ವಿಜಯಪುರ 29: ಭಾರತದ ಸೈನಿಕರ ನೈತಿಕ ಸ್ಥೈರ್ಯವನ್ನು ಕುಗ್ಗಿಸಲು ಹೊರಟಿರುವ ಸಿಎಂ ಸಿದ್ದರಾಮಯ್ಯನವರು ದೇಶದ ಸುರಕ್ಷತೆಯ ವಿಷಯದಲ್ಲಿ ಇಂತಹ ಕೀಳುಮಟ್ಟದ ಹೇಳಿಕೆಯನ್ನು ಕೂಡಲೇ ನಿಲ್ಲಿಸಬೇಕು ಎಂದು ರೈತ ಭಾರತ ಪಕ್ಷದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಕೆಂಗನಾಳ ಆಗ್ರಹಿಸಿದ್ದಾರೆ.
ಪತ್ರಿಕಾ ಪ್ರಕಟಣೆಯ ಮೂಲಕ ವಿಷಯ ಪ್ರಸ್ತಾಪಿಸಿರುವ ಅವರು, ಸಿಎಂ ಸಿದ್ದರಾಮಯ್ಯನವರು ಪಹಲ್ಗಾಂ ಉಗ್ರರ ದಾಳಿಗೆ ಪ್ರತೀಕಾರವಾಗಿ ಪಾಕ್ ಜೊತೆ ಯುದ್ಧ ಅನಗತ್ಯ. ಅದರ ಬದಲು ಭದ್ರತೆ ಬಿಗಿಗೊಳಿಸಿ ಎಂದು ಹೇಳಿಕೆ ನಂತರ ನಾನು ಅನಿವಾರ್ಯವಾದಾಗ ಯುದ್ಧ ಮಾಡಬೇಕೆಂದು ಹೇಳಿದ್ದೇನೆಯೇ ಹೊರತು ಯುದ್ಧ ಮಾಡಲೇ ಬಾರದೆಂದು ನಾನು ಹೇಳಿಲ್ಲ. ನನ್ನ ಹೇಳಿಕೆ ತಿರುಚಲಾಗಿದೆನ್ನುವುದು ಪಲಾಯನವಾದಿ ನಿಲುವಿನಂತಿದೆ ಎಂದು ಲೇವಡಿ ಮಾಡಿದ್ದಾರೆ.
ಹಿಂದೂ ಐಡಿ ಕಾರ್ಡ್ ನೋಡಿ ಗುಂಡು ಹೊಡೆದರು ಎಂದು ಬಿಜೆಪಿಯವರು ಹೇಳ್ತಾರೆ, ಮುಸ್ಲಿಮರನ್ನು ಕೊಂದಿಲ್ವಾ ಎಂದು ಪ್ರಶ್ನಿಸುತ್ತಿರುವ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಅವರಿಗೆ ಶೋಭೆ ತರುವಂತದಲ್ಲ. ಈಗಾಗಲೇ ಪಹಲ್ಗಾಂನಲ್ಲಿ ಜನರನ್ನು ಹತ್ಯೆ ಮಾಡುವ ಮೊದಲು ಅವರ ಪ್ಯಾಂಟ್ ಬಿಚ್ಚಿಸಿ ಉಗ್ರರು ಧರ್ಮ ಖಚಿತಪಡಿಸಿಕೊಂಡಿದ್ದ ವಿಷಯ ಮರಣೋತ್ತರ ಪರೀಕ್ಷೆಗೆ ಕರೆತಂದ ವೇಳೆ 26 ಜನರ ಪೈಕಿ 20 ಜನರ ಶವಗಳು ಪ್ಯಾಂಟ್ ಕಳಚಿದ ಸ್ಥಿತಿಯಲ್ಲಿತ್ತು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇಂಥ ಬೆಳವಣಿಗೆಯೇ ನಡೆದಿಲ್ಲವೆನ್ನುವ ಧಾರ್ಮಿಕ ನಾಯಕರ, ವಿವಿಧ ರಾಜಕೀಯ ಪಕ್ಷಗಳ ಮೊಂಡಾತವನ್ನು ಇನ್ನಾದರೂ ನಿಲ್ಲಿಸಬೇಕು ಎಂದು ತಾಕಿತು ಮಾಡಿದ್ದಾರೆ.
ಪಹಲ್ಗಾಂ ದಾಳಿ ಬಳಿಕ ಪಾಕಿಸ್ತಾನಿಯರ ವೀಸಾಗಳನ್ನು ರದ್ದುಗೊಳಿಸಿ ದೀರ್ಘಾವಧಿ ವೀಸಾ ಪಡೆದು ನೆಲೆಸಿರುವವರಿಗೆ ಮಾತ್ರ ವಿನಾಯಿತಿ ನೀಡಿರುವ ಕೇಂದ್ರ ಸರ್ಕಾರದ ಕ್ರಮ ಸ್ವಾಗತಾರ್ಹ. ಸಿಂಧೂ ನದಿ ಒಪ್ಪಂದ ರದ್ದುಗೊಳಿಸುವ ಕೇಂದ್ರದ ನಿರ್ಧಾರದಿಂದ ಭಾರತೀಯರಿಗೆ ಸಿಂಧೂ ನದಿ ಬಳಕೆಗೆ ಹೆಚ್ಚು ಅವಕಾಶ ಲಭಿಸಲಿದ್ದು, ಭಾರತದ ಅಭಿವೃದ್ಧಿಗೆ ಪೂರಕವಾಗುವಂತ ಯೋಜನೆಗಳನ್ನು ಕೇಂದ್ರ ಸರ್ಕಾರ ರೂಪಿಸಬೇಕು ಎಂದು ಒತ್ತಾಯಿಸಿದ್ದಾರೆ.
ದಾಳಿಯ ಹಿಂದಿನ ರೂವಾರಿಗಳಿಗೆ ಯಾರೂ ಊಹಿಸದ ರೀತಿಯಲ್ಲಿ ಶಿಕ್ಷೆ ಆಗಲಿದೆಂದು ಪ್ರಧಾನಿ ಮೋದಿ ಗುಡುಗಿರುವುದು ಉಗ್ರರು ಮತ್ತು ಉಗ್ರರ ಪೋಷಕ ರಾಷ್ಟ್ರ ಪಾಕಿಸ್ತಾನಕ್ಕೆ ನಡುಕ ಹುಟ್ಟಿಸಿದೆ. ಮಾಸಿಕ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿಯೂ ಪಹಲ್ಗಾಂ ದಾಳಿ ಕುರಿತು ಮತ್ತೊಮ್ಮೆ ಪ್ರಸ್ತಾಪಿಸುವ ಮೂಲಕ ಭಾರತದ ಪರ ಇಡೀ ಪ್ರಪಂಚವೇ ನಿಲ್ಲುವಂತೆ ಮಾಡಿದ್ದಲ್ಲದೇ ಪಾಕಿಸ್ತಾನವನ್ನು ಒಂಟಿಯಾಗಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನು ಇಷ್ಟಕ್ಕೆ ಬೀಡದೇ ಇನ್ನಷ್ಟು ಕಠಿಣ ಸಂದೇಶವನ್ನು ಕೇಂದ್ರ ಸರ್ಕಾರದಿಂದ ರವಾನಿಸಲೇ ಬೇಕಾದ ಅನಿವಾರ್ಯತೆ ಇದೆ ಎಂದು ತಿಳಿಸಿದ್ದಾರೆ.
ಭಯೋತ್ಪಾದನೆ ಜಗತ್ತಿನಲ್ಲಿ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದ್ದು, ಸಮಾಜದಲ್ಲಿ ಅಶಾಂತಿಯನ್ನುಂಟು ಮಾಡುತ್ತಿದೆ. ದೇಶದ ಸಾರ್ವಭೌಮತ್ವಕ್ಕೆ ಧಕ್ಕೆ ಬಂದಾಗ ಪಕ್ಷದ ಹೊರತಾಗಿ ದೇಶದ ಅಖಂಡತೆಗಾಗಿ ಎಲ್ಲರೂ ಒಗ್ಗಟ್ಟಾಗಿ ನಿಲ್ಲಬೇಕು. ಭಯೋತ್ಪಾದನೆ ತೊಲಗಿಸಲು ಎಲ್ಲರೂ ಕೈಜೋಡಿಸಬೇಕು. ಉಗ್ರರ ವಿರುದ್ಧ ಸರ್ಕಾರ ಈಗಾಗಲೇ ಕಠಿಣ ಕ್ರಮಕೈಗೊಂಡಿದ್ದು, ಭಯೋತ್ಪಾದನೆ ಮುಕ್ತ ಸಮಾಜ ನಿರ್ಮಾಣ ಮಾಡಲು ಪ್ರತಿಯೊಬ್ಬ ಭಾರತೀಯರು ಸಹಕಾರ ನೀಡಬೇಕು ಎಂದು ಕೋರಿದ್ದಾರೆ.
ಪಹಲ್ಗಾಂ ಉಗ್ರರ ದಾಳಿಗೆ 26 ಭಾರತೀಯರು ಬಲಿಯಾಗಿದ್ದು, ಉಗ್ರರ ದಾಳಿಗೆ ಬಲಿಯಾದ ಕುಟುಂಬದವರಿಗೆ ದೇವರು ದುಃಖ ಸಹಿಸಿಕೊಳ್ಳುವ ಶಕ್ತಿ ನೀಡಲಿ. ಸಂತ್ರಸ್ತರಿಗೆ ನ್ಯಾಯ ಸಿಗಬೇಕಾದರೇ ಭಯೋತ್ಪಾದಕರಿಗೆ ಹಾಗೂ ಅವರ ಪೋಷಿತರಿಗೇ ತಕ್ಕ ಶಿಕ್ಷೆಯಾಗಲೇ ಬೇಕು. 370 ತಿದ್ದುಪಡೆಯ ನಂತರ ಕಾಶ್ಮೀರ ಕಣಿವೆಯಲ್ಲಿ ಕ್ರಮೇಣ ಶಾಂತಿ ನೆಲೆಸುತ್ತಿದ್ದು, ಶಾಲೆ ಹಾಗೂ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳವಾಗುತ್ತಿರುವುದನ್ನು ಸಹಿಸದೇ ಈ ದಾಳಿಯು ಪಾಕಿಸ್ತಾನ ಬೆಂಬಲಿತ ಉಗ್ರರ ಹತಾಶೆ ಮತ್ತು ಹೇಡಿತನ ತೋರಿಸುತ್ತದೆ.
-ಮಲ್ಲಿಕಾರ್ಜುನ ಕೆಂಗನಾಳ,
ರೈತ ಭಾರತ ಪಕ್ಷದ ರಾಜ್ಯಾಧ್ಯಕ್ಷರು.