ಬೆಂಗಳೂರು, ಮೇ 20,ರಾಜ್ಯದಲ್ಲಿ ಕೋವಿಡ್-19 ಸೋಂಕಿತರ ಕುರಿತು ಸಮಗ್ರ ಮಾಹಿತಿ ನೀಡದಿರಲು ಆರೋಗ್ಯ ಇಲಾಖೆ ನಿರ್ಧರಿಸಿದೆ.ಈ ಕುರಿತು ಟ್ವೀಟ್ ಮಾಡಿರುವ ಆರೋಗ್ಯ ಇಲಾಖೆ, ಇಂದಿನಿಂದ ಹೊಸ ಮಾದರಿಯ ಸೋಂಕಿತರ ಬುಲೆಟಿನ್ ಹೊರಬೀಳಲಿದೆ ಎಂದು ತಿಳಿಸಿದೆ. ಅದರಂತೆ , ಬುಧವಾರ ಮಧ್ಯಾಹ್ನ ಬಿಡುಗಡೆಗೊಂಡ ಬುಲೆಟಿನ್ ನಲ್ಲಿ ಕೇವಲ ಯಾವ ಜಿಲ್ಲೆಯಲ್ಲಿ ಎಷ್ಟು ಹೊಸ ಪ್ರಕರಣಗಳು ಎಂದಷ್ಟೇ ಮಾಹಿತಿ ಲಭ್ಯವಾಗಿದೆ. ಈ ಹಿಂದೆ ಇಲಾಖೆಯಿಂದ ಸೋಂಕಿತರ ವಯಸ್ಸು, ಲಿಂಗ ಮತ್ತು ಅವರ ಪ್ರಯಾಣದ ಹಿನ್ನೆಲೆ ಇಲ್ಲವೇ ಸೋಂಕಿತರ ಸಂಪರ್ಕದ ಮಾಹಿತಿ ನೀಡಲಾಗುತ್ತಿತ್ತು. ಇದಕ್ಕೆ ಸಾಮಾಜಿಕ ಜಾಲತಾಣಗಳು ಮತ್ತು ಜನಸಾಮಾನ್ಯರಿಂದ ಭಾರಿ ಟೀಕೆ ವ್ಯಕ್ತವಾಗಿದೆ. ಹೊರರಾಜ್ಯಗಳಿಂದ ಆಗಮಿಸಿದವರಲ್ಲಿ ಹೆಚ್ಚು ಸೋಂಕು ಕಂಡುಬರುತ್ತಿರುವುದರಿಂದ ಜನರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಇದನ್ನು ತಡೆಯಲು ಮತ್ತು ಗ್ರಾಮಸ್ಥರು ಕ್ವಾರಂಟೈನ್ ಗೆ ಸ್ಥಳಾವಕಾಶ ನೀಡದೆ ಪ್ರತಿಭಟನೆ ನಡೆಸುವುದನ್ನು ತಡೆಯಲು ಸರ್ಕಾರ ಮಾಹಿತಿ ಮುಚ್ಚಿಡುತ್ತಿದೆ ಎಂದು ಹಲವು ಆರೋಪಿಸಿದ್ದಾರೆ.