ಅಲಾನ್ ಬಾರ್ಡರ್ ಪ್ರಶಸ್ತಿ ಸ್ವೀಕರಿಸಿದ ಬೆನ್ನಲ್ಲೆ ಶಾಕಿಂಗ್ ನ್ಯೂಸ್ ಕೊಟ್ಟ ಡೇವಿಡ್ ವಾರ್ನರ್ !

ಲಂಡನ್‌, ಫೆ 11, ಸೋಮವಾರವಷ್ಟೆ 2019ರ ವರ್ಷದ ಆಸ್ಟ್ರೇಲಿಯಾ ಟಿ-20 ಆಟಗಾರ ಪ್ರಶಸ್ತಿ ಗೌರವ ಸ್ವೀಕರಿಸಿದ ಬೆನ್ನಲ್ಲೆ ಆಸೀಸ್ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಡೇವಿಡ್ ವಾರ್ನರ್ ತಮ್ಮ ಅಭಿಮಾನಿಗಳಿಗೆ  ಶಾಕಿಂಗ್ ಸುದ್ದಿ ನೀಡಿದ್ದಾರೆ.  ದೀರ್ಘಾವಧಿ ಕ್ರಿಕೆಟ್ ಕಡೆ ಹೆಚ್ಚು ಗಮನ ಕೇಂದ್ರಿಕರಿಸಲು ಚುಟುಕು ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುವ ಮಾತುಗಳನ್ನಾಡಿದ್ದಾರೆ. "ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ ಕಡೆಗೆ ಗಮನ ನೀಡಿದರೆ. ಬ್ಯಾಕ್‌ ಟು ಬ್ಯಾಕ್‌ ವಿಶ್ವಕಪ್‌ಗಳು ನಡೆಯಲಿವೆ. ಹೀಗಾಗಿ ಇನ್ನು ಕೆಲವೇ ವರ್ಷಗಳಲ್ಲಿ ಈ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಲು ಆಲೋಚಿಸಿದ್ದೇನೆ," ಎಂದು 33 ವರ್ಷದ ಅನುಭವಿ ಎಡಗೈ ಬ್ಯಾಟ್ಸ್‌ಮನ್‌ ವಾರ್ನರ್‌ ಹೇಳಿದ್ದಾರೆ.

"ಮುಂದಿನ ವೇಳಾಪಟ್ಟಿಗಳನ್ನು ನಾನು ಗಮನಿಸಬೇಕು. ಏಕೆಂದರೆ ಮೂರೂ ಮಾದರಿಯ ಕ್ರಿಕೆಟ್‌ನಲ್ಲಿ ಆಡುವುದು ನನ್ನ ಪಾಲಿಗೆ ಕಷ್ಟ. ಮೂರೂ ಮಾದರಿಯಲ್ಲಿ ಮುಂದುವರಿಯಲು ಎದುರು ನೋಡುತ್ತಿರುವ ಆಟಗಾರರಿಗೆ ನನ್ನ ಕಡೆಯಿಂದ ಆಲ್‌ ದಿ ಬೆಸ್ಟ್‌. ಎಬಿ ಡಿ'ವಿಲಿಯರ್ಸ್‌ ಮತ್ತು ವೀರೇಂದ್ರ ಸೆಹ್ವಾಗ್ ಅವರಂತಹ ಆಟಗಾರರು ಮೂರೂ ಮಾದರಿಯ ಕ್ರಿಕೆಟ್‌ನಲ್ಲಿ ಹಲವು ವರ್ಷಗಳ ಕಾಲ ಯಶಸ್ವಿಯಾಗಿ ಆಡಿದ್ದಾರೆ. ಇದು ಅತ್ಯಂತ ಸವಾಲಿನ ಕೆಲಸ," ಎಂದಿದ್ದಾರೆ."ಮೂರು ಮಕ್ಕಳು ಮತ್ತು ಪತ್ನಿ ಮನೆಯಲ್ಲಿ ಉಳಿಯುವುದರಿಂದ ಸದಾ ಪ್ರವಾಸದಲ್ಲಿ ಇರುವುದು ಕಷ್ಟವಾಗಿದೆ. ಹೀಗಾಗಿ ಹೊರೆ ಕಡಿಮೆ ಮಾಡಿಕೊಳ್ಳುವ ಕಡೆಗೆ ಆಲೋಚಿಸಿದರೆ, ಅಂತಾರಾಷ್ಟ್ರೀಯ ಟಿ20ಗೆ ಗುಡ್‌ ಬೈ ಹೇಳುವುದನ್ನು ಪರಿಗಣಿಸಲಿದ್ದೇನೆ," ಎಂದು ವಾರ್ನರ್‌ ಹೇಳಿದ್ದಾರೆ.

ಸ್ಫೋಟಕ ಎಡಗೈ ಬ್ಯಾಟ್ಸ್‌ಮನ್‌ ಆಸ್ಟ್ರೇಲಿಯಾ ತಂಡದ ಪರ ಈವರೆಗೆ ಒಟ್ಟು 76 ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ಪಂದ್ಯಗಳನ್ನು ಆಡಿದ್ದು, ಒಂದು ಶತಕ ಮತ್ತು 15 ಅರ್ಧಶತಕಗಳನ್ನು ಹೊಂದಿರುವ 2079 ರನ್‌ಗಳನ್ನು ಗಳಿಸಿದ್ದಾರೆ.ವಾರ್ನರ್‌, ಸೋಮವಾರವಷ್ಟೇ ಕ್ರಿಕೆಟ್‌ ಆಸ್ಟ್ರೇಲಿಯಾ ಪ್ರತಿ ವರ್ಷ ನೀಡುವ ಕ್ರಿಕೆಟ್‌ ಪ್ರಶಸ್ತಿಗಳಲ್ಲಿ ಅತ್ಯುನ್ನತ ಗೌರವವಾದ ಅಲಾನ್‌ ಬಾರ್ಡರ್‌ ಪ್ರಶಸ್ತಿಯನ್ನು ಮೂರನೇ ಬಾರಿ ವಾರ್ನರ್ ಸ್ವೀಕರಿಸಿದ್ದರು.