ಬಿಎಲ್‌ಡಿಇ ಸಂಸ್ಥೆ ಕಟ್ಟುತ್ತಿರುವ ಅನಧಿಕೃತ ಕಾಮಗಾರಿ ತಡೆಹಿಡಿಯಲು ಆಗ್ರಹ

Demand to stop unauthorized construction work being carried out by BLDE

ವಿಜಯಪುರ 11: ವಿಜಯಪುರ ನಗರದ ಕೀರ್ತಿನಗರ ಹಾಗೂ ಮೂಡಣಕೇರಿ ಮದ್ಯದಲ್ಲಿರುವ ಐತಿಹಾಸಿಕ ಭಾರತೀಯ ಪುರಾತತ್ವ ಸರ್ವೆಕ್ಷಣಾ ಇಲಾಖೆಗೆ ಸೇರಿದ ಸಂರಕ್ಷಿತ ಕೋಟೆ ಗೋಡೆ ಹಾಗೂ ಕಲ್ಯಾಣ ಚಾಲುಕ್ಯರ ಕಾಲದ ಶ್ರೀ ಸ್ವಯಂಭು ವಿನಾಯಕ ದೇವಸ್ಥಾನದ ನಿಷೇಧಿತ ಪ್ರದೇಶದಲ್ಲಿ ಬಿ ಎಲ್ ಡಿ ಇ ಸಂಸ್ಥೆಯ ಆಯುರ್ವೇದಿಕ ಮಹಾವಿದ್ಯಾಲಯದವರು ಕಟ್ಟುತ್ತಿರುವ ಅನಧಿಕೃತ ಕಾಮಗಾರಿ ತಡೆಹಿಡಿಯಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳು ಹಾಗೂ ರಾಜ್ಯಪಾಲರಿಗೆ ಬಿಜೆಪಿ ಜಿಲ್ಲಾ ಘಟಕದಿಂದ ಮನವಿ ಸಲ್ಲಿಸಲಾಯಿತು. ವಿಜಯಪುರ ಜಿಲ್ಲಾ ಬಿಜೆಪಿ ಅಧ್ಯಕ್ಷ ಗುರುಲಿಂಗಪ್ಪ ಅಂಗಡಿ ಅವರು ಮಾತನಾಡಿ ಸಂರಕ್ಷಿತ ಪ್ರದೇಶದಲ್ಲಿ ಅನಧಿಕೃತ ಕಾಮಗಾರಿಯಿಂದ ರಾಷ್ಟ್ರೀಯ ಪರಂಪರೆಗೆ ಧಕ್ಕೆ ಉಂಟಾಗಲಿದೆ ಎಂದು ಹೇಳಿದರು.  

ವಿಜಯಪುರ ಮ್ಯೂಸಿಯಂದಲ್ಲಿರುವ ಕಲ್ಯಾಣ ಚಾಲುಕ್ಯರ ಕ್ರಿ.ಶ 1184ರ ವಿಜಯಪುರದ ಶಾಸನ ಮೂಡಣಕೇರಿ ಜಮೀನು ದಾನ -ದತ್ತಿ ಬಿಟ್ಟಿರುವ ಅಧಿಕೃತ ದಾಖಲೆಯಾಗಿದೆ.ಸಂರಕ್ಷಿತ ಪ್ರದೇಶವು ದೇವಸ್ಥಾನದ ಆಸ್ತಿಯಾಗಿದೆ ಕೂಡಲೇ ಜಿಲ್ಲಾಡಳಿತ ದೇವಸ್ಥಾನದ ಆಸ್ತಿ ರಕ್ಷಣೆಗೆ ಮುಂದಾಗಬೇಕು ಎಂದು ಒತ್ತಾಯಿಸದರು.  

ವಿಜಯಪುರ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಡಿ ಜಿ ಬಿರಾದಾರ ಅವರು ಮಾತನಾಡಿ, ವಿಜಯಪುರ ನಗರದ ಜನ ಪಾರಂಪರಿಕವಾಗಿ ಪೂಜೆ ಪುನಸ್ಕಾರ ನಡೆಸಿಕೊಂಡು ಬಂದಿರುವ ಪುರಾತನ ಸ್ವಯಂಭು ಶ್ರೀ ವಿನಾಯಕ ದೇವಸ್ಥಾನ ನಮ್ಮ ಗತಕಾಲದ ಧಾರ್ಮಿಕ ಪರಂಪರೆಯಾಗಿದೆ. ಸಂರಕ್ಷಿತ ಕೋಟೆ ಹಾಗೂ ದೇವಸ್ಥಾನಕ್ಕೆ ಸೇರಿದ ನಿಷೇಧಿತ ಪ್ರದೇಶದಲ್ಲಿ ಬಿ ಎಲ್ ಡಿ ಇ ಆಯುರ್ವೇದಿಕ ಸಂಸ್ಥೆಯವರು 1958ರ ಭಾರತೀಯ ಪುರಾತತ್ವ ಕಾಯ್ದೆಯನ್ನು ಉಲ್ಲಂಘನೆ ಮಾಡಿ ನಿರ್ಮಿಸುತ್ತಿರುವ ಅನಧಿಕೃತ ಕಟ್ಟಡದ ಬಗ್ಗೆ ಸಾರ್ವಜನಿಕರು ವ್ಯಾಪಕ ಆಕ್ರೋಶ ವ್ಯಕ್ತ ಪಡಿಸುತ್ತಿದ್ದು ಜಿಲ್ಲಾಡಳಿತ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಅನಧಿಕೃತ ಕಾಮಗಾರಿಯನ್ನು ಕೂಡಲೇ ತೆರವುಗೊಳಿಸಬೇಕೆಂದು ಆಗ್ರಹಿಸಿದರು.  

ನ್ಯಾಯವಾದಿ ಸುಪ್ರೀತ ದೇಸಾಯಿ ಅವರು ಮಾತನಾಡಿ, ಐತಿಹಾಸಿಕ ಪರಂಪರೆ ನಾಶ ಮಾಡಲು ಮುಂದಾಗಿರುವ ಬಿ ಎಲ್ ಡಿ ಈ ಸಂಸ್ಥೆ ಯವರ ನಡೆ ಖಂಡನೀಯ ಎಂದು ಹೇಳಿದ ಅವರು 1958ರ ಭಾರತೀಯ ಪುರಾತತ್ವ ಕಾಯ್ದೆಯ ಪ್ರಕಾರ 100 ಮೀಟರ್ ವ್ಯಾಪ್ತಿ ಒಳಗಡೆ ಯಾವುದೇ ಕಟ್ಟಡ ಕಟ್ಟುವಂತಿಲ್ಲ. ಎಂಬ ನಿಯಮವಿದ್ದರೂ ಕೂಡಾ ಪುರಾತತ್ವ ಇಲಾಖೆ ಹಾಗೂ ವಿಜಯಪುರ ಮಹಾನಗರ ಪಾಲಿಕೆಯಿಂದ ಕಟ್ಟಡ ಪರವಾನಿಗೆ ಪಡೆಯದೇ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಹಾಗೂ ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಎಮ್‌. ಪಾಟೀಲ ಅವರ ರಾಜಕೀಯ ಪ್ರಭಾವ ಬಳಸಿ ನಡೆಸುತ್ತಿರುವ ಅನಧಿಕೃತ ಕಟ್ಟಡ ಕಾಮಗಾರಿ ತಡೆಹಿಡಿದು ಪುರಾತತ್ವ ಸಂರಕ್ಷಣಾ ಕಾಯ್ದೆ ಅಡಿ ಸದರಿ ಸಂಸ್ಥೆಯ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಂಡು ಸಂರಕ್ಷಿತ ಕೋಟೆ ಹಾಗೂ ಚಾಲುಕ್ಯರ ಶ್ರೀ ಸ್ವಯಂಭು ವಿನಾಯಕ ದೇವಸ್ಥಾನ ರಕ್ಷಿಸಬೇಕೆಂದು ಆಗ್ರಹಿಸಿದರು. 

ಈ ಸಂದರ್ಭದಲ್ಲಿ ಬೆಳಗಾವಿ ವಿಭಾಗ ಬಿಜೆಪಿಯ ವೈದ್ಯಕೀಯ ಪ್ರಕೋಷ್ಟದ ಪ್ರಮುಖರಾದ ಮಲ್ಲಿಕಾರ್ಜುನ ಕಲಾದಗಿ, ಮುಖಂಡರಾದ ಮಲ್ಲಿಕಾರ್ಜುನ ಕನ್ನೂರ ಬಸವಕುಮಾರ ಕಾಂಬಳೆ, ಬಸವರಾಜ ಕುಬಕಡ್ಡಿ,ಛಲವಾದಿ ಪ್ರದೀಪ, ವಿಜಯ ಹಿಟ್ನಳ್ಳಿ ಮಂಜುನಾಥ ಶಿವಶರಣ, ಲಾಯಪ್ಪ ಇಂಗಳೆ, ಛಲವಾದಿ ಕೃಷ್ಣಾ ಸೇರಿದಂತೆ ಇತರರು ಉಪಸ್ಥಿತರಿದ್ದರು.