ಪೌರಕಾರ್ಮಿಕರಿಗೆ ಡಾ.ಫ.ಗು.ಹಳಕಟ್ಟಿ ಟ್ರಸ್ಟ್‌ದಿಂದ ಸತ್ಕಾರ

Dr. F.G. Halakatti Trust felicitates civic workers

ರಾಯಬಾಗ, 01 : ಕಾರ್ಮಿಕ ದಿನದಂದು ಪಟ್ಟಣದ ಪೌರಕಾರ್ಮಿಕರನ್ನು ಡಾ.ಫ.ಗು.ಹಳಕಟ್ಟಿ ಟ್ರಸ್ಟ್‌ದಿಂದ ಸತ್ಕರಿಸುವ ಕಾರ್ಯ ನಿಜಕ್ಕೂ ಅತ್ಯಂತ ಶ್ಲಾಘನೀಯವಾಗಿದೆ ಎಂದು ಪ.ಪಂ.ಅಧ್ಯಕ್ಷ ಅಶೋಕ ಅಂಗಡಿ ಹೇಳಿದರು.  

ಗುರುವಾರ ಪಟ್ಟಣದ ದತ್ತ ಮಂದಿರದ ಸಭಾಂಗಣದಲ್ಲಿ ಡಾ.ಫ.ಗು.ಹಳಕಟ್ಟಿ ರಾಷ್ಟ್ರೀಯ ಟ್ರಸ್ಟ್‌ ವತಿಯಿಂದ ಆಯೋಜಿಸಿದ್ದ ಬಸವ ಜಯಂತಿ ಸಂಭ್ರಮ, ಕಾಯಕ ದಿನಾಚರಣೆ ಮತ್ತು ಪೌರಕಾರ್ಮಿಕರ ಸತ್ಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪಟ್ಟಣವನ್ನು ಸ್ವಚ್ಛ ಮಾಡುವ ಪೌರಕಾರ್ಮಿಕರ ಶ್ರಮದಾಯಕ ಕಾಯಕ ಅತ್ಯಂತ ಪವಿತ್ರವಾಗಿದೆ ಎಂದರು.  

ನಿವೃತ್ತ ಬಿಇಒ ಎಚ್‌.ಎ.ಭಜಂತ್ರಿ ಮಾತನಾಡಿ, ಬಸವಣ್ಣನವರ ಕಾಯಕ ತತ್ವವನ್ನು ಪ್ರತಿಯೊಬ್ಬರು ಅಳವಡಿಸಿಕೊಂಡು ನಡೆಯಬೇಕು. ಪೌರಕಾರ್ಮಿಕರು ಆರೋಗ್ಯಯುತವಾಗಿದ್ದರೆ, ಇಡೀ ಸಮಾಜ ಸ್ವಸ್ಥವಾಗಿರುತ್ತದೆ. ಪೌರಕಾರ್ಮಿಕರು ತಮ್ಮ ಮಕ್ಕಳಿಗೆ ಒಳ್ಳೆ ಶಿಕ್ಷಣ ಮತ್ತು ಸಂಸ್ಕಾರವನ್ನು ನೀಡಬೇಕೆಂದರು.  

ನಿವೃತ್ತ ಪ್ರಾಧ್ಯಾಪಕ ಎಚ್‌.ಕೆ.ಗುರವ ಮಾತನಾಡಿ, ತನ್ನದೇ ಆದ ಭವ್ಯ ಐತಿಹಾಸಿಕ ಪರಂಪರೆ ಹೊಂದಿರುವ ಭಾರತ ದೇಶ, ಇಂದು ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋಗುತ್ತಿರುವುದು ಅತ್ಯಂತ ಶೋಚನೀಯ ವಿಷಯವಾಗಿದೆ. ನಮ್ಮ ಯುವ ಜನಾಂಗಕ್ಕೆ ನಮ್ಮ ದೇಶದ ಸಂಸ್ಕೃತಿ ಬಗ್ಗೆ ಅರಿವನ್ನು ಮೂಡಿಸಬೇಕಾಗಿದೆ ಎಂದರು.  

ಅಧ್ಯಕ್ಷತೆಯನ್ನು ವಹಿಸಿದ್ದ ಟ್ರಸ್ಟ್‌ ಅಧ್ಯಕ್ಷ ಡಾ.ಬಿ.ಎಮ್‌. ಪಾಟೀಲ ಮಾತನಾಡಿ, ಇಡೀ ಊರನ್ನು ಸ್ವಚ್ಛಗೊಳಿಸುವ ಪೌರಕಾರ್ಮಿಕರನ್ನು ಗೌರವಿಸಿ, ಸತ್ಕರಿಸುವುದು ಸಂತೋಷ ಉಂಟು ಮಾಡುತ್ತಿದೆ. ಸಾಮಾನ್ಯರನ್ನು ಸಮಾನರನ್ನಾಗಿ ಕಂಡರೆ ಮಾತ್ರ ಸಮಾಜದ ಸ್ವಾಸ್ಥ ಉತ್ತಮವಾಗಿರುತ್ತದೆ ಎಂದರು.  

ಜಾಗತಿಕ ಲಿಂಗಾಯತ ಮಹಾಸಭೆ ಚಿಕ್ಕೋಡಿ ಜಿಲ್ಲಾಧ್ಯಕ್ಷ ಡಾ.ಚಂದ್ರಶೇಖರ ಗುಡಸಿ ಅವರು ಬಸವಣ್ಣನವರ ವಚನ ಸುಧೆ ಕಿರು ಪುಸ್ತಕಗಳನ್ನು ಹಂಚಿದರು.  

ಪ.ಪಂ.ಉಪಾಧ್ಯಕ್ಷೆ ಭಾರತಿ ಜಾಧವ, ಪ.ಪಂ.ಮುಖ್ಯಾಧಿಕಾರಿ ಎಸ್‌.ಆರ್‌.ಮಾಂಗ, ರಮೇಶ ಬಳ್ಳಾರಿ, ಗಣೇಶ ಬಳ್ಳಾರಿ, ರಾಮಾಂಜನೇಯ ಬಳ್ಳಾರಿ, ಜಯಶ್ರೀ ಪಾಟೀಲ, ಶಿವಾನಂದ ಬೆಳಕೂಡ, ಆರ್‌.ಎಚ್‌.ಗೊಂಡೆ ಸೇರಿದಂತೆ ಪೌರಕಾರ್ಮಿಕರು ಇದ್ದರು. ಡಾ.ಸಿ.ಆರ್‌.ಗುಡಸಿ ಸ್ವಾಗತಿಸಿದರು, ಹನಮಂತ ಟಕ್ಕನವರ ನಿರೂಪಿಸಿದರು.