ಆನೆ ದಂತ ಮಾರಾಟ ಮಾಡುತ್ತಿದ್ದವರ ಬಂಧನ

ಬೆಂಗಳೂರು, ಫೆ 11, ನಗರದಲ್ಲಿ ಆನೆ ದಂತ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಉತ್ತರ ವಿಭಾಗದ ಪೊಲೀಸರು ಬಂಧಿಸಿದ್ದಾರೆ.ತಮಿಳು ನಾಡು ಮೂಲದ ಸೌಂಧರ್ ಪಾಂಡಿಯನ್ ಅಲಿಯಾಸ್ ಸೇಲ್ವಂ ಶಿವಾಜಿ (44 ),  ಕಂದನ್ (40) ಬಂಧಿತ ಆರೋಪಿಗಳಾಗಿದ್ದು, ಅವರಿಂದ 2 ಆನೆ ದಂತಗಳನ್ನು ಆರ್.ಎಂ.ಸಿ.ಯಾರ್ಡ್ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರ್.ಎಂ.ಸಿ.ಯಾರ್ಡ್ ಪೊಲೀಸ್ ಠಾಣಾ ಸರಹದ್ದಿನ ಮಾರಪ್ಪನ ಪಾಳ್ಯ ಉಲ್ಲಾಸ್ ಚಿತ್ರಮಂದಿರದ ಮುಂಭಾಗದ ರಸ್ತೆಯಲ್ಲಿ  ಇವರು ಗೋಣಿಚೀಲದೊಳಗೆ ಆನೆ ದಂತಗಳನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡಲು 

ಹೊಂಚುಹಾಕುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ, ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರೇಮನಾಥ್ ಎಂಬುವರು ತಮಗೆ ಮಾರಾಟ ಮಾಡಲು ಆನೆ ದಂತಗಳನ್ನು ತಂದು ಕೊಡುತ್ತಿರುವುದಾಗಿ ಅರೋಪಿಗಳು ವಿಚಾರಣೆ ವೇಳೆ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾರೆ. ಸದ್ಯ, ಪ್ರೇಮ್ ನಾಥ್ ಎಂಬುವವರು ತಲೆ ಮರೆಸಿಕೊಂಡಿದ್ದು, ಪೊಲೀಸರು ಆತನ ಪತ್ತೆ ಗಾಗಿ ಬಲೆ ಬೀಸಿದ್ದಾರೆ.ಯಶವಂತಪುರ ಉಪ ವಿಭಾಗದ ಎಸಿಪಿ ಎನ್.ಟಿ. ಶ್ರೀನಿವಾಸ ರೆಡ್ಡಿ ಮಾರ್ಗದರ್ಶನದಲ್ಲಿ ಆರ್.ಎಂ. ಸಿ ಆರ್ ಯಾರ್ಡ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಕೆ.ಹೆಚ್. ಮಹೇಂದ್ರ ಕುಮಾರ್  ಅವರ ನೇತೃತ್ವದಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು.