ದಾಂಡೇಲಿ 18: ದಾಂಡೇಲಿಯ ಗಾಂಧಿನಗರದಲ್ಲಿ ಪತ್ತೆಯಾಗಿದ್ದ 12 ಕೋಟಿ ರೂ.ನಕಲಿ ನೋಟಿನ ಆರೋಪಿಯನ್ನ ದಾಂಡೇಲಿ ನಗರ ಠಾಣೆಯ ಪೊಲೀಸರು ಉತ್ತರ ಪ್ರದೇಶದ ಲಕ್ನೋದಲ್ಲಿ ಬಂಧಿಸಿ ಕರೆ ತಂದು, ದಾಂಡೇಲಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
ಗಾಂಧಿನಗರದ ಮನೆಯೊಂದರಲ್ಲಿ 12 ಕೋಟಿ ರು. ಗೂ ಹೆಚ್ಚಿನ ಮೌಲ್ಯದ ರೂ.500 ಮುಖ ಬೆಲೆಯ ನಕಲಿ ನೋಟುಗಳು ಪತ್ತೆಯಾಗಿದ್ದವು. ಆರೋಪಿ ಅರ್ಷದ್ ಅಜುಂ ಖಾನ್ ತಲೆಮರೆಸಿಕೊಂಡಿದ್ದ. ದಾಂಡೇಲಿ ಅಪರಾಧ ವಿಭಾಗದ ಪಿಎಸ್ಐ ಕಿರಣ್ ಪಾಟೀಲ್ ಹಾಗೂ ಹಳಿಯಾಳ ಅಪರಾಧ ವಿಭಾಗದ ಪಿಎಸ್ಐ ಕೃಷ್ಣ ಅರಕೇರಿ ಹಾಗೂ ಸಿಬ್ಬಂದಿಗಳು ಈತನ ಬಂಧನಕ್ಕೆ ಬಲೆ ಬೀಸಿದ್ದರು. ಮೊಬೈಲ್ ಲೋಕೇಶನ್ ಹಾಗೂ ಆತನ ಹಿಂದಿನ ಇನ್ನಿತರೆ ವ್ಯವಹಾರದ ಆಧಾರದಲ್ಲಿ ಪೊಲೀಸ್ ತನಿಖಾ ತಂಡ ಉತ್ತರ ಪ್ರದೇಶದ ಲಖ್ನೊಗೆ ತೆರಳಿ ಆತನನ್ನು ಬಂಧಿಸಿದ್ದಾರೆ. ಗುರುವಾರ ಆತನನ್ನ ದಾಂಡೇಲಿಯ ನ್ಯಾಯಾಯಲಯಕ್ಕೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಈತ ಇಷ್ಟೊಂದು ಪ್ರಮಾಣದಲ್ಲಿ ನಕಲಿ ನೋಟುಗಳನ್ನು ದಾಸ್ತಾನು ಇಟ್ಟದ್ದಾದರೂ ಯಾಕೆ ? ಎಂದು ತನಿಖೆ ಪ್ರಾರಂಭವಾಗಿದೆ. ಎ.7 ರಂದು ಈ ಪ್ರಕರಣ ಹೊರಬಂದಿತ್ತು. ದಾಂಡೇಲಿ ತಾಜುದ್ದೀನ ಜುಂಜವಾಡಕರ್ ಮನೆಯಲ್ಲಿ ಬಾಡಿಗೆಗೆ ಇದ್ದ ಅರ್ಷದ್ ಅಜಂ ಖಾನ್ ವಿರುದ್ಧ ಎ.10 ರಂದು ಪ್ರಕರಣ ದಾಖಲಾಗಿತ್ತು.
ಈತ ಮೂಲತಃ ಬಾಂಬೂಲಿಯಮ್ ನಿವಾಸಿ ಎಂದು ಮಾಹಿತಿ ಸಿಕ್ಕಿತ್ತು. ನಂತರ ಈಗ ಲಕ್ನೋ ನಿವಾಸಿ ಎಂದು ಹೇಳಲಾಗುತ್ತಿದೆ. ದಾಂಡೇಲಿಯ ಜೆ ಎಂ ಎಫ್ ಸಿ ನ್ಯಾಯಾಧೀಶರು ಎರಡು ದಿನ ಪೊಲೀಸ್ ಕಸ್ಟಡಿಗೆ ನೀಡಿದ್ದಾರೆ. ಅರ್ಷದ್ ಖಾನ್ ಜುಂಜವಾಡಕರ್ ಮನೆಯಲ್ಲಿ 12 ಕೋಟಿ ನಕಲಿ ಹಣ , ಹಣ ಎಣಿಸುವ ಯಂತ್ರ ಪತ್ತೆಯಾಗಿತ್ತು. ಅರ್ಷದ್ ಖಾನ್ ನಕಲಿ ನೋಟು ಸಿನಿಮಾ ಶೂಟಿಂಗ್ ಗೆ ತಂದದ್ದು, ಆರ್ ಬಿಐ ಅನುಮತಿ ಇದೆ ಎಂದು ಪೊಲೀಸರಿಗೆ ತಿಳಿಸಿ, ಗೋವಾದಿಂದ ತಪ್ಪಿಸಿಕೊಂಡು ಲಕ್ನೋ ಗೆ ಪರಾರಿಯಾಗಿದ್ದ. ಅರ್ಷದ್ ಖಾನ್ ಲಕ್ನೋ ದಿಂದ ಕರೆತಂದ ಪೊಲೀಸರು ತನಿಖೆ ಮುಂದುವರೆಸಿದ್ದರೂ, ಯಾವುದೇ ಅಂಶಗಳನ್ನು ಬಾಯಿ ಬಿಟ್ಟಿಲ್ಲ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.