28 ರಂದು ಸ್ಲಂ ಜನರ ಸಾಮಾಜಿಕ ನ್ಯಾಯಕ್ಕಾಗಿ ಸಮಾವೇಶ
ಗದಗ-24, ಸ್ಲಂ ಜನಾಂದೋಲನ-ಕರ್ನಾಟಕ ಮತ್ತು ಸಾವಿತ್ರಿಬಾ ಪುಲೆ ರಾಜ್ಯ ಮಹಿಳಾ ಸಮಿತಿ ಸಹಕಾರದಲ್ಲಿ ಹಾಗೂ ಗದಗ ಜಿಲ್ಲಾ ಸ್ಲಂ ಸಮಿತಿ ನೇತೃತ್ವದಲ್ಲಿ ದಿನಾಂಕ 28ರಂದು ಬುಧವಾರ ಬೆಳ್ಳಿಗೆ, 11 ಘಂಟೆಗೆ ನಗರದ ಡಾ:ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ವಿಭಾಗ ಮಟ್ಟದ ಸ್ಲಂ ಜನರ ಸಮಾವೇಶ ಮತ್ತು ಸಾಂಸ್ಕ್ರತಿಕ ಹಬ್ಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಗದಗ ಜಿಲ್ಲಾ ಸ್ಲಂ ಸಮಿತಿ ಅಧ್ಯಕ್ಷರಾದ ಇಮ್ತಿಯಾಜ.ಆರ್.ಮಾನ್ವಿ ತಿಳಿಸಿದರು, ಅವರು ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ವಿಭಾಗ ಮಟ್ಟದಲ್ಲಿ ಬರುವ ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ಗದಗ, ಕೊಪ್ಪಳ ಮತ್ತು ಹೊಸಪೇಟೆ ಜಿಲ್ಲೆಗಳಿಂದ ಸ್ಲಂ ಜನರ ಹಾಗೂ ಕಲಾವಿದರು ಈ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.
ರಾಜ್ಯ ಕಾನೂನು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ: ಹೆಚ್.ಕೆ.ಪಾಟೀಲರು ಸಮಾವೇಶವನ್ನು ಉದ್ಘಾಟಿಸಲಿದ್ದಾರೆ. ರಾಜ್ಯ ಕಾರ್ಮಿಕ ಇಲಾಖೆ ಸಚಿವರಾದ ಸಂತೋಷ ಲಾಡ್ ಸ್ಲಂ ಹಬ್ಬ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಸ್ಲಂ ಜನಾಂದೋಲನ-ಕರ್ನಾಟಕ ರಾಜ್ಯ ಸಂಚಾಲಕರಾದ ಎ.ನರಸಿಂಹಮೂರ್ತಿ ಅಧ್ಯಕ್ಷತೆ ವಹಿಸಲಿದ್ದಾರೆ. ಕರ್ನಾಟಕ ಕೊಳಗೇರಿ ಅಭಿವೃಧ್ದಿ ಮಂಡಳಿಯ ಅಧ್ಯಕ್ಷರಾದ ಪ್ರಸಾದ ಅಬ್ಬಯ್ಯ, ರಾಜ್ಯದ ಮಾಜಿ ಮುಖ್ಯಮಂತ್ರಿಗಳು ಹಾಗೂ ಸಂಸದರಾದ ಬಸವರಾಜ ಬೋಮಾಯಿರವರು, ವಿಧಾನ ಪರೀಷತ್ ಸದಸ್ಯರಾದ ಪ್ರೋ.ಎಸ್.ವಿ. ಸಂಕನೂರು, ಜಿಲ್ಲಾಧಿಕಾರಿಗಳಾದ ಸಿ.ಎನ್ ಶ್ರೀಧರ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಸ್ಲಂ ಸಮಿತಿ ಉಪಾಧ್ಯಕ್ಷರಾದ ಅಶೋಕ ಕುಡತಿನ್ನಿ ಮಾತನಾಡಿ ಈಗಾಗಲೇ ವಿಭಾಗ ಮಟ್ಟದ ಸಮಾವೇಶ ಹಾಗೂ ಸ್ಲಂ ಹಬ್ಬ ಕುರಿತು ನಗರದ ಅನೇಕ ಸ್ಲಂ ಪ್ರದೇಶಗಳಲ್ಲಿ ಜಾಗೃತ ಸಭೆಗಳನ್ನು ನಡೆಸಿ ಮಾಹಿತಿಯನ್ನು ನೀಡಲಾಗಿದೆ. ಸ್ಲಂ ಜನರ ಸಮಾವೇಶಕ್ಕೆ ಗದಗ-ಬೆಟಗೇರಿ ನಗರ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಒಂದು ಸಾವಿರ ಸ್ಲಂ ಜನರು ಸೇರುವ ನೀರೀಕ್ಷೆ ಇದೆ, ಗದಗ-ಬೆಟಗೇರಿ ನಗರದ ಸ್ಲಂ ಜನರು ಮತ್ತು ವಸತಿರಹಿತ ನಿವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಮಾವೇಶಕ್ಕೆ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಹೇಳಿದರು. ಸಾವಿತ್ರಿಬಾ ಪುಲೆ ಮಹಿಳಾ ಸಮಿತಿ ಸಂಚಾಲಕಿ ಶೋಭಾ ಕಮತರ ಮಾತನಾಡಿ ವಿಭಾಗ ಮಟ್ಟದ ಸ್ಲಂ ಜನರ ಸಮಾವೇಶ ಗದಗ ನಗರದಲ್ಲಿ ಹಮ್ಮಿಕೊಂಡಿದ್ದು, ಈ ಒಂದು ಕಾರ್ಯಕ್ರಮಕ್ಕೆ ಎಲ್ಲಾ ಭಾಗಗಳಿಂದ ನೂರಾರು ಮಹಿಳೆಯರು ಭಾಗವಹಿಸುತ್ತಿದ್ದಾರೆ.
ಸಮಾವೇಶದ ನಂತರ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಸಲಾಗುತ್ತಿದ್ದು, ಈ ಕಾರ್ಯಕ್ರಮದ ಮೂಲಕ ನಮ್ಮ ಸ್ಲಂ ಪ್ರದೇಶಗಳಲ್ಲಿರುವ ಕಲಾವಿದರನ್ನು ಹೊರ ಜಗತ್ತಿಗೆ ಪರಿಚಯಸುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು, ಸಾವಿತ್ರಿಬಾ ಪುಲೆ ಹೊಸಪೇಟೆ ಜಿಲ್ಲೆಯ ಸಂಚಾಲಕಿ ವೆಂಕಮ್ಮ, ಗದಗ ಜಿಲ್ಲಾ ಸ್ಲಂ ಸಮಿತಿ ಕಾರ್ಯದರ್ಶಿ ಅಶೋಕ ಕುಸಬಿ, ಮಹಿಳಾ ಸಮಿತಿ ಸಂಚಾಲಕಿ ಪರವೀನಬಾನು ಹವಾಲ್ದಾರ, ಇಬ್ರಾಹಿಂ ಮುಲ್ಲಾ, ಶರಣಪ್ಪ ಸೂಡಿ, ಮೆಹಬೂಬಸಾಬ ಬಳ್ಳಾರಿ, ಖಾಜಾಸಾಬ ಇಸ್ಮಾಯಿಲನವರ, ರೇಷ್ಮಾ ಢಾಲಾಯತ, ಮಕ್ತುಮಸಾಬ ಮುಲ್ಲಾನವರ, ಸಲೀಂ ಹರಿಹರ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.