ಒಳ್ಳೆಯ ಕ್ರೀಡಾ ಮನೋಭಾವ ಬೆಳೆಸಿಕೊಳ್ಳಿ: ಡಿವೈಎಸ್ಪಿ ನಂದಗಾವಿ

Develop a good sportsmanship: DySP Nandgavi

ಅಮೋಘಸಿದ್ದೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಕ್ರಿಕೆಟ್ ಟೂರ್ನಮೆಂಟ್

ತಾಳಿಕೋಟಿ 17: ಕ್ರೀಡೆಗಳಿಂದ ಶರೀರ ಸದೃಢವಾಗಿರುತ್ತದೆ ಪ್ರತಿಯೊಬ್ಬರು ಕ್ರೀಡೆಗಳಲ್ಲಿ ಭಾಗವಹಿಸಿ ಆರೋಗ್ಯವನ್ನು ವೃದ್ಧಿಸಿಕೊಳ್ಳ ಬೇಕು ಕ್ರೀಡೆಯಲ್ಲಿ ಸೋಲು ಗೆಲುವು ಸಾಮಾನ್ಯ ಇಂದಿನ ಸೋಲು ನಾಳಿನ ಗೆಲುವಿಗೆ ಸೋಪಾನವಾಗಲಿದೆ ಒಳ್ಳೆಯ ಕ್ರೀಡಾ ಮನೋಭಾವದೊಂದಿಗೆ ಆಟವಾಡಲು ಪ್ರಯತ್ನಿಸಿ ಎಂದು ಬ.ಬಾಗೇವಾಡಿ ಡಿವೈಎಸ್ಪಿ ಬಲ್ಲಪ್ಪ ನಂದಗಾವಿ ಕ್ರೀಡಾಪಟುಗಳಿಗೆ ಸಲಹೆ ನೀಡಿದರು. ತಾಲೂಕಿನ ಚಬನೂರ ಗ್ರಾಮದಲ್ಲಿ  ಅಮೋಘಸಿದ್ದೇಶ್ವರ ಜಾತ್ರಾ ಮಹೋತ್ಸವದ ನಿಮಿತ್ಯ ಜಾತ್ರಾ ಸಮಿತಿ ಹಾಗೂ ಶ್ರೀ ಅಮೋಘಸಿದ್ದೇಶ್ವರ ಯುವಜನ ಕ್ರೀಡಾ ಮೇಳ ಇವರ ವತಿಯಿಂದ ಹಮ್ಮಿಕೊಂಡ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟ್ ಗೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿ ಎಲ್ಲರೂ ಶಿಸ್ತು ಹಾಗೂ ನಿಯಮ ಪಾಲನೆ ಯೊಂದಿಗೆ ಆಟವಾಡಲು ಪ್ರಯತ್ನಿಸಿ, ಯಾವುದೇ ರೀತಿಯ ಅಹಿತಕರ ಘಟನೆಗಳಿಗೆ ಅವಕಾಶ ಆಗದಂತೆ ನೋಡಿಕೊಳ್ಳಿ ಎಂದು ತಿಳಿಸಿದರು. 

 ಜಾತ್ರಾ ಸಮಿತಿಯ ಅಧ್ಯಕ್ಷರಾದ ಬಸನಗೌಡ ಬ.ಲಿಂಗದಳ್ಳಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಜಾತ್ರಾ ಸಮಿತಿ ವತಿಯಿಂದ ಡಿವೈಎಸ್ಪಿ ಬಲ್ಲಪ್ಪ ನಂದಗಾವಿ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಒಟ್ಟು 18 ತಂಡಗಳು ಭಾಗವಹಿಸಿರುವ ಈ ಪಂದ್ಯಾವಳಿಯಲ್ಲಿ ಅಡವಿ ನಂದಿಹಾಳ ಗ್ರಾಮದ ಮಲ್ಲಿಕಾರ್ಜುನ ಮದ್ದರಕಿಯವರು ಪ್ರಥಮ ಬಹುಮಾನ ರೂ.1,ಲಕ್ಷ ಹಾಗೂ ತಿಪ್ಪಣ್ಣ ಹಿರೇಕುರಬೂರು ಚಬನೂರ ಇವರು ರೂ.50 ಸಾವಿರ ದ್ವಿತೀಯ ಬಹುಮಾನ ಘೋಷಿಸಿದ್ದು, ತಾಳಿಕೋಟಿಯ ರಾಯಲ್ ತಂಡ ಹಾಗೂ ಅಡವಿ ನಂದಿಹಾಳ ಗ್ರಾಮದ ತಂಡಗಳ ನಡುವೆ ಪ್ರದರ್ಶನ ಪಂದ್ಯ ನಡೆಯಿತು.ಮೇ 27 ರಂದು ಅಂತಿಮ ಪಂದ್ಯ ನಡೆಯಲಿದೆ. ಈ ವೇಳೆ ಗ್ರಾಮದ ಗಣ್ಯರಾದ ಈರತಯ್ಯ ಹಿರೇಮಠ, ಶಿವಮುತ್ಯಾ ಒಡೆಯರ್, ಶರಣಯ್ಯ ಚರಂತಿಮಠ ಸಂಗನಗೌಡ ಲಿಂಗದಳ್ಳಿ, ಮಂಜುನಾಥ ಕವಡಿಮಟ್ಟಿ, ರಾಮನಗೌಡ ಕೋಳೂರು, ಬಾಬು ನೀರಲಗಿ,ಮುತ್ತು ಬಿರಾದಾರ ಕೆ.ಎಂ.ನಾರಾ ಪಾಟೀಲ, ಕ್ರೀಡಾಪಟುಗಳು ಹಾಗೂ ಗ್ರಾಮಸ್ಥರು ಇದ್ದರು.