವಾಗದಂತೆ ಎಚ್ಚರಿಕಾ ಕ್ರಮಗಳನ್ನು ಕೈಗೊಂಡು ಮಾಕ್ ಡ್ರೀಲ್ ಯಶಸ್ವಿಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾಡಳಿತ ಭವನದಲ್ಲಿ ಸೂಕ್ತವಾದ ಜಾಗವನ್ನು ನಿಗದಿಪಡಿಸಿಕೊಂಡು ಅಗತ್ಯವಾದ ಮಾನವ ಸಂಪನ್ಮೂಲ, ಸೈರನ್, ಕಂಟ್ರೋಲ್ ರೂಮ್, ಅಂಬುಲೇನ್ಸ್‌, ಅಗ್ನಿಶಾಮಕ ವಾಹನ ಸೇರಿದಂತೆ ಎಲ್ಲ ರೀತಿಯ ವ್ಯವಸ್ಥೆಗಳನ್ನು ಮಾಡಿಕೊಳ್ಳಲು ತಿಳಿಸಿದರು. 

ಸಂಕಷ್ಟ ಪರಿಸ್ಥಿತಿಯಲ್ಲಿ ವ್ಯವಸ್ಥೆ ನಮ್ಮ ರಕ್ಷಣೆಗೆ ದಾವಿಸಲಿದೆ ಎಂಬ ವಿಶ್ವಾಸವನ್ನು ಜನರಲ್ಲಿ ಮೂಡುವಂತೆ ಯಶಸ್ವಿಯಾಗಿ ಮಾಕ್ ಡ್ರೀಲ್ ನಡೆಸಲು ತಿಳಿಸಿದರು. ಮಾಕ್ ಡ್ರೀಲ್‌ನಲ್ಲಿ ಸೈರನ್ ಹಾಕುವ ಮೂಲಕ ಜನರು ಸುರಕ್ಷಿತ ಸ್ಥಳಕ್ಕೆ ದಾವಿಸುವುದು, ನಾಗರಿಕ ರಕ್ಷಣಾ ಸಿಬ್ಬಂದಿ, ಪೊಲೀಸ್, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ ಕ್ಷಣಾರ್ಧದಲ್ಲಿ ಕಾರ್ಯಪ್ರವೃತ್ತರಾಗುವುದು, ಬೆಂಕಿ ನಂದಿಸುವುದು, ಕಟ್ಟಡ ಅವಶೇಷಗಳಡಿ ಸಿಲುಕಿದವರನ್ನು ರಕ್ಷಿಸಿ, ಅಂಬುಲೇನ್ಸ್‌ ಮೂಲಕ ಆಸ್ಪತ್ರೆಗೆ ಕಳುಹಿಸುವುದು ಹೀಗೆ ಹತ್ತು ಹಲವು ಕಾರ್ಯಾಚರಣೆಯ ಅಣಕು ಪ್ರದರ್ಶನ ಮೂಲಕ ಜಾಗೃತಿ ಮೂಡಿಸಲಾಗುತ್ತಿದ್ದು, ಎಲ್ಲ ರೀತಿಯ ಸಿದ್ದತೆ ಮಾಡಿಕೊಳ್ಳಲು ತಿಳಿಸಿದರು. 

ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಹಾಂತೇಶ್ವರ ಜಿದ್ದಿ, ಎನ್‌.ಸಿ.ಸಿ ಕಮಾಂಡ ಅಧಿಕಾರಿ ಮಾಚೇಂದ್ರನಾಥ ಪಾಟೀಲ, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಪ್ರಕಾಶ ಪವಾರ, ಜಿಲ್ಲಾ ಗೃಹರಕ್ಷಕದಳದ ಅಧಿಕಾರಿ ಎ.ಎಲ್‌.ಸಾಹುಕಾರ, ಜಿಲ್ಲಾ ಸಂಚಾರಿ ಅಧಿಕಾರಿ ರವಿ ಪವಾರ ಜಿಲ್ಲಾ ಸಮೀಕ್ಷಣಾಧಿಕಾರಿ ಡಾ.ದಯಾನಂದ ಕರೇನ್ನವರ ಸೇರಿದಂತೆ ಇತರರು ಉಪಸ್ಥಿತರಿದ್ದರು.