ಹಿಡ್ಕಲ್ ಜಲಾಶಯದಿಂದ ಧಾರವಾಡದ ಕೈಗಾರಿಕಾ ಪ್ರದೇಶಕ್ಕೆ ನೀರು

Demand to withdraw the order made on May 2

ಮೇ 2 ರಂದು ಮಾಡಿದ ಆದೇಶವನ್ನು ಹಿಂಪಡೆಯಲು ಆಗ್ರಹ 

ಬೆಳಗಾವಿ 23: ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಿಡ್ಕಲ್ ಜಲಾಶಯದಿಂದ ಧಾರವಾಡದ ಕೈಗಾರಿಕಾ ಪ್ರದೇಶಕ್ಕೆ ನೀರು ಪೂರೈಸಲು ರಾಜ್ಯ ಸರಕಾರ ಮೇ 2 ರಂದು ಮಾಡಿದ ಆದೇಶವು ಬೆಳಗಾವಿ ಜಿಲ್ಲೆಯ ಜನತೆಯ ಹಿತಕ್ಕೆ ಮಾರಕವಾಗಿದ್ದು ಹೊರಡಿಸಿದ ಆದೇಶವನ್ನು ಕೂಡಲೇ ಹಿಂತಗೆದುಕೊಳ್ಳಬೇಕು ಎಂದು ಆಗ್ರಹಿಸಿ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ, ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರಿಗೆ ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ, ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರ ಸದಸ್ಯ ಅಶೋಕ ಚಂದರಗಿ ಮನವಿ ಮಾಡಿದ್ದಾರೆ.  

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಿಡ್ಕಲ್ ಜಲಾಶಯವು 51 ಟಿಎಂಸಿ ಸಾಮರ್ಥ್ಯವುಳ್ಳದ್ದಾಗಿದ್ದು ಬೆಳಗಾವಿ ಮಹಾನಗರ ಸೇರಿದಂತೆ ನೂರಾರು ಗ್ರಾಮಗಳು ಕುಡಿಯುವ ನೀರಿಗಾಗಿ ಈ ಜಲಾಶಯವನ್ನೇ ಅವಲಂಭಿಸಿವೆ. ಇದೇ ಜಲಾಶಯದಿಂದ ನೆರೆಯ ಬಾಗಲಕೋಟೆ ಜಿಲ್ಲೆಯ ಪಟ್ಟಣ ಹಾಗೂ ಹಳ್ಳಿಗಳಿಗೆ ನೀರು ಪೂರೈಕೆಯಾಗುತ್ತಿದೆ. ಅನೇಕ ಬಾರಿ ಈ ಜಲಾಶಯದಲ್ಲಿ ನೀರಿನ ಅಭಾವದಿಂದಾಗಿ ಅವಲಂಭಿತ ಪಟ್ಟನ ಹಾಗೂ ಗ್ರಾಮಗಳು ತೀವ್ರ ಸಂಕಟವನ್ನು ಎದುರಿಸಿವೆ. ಇಂತಹ ಪರಿಸ್ಥಿತಿಯಲ್ಲಿ ಧಾರವಾಡ ತಾಲೂಕಿನ 6042 ಎಕರೆ ಪ್ರದೇಶದಲ್ಲಿ ಅಭಿವೃದ್ಧಿಪಡೆಸಲಾಗುತ್ತಿರುವ ಕೈಗಾರಿಕಾ ಪ್ರದೇಶಕ್ಕೆ ಈ ಜಲಾಶಯದಿಂದ 45 ಎಂಎಲ್‌ಡಿ ನೀರನ್ನು ಪೂರೈಸಲು ಸರಕಾರ ಇದೇ ಮೇ 2 ರಂದು ಆದೇಶಿಸಿರುವದು ಬೆಳಗಾವಿ ಜಿಲ್ಲೆಯ ಜನತೆಗೆ ಆಘಾತವನ್ನುಂಟುಮಾಡಿದೆ.  

ಕೈಗಾರಿಕಾ ಪ್ರದೇಶಕ್ಕೆ ಹಿಡ್ಕಲ್ ಜಲಾಶಯದಿಂದ ಯಾವುದೇ ಪರಿಸ್ಥಿತಿಯಲ್ಲಿ ನೀರು ಪೂರೈಸುವದನ್ನು ವಿರೋಧಿಸಿ ಕನ್ನಡಪರ ಸಂಘಟನೆಗಳು ಹಾಗೂ ರೈತಪರ ಸಂಘಟನೆಗಳು ಹೋರಾಟ ನಡೆಸಿದ್ದವು ಅಲ್ಲದೇ ಬೆಳಗಾವಿ ಜಿಲ್ಲೆಯ ಜನಪ್ರತಿನಿಧಿಗಳು ಸಹ ತಮ್ಮ ಸಮ್ಮತಿ ನೀಡಿರಲಿಲ್ಲ. ಅದಾಗ್ಯೂ ರಾಜ್ಯ ಸರಕಾರ ಈ ಬಗ್ಗೆ ಆತುರದ ನಿರ್ಧಾರ ಕೈಕೊಂಡಿರುವದು ಅತ್ಯಂತ ಜನ ವಿರೋಧಿ ಕ್ರಮವಾಗಿದೆ. 6000 ಎಕರೆ ಪ್ರದೇಶದಲ್ಲಿ ತಲೆ ಎತ್ತಲಿರುವ ಕೈಗಾರಿಕಾ ಪ್ರದೇಶಕ್ಕೆ  45 ಎಂಎಲ್‌ಡಿ ನೀರನ್ನು ಮಾತ್ರ ಪೂರೈಸಲಾಗುವದೆಂಬ ಅಂಶವನ್ನು ಆದೇಶದಲ್ಲಿ ಪ್ರಸ್ತಾಪಿಸಿರುವದು ಬೆಳಗಾವಿ ಜಿಲ್ಲೆಯ ಜನತೆಯನ್ನು ತಪ್ಪು ದಾರಿಗೆ ಎಳೆಯುವ ಉದ್ದೇಶದಿಂದ ಕೂಡಿದ್ದು ಭವಿಷ್ಯದಲ್ಲಿ ನೀರು ಪೂರೈಕೆಯ ಪ್ರಮಾಣ ಹೆಚ್ಚುತ್ತಲೇ ಹೋಗುವದರಲ್ಲಿ ಯಾವುದೇ ಸಂದೇಹವಿಲ್ಲ. 

ಸವದತ್ತಿ ತಾಲೂಕಿನ ಮುನವಳ್ಳಿ ಬಳಿ ನಿರ್ಮಿಸಲಾದ ನವಿಲುತೀರ್ಥ ಜಲಾಶಯದಿಂದ ಹುಬ್ಬಳ್ಳಿ ಧಾರವಾಡ ಅವಳಿ ನಗರಗಳಿಗೆ ಆರಂಭದಲ್ಲಿ 2 ಟಿಎಂಸಿ ನೀರನ್ನು ಮಾತ್ರ ಪೂರೈಸಲಾಗುತ್ತಿತ್ತು. ಈಗ ಧಾರವಾಡ ಜಿಲ್ಲೆಯ ಅನೇಕ ಪಟ್ಟಣ ಮತ್ತು ಹಳ್ಳಿಗಳಿಗೆ ಪೂರೈಸಲಾಗುತ್ತಿರುವ ನೀರಿನ ಪ್ರಮಾಣ 6.5 ಟಿಎಂಸಿ ತಲುಪಿದೆ. ಬೆಳಗಾವಿ ಜಿಲ್ಲೆಯ ಸಚಿವರು, ಶಾಸಕರು ಈ ಸಂಬಂಧ ವಹಿಸಿರುವ “ನಿಗೂಡ ಮೌನದ” ದುರ್ಲಾಭ ಪಡೆಯುತ್ತಿರುವ ಹುಬ್ಬಳ್ಳಿ ಧಾರವಾಡದ ರಾಜಕಾರಣಿಗಳು ಹಾಗೂ ಉದ್ದಿಮೆದಾರರು ಈಗ ಹಿಡ್ಕಲ್ ಜಲಾಶಯಕ್ಕೂ ಕಣ್ಣು ಹಾಕಿದ್ದಾರೆ.  

ರಾಜ್ಯ ಸರಕಾರ ಇದೇ ಮೇ 2 ರಂದು ಹೊರಡಿಸಿದ ಆದೇಶವನ್ನು ಕೂಡಲೇ ಹಿಂತಗೆದುಕೊಳ್ಳಬೇಕು ಇಲ್ಲದೇ ಹೋದರೆ ಮುಂದಿನ ದಿನಗಳಲ್ಲಿ ಜಿಲ್ಲೆಯ ಸಾಮಾಜಿಕ ಹಾಗೂ ರೈತಪರ ಸಂಘಟನೆಗಳು ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದು ಚಂದರಗಿ ಅವರು ತಿಳಿಸಿದ್ದಾರೆ. 

ಕನ್ನಡ ಕ್ರಿಯಾ ಸಮಿತಿ ಪದಾಧಿಕಾರಿಗಳಾದ ಶಿವಪ್ಪ ಶಮರಂತ, ಎಂ.ಜಿ. ಮಕಾನದಾರ, ರಮೇಶ ಸೊಂಟಕ್ಕಿ ಉಪಾಧ್ಯಕ್ಷ ಶಂಕರ ಬಾಗೇವಾಡಿ, ಮಲ್ಲಪ್ಪ ಅಕ್ಷರದ, ಅಲ್ಪ ಸಂಖ್ಯಾತ ಧುರೀಣ ಸಲೀಮ ಖತೀಬ, ಕಾರ್ಯದರ್ಶಿಗಳಾದ ಸಾಗರ ಬೋರಗಲ್ಲ, ರಾಜು ಕುಸೊಜಿ, ಸುಮಾ ಪಾಟೀಲ, ಜಿನೇಶ ಅಪ್ಪನ್ನವರ, ರಜತ ಅಂಕಲೆ ಸಹಿ ಮಾಡಿದ್ದಾರೆ.