ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಾಸಿಕ ಕೆಡಿಪಿ ಪ್ರಗತಿ ಪರೀಶೀಲನಾ ಸಭೆ
ಬಳ್ಳಾರಿ 23:ಪೂರ್ವ ಮುಂಗಾರು ಆರಂಭಗೊಂಡ ಹಿನ್ನಲೆಯಲ್ಲಿ ಮಳೆಯಿಂದಾಗುವ ಹಾನಿಯನ್ನು ಸೂಕ್ತ ಪರೀಶೀಲನೆ ನಡೆಸಿ 72 ಗಂಟೆಯೊಳಗೆ ಹಾನಿ ಪರಿಹಾರ ಒದಗಿಸಲು ಮುಂದಾಗಬೇಕು ಎಂದು ಜಿಪಂ ಆಡಳಿತಾಧಿಕಾರಿಯೂ ಆಗಿರುವ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಕೆ.ವಿ.ತ್ರಿಲೋಕಚಂದ್ರ ಅವರು ಹೇಳಿದರು.
ನಗರದ ಜಿಲ್ಲಾ ಪಂಚಾಯತ್ ನ ನಜೀರ್ ಸಭಾಂಗಣದಲ್ಲಿ ಶುಕ್ರವಾರ ಏರಿ್ಡಸಿದ್ದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (20 ಅಂಶ ಸೇರಿದಂತೆ) ಏಪ್ರಿಲ್ ಮಾಹೆಯ ಮಾಸಿಕ ಕೆಡಿಪಿ ಪ್ರಗತಿ ಪರೀಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಮಾಹಿತಿಯನ್ವಯ ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆಯಾಗುವ ಸಂಭವವಿದ್ದು, ಈಗಾಗಲೇ ಜಿಲ್ಲೆಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಹಾಗಾಗಿ ಆಯಾ ತಾಲ್ಲೂಕು ತಹಶೀಲ್ದಾರರು ಹಾಗೂ ಕಂದಾಯ ಅಧಿಕಾರಿಗಳು ಈ ಕುರಿತು ಎಚ್ಚರ ವಹಿಸಬೇಕು ಎಂದು ನಿರ್ದೇಶನ ನೀಡಿದರು.ಜಿಲ್ಲೆಯಲ್ಲಿ ವಾರ್ಷಿಕ 599.5 ಮಿ.ಮೀ ವಾಡಿಕೆ ಮಳೆಯಿದ್ದು, ಕಳೆದ ವರ್ಷ ಮೇ 20 ರವರೆಗೆ 53.6 ಮಿ.ಮೀ ಮಳೆಯಾಗಿದೆ ಹಾಗೂ ಪ್ರಸ್ತುತ ವರ್ಷ 88.4 ಮಿ.ಮೀ ಮಳೆಯಾಗಿ ಸುಮಾರು ಶೇ.64 ರಷ್ಟು ಹೆಚ್ಚು ಮಳೆ ಸುರಿದಿದೆ. ಅದೇರೀತಿಯಾಗಿ ಜಿಲ್ಲೆಯಲ್ಲಿ ಬಿತ್ತನೆ ಬೀಜ ಹಾಗೂ ರಸಗೊಬ್ಬರದ ದಾಸ್ತಾನು ಸಮರ್ಕವಾಗಿದ್ದು, ಬಿತ್ತನೆ ಬೀಜ ಮತ್ತು ರಸಗೊಬ್ಬರಗಳ ಆಭಾವದ ಕೊರತೆಯಿಲ್ಲ ಎಂದು ಜಂಟಿ ಕೃಷಿ ನಿರ್ದೇಶಕ ಸೋಮಸುಂದರ್ ಅವರು ಸಭೆಗೆ ತಿಳಿಸಿದರು.ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು, ರೈತರಿಗೆ ಕಳಪೆ ಗುಣಮಟ್ಟದ ಬಿತ್ತನೆ ಬೀಜ ಮತ್ತು ರಸಗೊಬ್ಬರ ಪೂರೈಕೆಯಾಗದಂತೆ ಎಚ್ಚರವಹಿಸಬೇಕು. ದಾಸ್ತಾನು ಲಭ್ಯತೆ ಕುರಿತು ರೈತರಿಗೆ ಮಾಹಿತಿ ನೀಡಬೇಕು. ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನಿನ ಕುರಿತು ಮಾಹಿತಿ ಪ್ರದರ್ಶಿಸಬೇಕು. ರೈತರು ಕಾಯುವುದು, ನೂಕು-ನುಗ್ಗಲು ಹಾಗೂ ಇತರೆ ವ್ಯವಸ್ಥೆಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಕೃಷಿ ಪರಿಕರಗಳ ಪರೀವೀಕ್ಷರ ತಂಡಗಳನ್ನು ರಚಿಸಿ ಬಿತ್ತನೆ ಬೀಜ, ರಸಗೊಬ್ಬರ ಮತ್ತು ಕೀಟನಾಶಕಗಳ ಗುಣಮಟ್ಟ ಹಾಗೂ ಬೆಲೆ ನಿಯಂತ್ರಣಕ್ಕೆ ಕ್ರಮವಹಿಸಲಾಗಿದೆ. ಕೃಷಿ ಪರಿಕರ ಮಾರಾಟಗಾರರು ಗುಣಮಟ್ಟದ ಬಿತ್ತನೆ ಬೀಜ, ರಸಗೊಬ್ಬರ ಮತ್ತು ಕೀಟನಾಶಕಗಳನ್ನೇ ಮಾರಾಟ ಮಾಡಬೇಕು ತಪ್ಪಿದಲ್ಲಿ ಕಾನೂನು ರೀತ್ಯ ಕಠಿಣ ಕ್ರಮ ಜರುಗಿಸಲಾಗುವುದು ಎಂಬುದರ ಕುರಿತು ಸಭೇ ನಡೆಸುವ ಮೂಲಕ ಅವರಿಗೆ ಮಾಹಿತಿ ನೀಡಲಾಗುತ್ತಿದೆ ಎಂದು ಜಂಟಿ ಕೃಷಿ ನಿರ್ದೇಶಕ ಸೋಮಸುಂದರ್ ಅವರು ಸಭೆಗೆ ವಿವರಿಸಿದರು.
ಜಿಲ್ಲೆಯಲ್ಲಿ ಕುಡಿಯುವ ನೀರು ಸರಬರಾಜು ಮೂಲಗಳ ಬಗ್ಗೆ ನಿಗಾವಹಿಸಬೇಕು. ಕಲುಷಿತ ನೀರು ಕಲಬೆರಕೆಗೊಳ್ಳದಂತೆ ಎಚ್ಚರವಹಿಸಬೇಕು. ಮುಖ್ಯವಾಗಿ ಕುಡಿಯುವ ನೀರಿನ ಪೈಪ್ ಲೈನ್‌ಗಳು ಸೋರಿಕೆ ಕಂಡುಬಂದಲ್ಲಿ ಕೂಡಲೇ ರಿಪೇರಿ ಮಾಡಿಸಲು ಕ್ರಮವಹಿಸಬೇಕು. ಕುಡಿಯುವ ನೀರು ಸಮಸ್ಯೆದೋರುವ ಕುರಿತು ಮಾಧ್ಯಮಗಳಲ್ಲಿ ವರದಿಯಾದರೇ, ಕೂಡಲೇ ಎಚ್ಚೆತ್ತುಕೊಳ್ಳಬೇಕು. ಮುಂಗಾರು ಪೂರ್ವ ಮಳೆ ಆರಂಭಗೊಂಡಿರುವ ಹಿನ್ನಲೆಯಲ್ಲಿ ಮಳೆ ನೀರು ಸರಾಗವಾಗಿ ಹರಿಯಲು ರಾಜಕಾಲುವೆಗಳನ್ನು ಸ್ವಚ್ಛಗೊಳಿಸಬೇಕು ಎಂದು ಪಾಲಿಕೆ ಆಯುಕ್ತರು, ತಾಪಂ ಇಒಗಳು ಕಾಳಜಿ ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಸೂಚಿಸಿದರು.ಕೋರೊನಾ ಉಲ್ಬಣಗೊಳ್ಳುತ್ತಿರುವ ಹಿನ್ನಲೆಯಲ್ಲಿ ಸೂಕ್ತ ನಿಗಾ ವಹಿಸಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ನಿರ್ದೇಶನ ನೀಡಿದ ಉಸ್ತುವಾರಿ ಕಾರ್ಯದರ್ಶಿಗಳು, ಈವರೆಗೆ ಜಿಲ್ಲೆಯಲ್ಲಿ ವರದಿಯಾದ ಡೆಂಗ್ಯೂ ಪ್ರಕರಣಗಳ ಬಗ್ಗೆ ಮಾಹಿತಿ ಪಡೆದುಕೊಂಡು ಸೂಕ್ತ ಸಲಹೆ ಸೂಚನೆ ನೀಡಿದರು. ಜಿಲ್ಲೆಯ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂತ ಬಗ್ಗೆ ವಿಚಾರಿಸಿದ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರಾದ ಡಾ.ಕೆ.ವಿ.ತ್ರಿಲೋಕಚಂದ್ರ ಅವರು, ಎಸ್‌ಎಸ್‌ಎಲ್‌ಸಿ-2 ಪರೀಕ್ಷೆಗೆ ಕೈಗೊಂಡಿರುವ ಸಿದ್ದತೆ ಕುರಿತು ಡಿಡಿಪಿಐ ಅಧಿಕಾರಿಗಳಿಂದ ಮಾಹಿತಿ ಪಡೆದರು.ಇದಕ್ಕೆ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಉಮಾದೇವಿ ಅವರು ಮಾಹಿತಿ ನೀಡಿ, ಜಿಲ್ಲೆಯಲ್ಲಿ ಎಸ್‌ಎಸ್‌ಎಲ್‌ಸಿ-2 ಪರೀಕ್ಷೆಗೆ ಒಟ್ಟು 9,999 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದು, ಎಲ್ಲಾ ಮಕ್ಕಳಿಗೆ ಶಿಕ್ಷಕರು ವಿಶೇಷ ತರಗತಿಗಳ ಮೂಲಕ ಅಭ್ಯಾಸಿಸಲು ಮಾರ್ಗದರ್ಶನ ಮಾಡಿದ್ದಾರೆ ಎಂದರು.
ಬಳಿಕ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅವರು ಮಾತನಾಡಿ, ಇದೇ ಮೇ 29 ರಿಂದ ಶಾಲಾ ವಿಭಾಗದ ತರಗತಿಗಳು ಆರಂಭಗೊಳ್ಳಿದ್ದು, ಎಲ್ಲಾ ಶಾಲೆಗಳಲ್ಲಿ ಸ್ವಚ್ಛತೆ ಕಾರ್ಯ ಕೈಗೊಳ್ಳಬೇಕು. ಪಠ್ಯ-ಪುಸ್ತಕ ವಿತರಣೆ ಮಾಡಬೇಕು. ಶಾಲೆಗಳ ಅವರಣದಲ್ಲಿ ಹೊರಗಿನವರು ಬಾರದಂತೆ ನೋಡಿಕೊಳ್ಳಬೇಕು ಈ ಕುರಿತು ಬಿಆರ್‌ಓ ಮತ್ತು ಸಿಆರ್‌ಪಿಗಳಿಗೆ ನಿರ್ದೇಶನ ನೀಡಬೇಕು ಎಂದರಲ್ಲದೇ, ಜಿಲ್ಲೆಯಲ್ಲಿ ಶಾಲೆಗಳ ಆಸ್ತಿ ನೋಂದಣಿಗೆ ಬಾಕಿಯಿರುವ ಶಾಲೆಗಳ ಮಾಹಿತಿ ನೀಡಬೇಕು. ಈ ಬಗ್ಗೆ ಆಯಾ ತಾಲ್ಲೂಕಿನ ಶಹಶೀಲ್ದಾರರಿಗೆ ಸೂಚಿಸಲಾಗುವುದು ಎಂದು ಡಿಡಿಪಿಐ ಅಧಿಕಾರಿಗಳಿಗೆ ತಿಳಿಸಿದರು.ಜಿಲ್ಲೆಯಲ್ಲಿ ಲೋಕೋಪಯೋಗಿ ಮತ್ತು ಪಂಚಾಯತ್‌ರಾಜ್ ಅಭಿವೃದ್ಧಿ ಇಲಾಖೆಗಳ ಕಾಮಗಾರಿಗಳು ಗುಣಮಟ್ಟತೆ ಕುಂಠಿತಗೊಳ್ಳುತ್ತಿವೆ. ಶಾಲೆಯೊಂದರ ರಿಪೇರಿ ಕಾಮಗಾರಿಯು ಮತ್ತೆ ರಿಪೇರಿಗೆ ಬಂದಿದ್ದು, ಈ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಜಿಪಂ ಸಿಇಒ ಅವರಿಗೆ ನಿರ್ದೇಶನ ನೀಡಿದರು. ಸಭೆಯಲ್ಲಿ ರಾಜ್ಯಾದಾಂದ್ಯತ ನಡೆಯುತ್ತಿರುವ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ ಕುರಿತು ಜಿಲ್ಲೆಯಲ್ಲಿ ಈವರೆಗೆ ಆಗಿರುವ ಅಭಿವೃದ್ಧಿ ಕುರಿತು ಮಾಹಿತಿ ಪಡೆದುಕೊಂದರಲ್ಲದೇ, ಸಮಸ್ಯೆ ಕಂಡುಬಂದಲ್ಲಿ ಗಮನಕ್ಕೆ ತರಬೇಕು ಎಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹ್ಯಾರೀಸ್ ಸುಮೈರ್, ಜಿಪಂ ಉಪಕಾರ್ಯದರ್ಶಿ ಗಿರಿಜಾ ಶಂಕರ್, ಜಿಪಂ ಯೋಜನಾ ನಿರ್ದೇಶಕ ವಾಗೀಶ್ ಶಿವಾಚಾರ್ಯ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ತಾಪಂ ಇಒಗಳು ಉಪಸ್ಥಿತರಿದ್ದರು.