ದೇವರಹಿಪ್ಪರಗಿ 23: ರೈತರ ಮುಗ್ಧತೆಯನ್ನೇ ಬಂಡವಾಳ ಮಾಡಿಕೊಂಡಿರುವ ಮಧ್ಯವರ್ತಿಗಳು ಬೆಳೆ ವಿಮೆ ಪರಿಹಾರಕ್ಕೆ ಕನ್ನ ಹಾಕುತ್ತಿದ್ದಾರೆ. ಪಾರದರ್ಶಕ ವ್ಯವಸ್ಥೆ ಇದ್ದರೂ ಕೆಲವು ಚಾಲಾಕಿಗಳು ಸರ್ಕಾರ ನೀಡಿದ್ದ ಮುಕ್ತ ಅವಕಾಶವನ್ನೇ ಮೋಸದ ಅಸ್ತ್ರವನ್ನಾಗಿಕೊಂಡು ದೊಡ್ಡ ಮಟ್ಟದಲ್ಲಿ ವಂಚನೆ ಎಸಗುತ್ತಿದ್ದಾರೆ ಎಂದು ಕರ್ನಾಟಕ ರೈತ ಸಂಘದ ಹಸಿರು ಸೇನೆ ತಾಲೂಕು ಘಟಕದ ಅಧ್ಯಕ್ಷರಾದ ಈರ್ಪ ಕುಳೆಕುಮಟಗಿ ಮನವಿ ಸಲ್ಲಿಸಿ ತನಿಖೆಗೆ ಆಗ್ರಹಿಸಿದ್ದಾರೆ.
ಪಟ್ಟಣದ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಬುಧವಾರ ಮನವಿ ಪತ್ರ ಸಲ್ಲಿಸಿ ಮಾತನಾಡಿದ ಅವರು, ತಾಲೂಕಿನ ಕೋರವಾರ ಹಾಗೂ ವರ್ಕನಹಳ್ಳಿ ಗ್ರಾಮದ ಸುಮಾರು 12-15 ಸಾವಿರದಷ್ಟು ರೈತರು ಬೆಳೆ ವಿಮೆ ತುಂಬಿದ್ದು. ಅದರಲ್ಲಿ ಕೇವಲ 62 ಜನ ರೈತರಿಗೆ ಮಾತ್ರ ವಿಮೆ ಬಂದಿದ್ದು. ಅದರಲ್ಲಿ 20 ಜನ ರೈತರಿಗೆ ಮೋಸವಾಗಿದೆ. ಬೆಳೆವಿಮೆ ರೈತರ ಖಾತೆಗೆ ಜಮಾ ಆಗದೆ ಖಾಸಗಿ ವ್ಯಕ್ತಿಯಾದ ಶಿವರಾಜ ಸಂಗಪ್ಪ ಅಮರಖೇಡ ಇವರ ಖಾತೆಗೆ ಲಕ್ಷಾನು ಲಕ್ಷ ಹಣ ಜಮೆ ಆಗಿದೆ. ಇದರಿಂದ ರೈತರು ಕಂಗಾಲಾಗಿದ್ದಾರೆ, ಇದರಲ್ಲಿ ಕೃಷಿ ಅಧಿಕಾರಿಗಳು, ವಿಮೆ ಅಧಿಕಾರಿಗಳು ಹಾಗೂ ಬೆಳೆ ಸಮೀಕ್ಷೆ ಅಧಿಕಾರಿಗಳು ಶಾಮೀಲಾಗಿದ್ದಾರೆ. ಈ ಕುರಿತು ಹಲವಾರು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿ ರೈತರಿಗೆ ನ್ಯಾಯ ಒದಗಿಸಬೇಕು ಆಗ್ರಹಿಸಿದರು ಇಲ್ಲಿಯವರೆಗೆ ಯಾವುದೇ ತನಿಖೆ ಮಾಡದೆ ಇರುವುದು ವಿಪರ್ಯಾಸವೇ ಸರಿ. ಶೀಘ್ರ ತನಿಖೆ ಮಾಡಿ ರೈತರಿಗೆ ನ್ಯಾಯ ಒದಗಿಸಬೇಕು ಇಲ್ಲದಿದ್ದರೆ ಬರುವಂತ ದಿನಗಳಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ತಾಲೂಕು ಘಟಕ ಹಾಗೂ ತಾಲೂಕಿನ ರೈತರು ಸೇರಿ ಅಹೋರಾತ್ರಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಮನವಿ ಪತ್ರ ಸಲ್ಲಿಸಿದರು. ಮನವಿಯನ್ನು ತಹಶೀಲ್ದಾರ್ ಪ್ರಕಾಶ ಸಿಂದಗಿ ಅವರ ಪರವಾಗಿ ಕಂದಾಯ ಶಿರಸ್ತೇದಾರ ಸುರೇಶ ಮ್ಯಾಗೇರಿ ಸ್ವೀಕರಿಸಿ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ತಾಲೂಕ ಗೌರವಾಧ್ಯಕ್ಷರಾದ ಶಿವಾನಂದ ಹಿರೇಮಠ, ಜಿಲ್ಲಾ ಉಪಾಧ್ಯಕ್ಷರಾದ ಸಂಪತ್ ಜಮಾದಾರ, ಮುಖಂಡರುಗಳಾದ ಜಾನು ಗುಡಿಮನಿ, ಮಲ್ಲಪ್ಪ ಸುಂಬಡ, ಸುಭಾಷ ಸಜ್ಜನ,ಮಲ್ಲನಗೌಡ ಬಿರಾದಾರ, ಅಶೋಕ ನಾಯ್ಕೋಡಿ, ಸಂಗಪ್ಪಗೌಡ ಬಿರಾದಾರ, ಲಕ್ಕಪ್ಪ ಹುಗಾರ, ಶಿವಪ್ಪ ತಾಳಿಕೋಟಿ ಸೇರಿದಂತೆ ಹಲವಾರು ಜನ ರೈತರು ಉಪಸ್ಥಿತರಿದ್ದರು.