ನವದೆಹಲಿ, ಫೆ 10 : ದೇಶದ ಆರ್ಥಿಕತೆ ತೀವ್ರ ಬಿಕ್ಕಟ್ಟಿನಲ್ಲಿದೆ ಮತ್ತು ಅನೇಕ ಕ್ಷೇತ್ರಗಳಲ್ಲಿ ಬಳಕೆ ಮತ್ತು ಹೂಡಿಕೆಗಳನ್ನು ಹೆಚ್ಚಿಸಲು ಸರ್ಕಾರ ತ್ವರಿತ, ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಹಿರಿಯ ಕಾಂಗ್ರೆಸ್ ಮುಖಂಡ ಮತ್ತು ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಸೋಮವಾರ ರಾಜ್ಯಸಭೆಗೆ ತಿಳಿಸಿದ್ದಾರೆ.
ಬಜೆಟ್ ಕುರಿತ ಚರ್ಚೆ ಪ್ರಾರಂಭಿಸಿದ ಅವರು, ಇದು ರಚನಾತ್ಮಕ ಸಮಸ್ಯೆ ಎಂದು ಒಪ್ಪಿಕೊಳ್ಳಲು ಸರ್ಕಾರ ಸಿದ್ಧವಿಲ್ಲ ಎಂದು ಅಸಮಾಧಾನ ಹೊರಹಾಕಿದರು.
ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಚಿದಂಬರಂ, ಹಣಕಾಸು ಮತ್ತು ದೇಶದ ಜಿಡಿಪಿ ವಿಚಾರದಲ್ಲಿ ಇದುವರೆಗೆ ಸರ್ಕಾರದ ಭಾಗವಾಗಿ ಕೆಲಸ ಮಾಡಿದ ಆರ್ಥಿಕ ತಜ್ಞರು, ಪರಿಣಿತರು ದೇಶದ ಆರ್ಥಿಕತೆ ಐಸಿಯು ಕಡೆಗೆ ಸಾಗುತ್ತಿದೆ ಎಂದು ಪದೇ ಪದೇ ಹೇಳುತ್ತಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ ಎಂದರು.
ಸರ್ಕಾರ ಇನ್ನು ಮುಂದಾದರೂ ಒಣಪ್ರತಿಷ್ಠೆ ಬಿಟ್ಟು ಆರ್ಥಿಕ ವಿಚಾರದಲ್ಲಿ ತಜ್ಞರು ನೀಡುವ ಸಲಹೆ-ಸೂಚನೆಗಳನ್ನು ಅಳವಡಿಸಿಕೊಳ್ಳುವ ವಿವೇಕವನ್ನು ಕಲಿಯಲಿ ಎಂದು ಮಾಜಿ ಹಣಕಾಸು ಸಚಿವರು ನಯವಾಗಿಯೇ ಚಾಟಿ ಬೀಸಿದರು.
ಕಳೆದ 45 ವರ್ಷಗಳ ಅವಧಿಯಲ್ಲೇ ನಿರುದ್ಯೋಗ ಗರಿಷ್ಠ ಮಟ್ಟ ತಲುಪಿದೆ. ಅಸರ್ಮಪಕ ಜಿಎಸ್ ಟಿ ಜಾರಿಯಿಂದ ಸಣ್ಣ ಕೈಗಾರಿಕೆಗಳು ಬಾಗಿಲು ಮುಚ್ಚಿಕೊಂಡಿವೆ. ಪರಿಣಾಮವಾಗಿ ಲಕ್ಷಾಂತರ ಜನ ಕಾರ್ಮಿಕರು ಉದ್ಯೋಗ ಕಳೆದುಕೊಂಡು ಬೀದಿಗೆ ಬೀಳುವಂತಾಗಿದೆ. ಕೈಗಾರಿಕಾ ಮತ್ತು ಉತ್ಪಾದನಾ ವಲಯಕ್ಕೆ ಚೇತರಿಕೆ ಶಕ್ತಿ ತುಂಬುವ ಕೆಲಸವನ್ನು ಸರ್ಕಾರ ಆದ್ಯತೆ ಮೇಲೆ ಮಾಡಬೇಕಿದೆ ಎಂದು ಅವರು ಹೇಳಿದರು.
ದೇಶದ ಆರ್ಥಿಕ ಪರಿಸ್ಥಿತಿ ನಿರಾಶಾದಾಯಕವಾಗಿದೆ ಎಂದು ನೊಬೆಲ್ ಪ್ರಶಸ್ತಿ ವಿಜೇತ ಅಭಿಜಿತ್ ಬ್ಯಾನರ್ಜಿ ನೀಡಿರುವ ಹೇಳಿಕೆಯನ್ನು ಸದನದಲ್ಲಿ ಉಲ್ಲೇಖಿಸಿದ ಚಿದಂಬರಂ, ಸರ್ಕಾರ ಪ್ರತಿಪಕ್ಷಗಳ ಸಲಹೆ-ಸೂಚನೆಗಳನ್ನು ಕೇಳುವಷ್ಟು ತಾಳ್ಮೆ ವಹಿಸುತ್ತಿಲ್ಲ. ವಿಶೇಷವಾಗಿ ಕಾಂಗ್ರೆಸ್ ಪಕ್ಷವನ್ನು ಅಸ್ಪೃಶ್ಯ ಎಂದು ಭಾವಿಸಿಕೊಂಡಿದೆ ಎಂದು ದೂರಿದರು.