ಶರಣರ ತತ್ವ ಪಾಲಿಸಿ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ: ಬಸವರಾಜ ಜಿ. ಗಿರಿತಿಮ್ಮಣ್ಣವರ

Follow the principle of refuge and give good morals to children: Basavaraja G. Girithimmannavara

ಶರಣರ ತತ್ವ ಪಾಲಿಸಿ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ: ಬಸವರಾಜ ಜಿ. ಗಿರಿತಿಮ್ಮಣ್ಣವರ  

ಗದಗ  13: ಶರಣರ ತತ್ವಾದರ್ಶಗಳು ಸಾರ್ವಕಾಲಿಕ ಸತ್ಯದ ದೀವಿಗೆಗಳಾಗಿವೆ. ಮಾನವನ ಬದುಕಿಗೆ ಶರಣರ ವಚನಗಳು ಹಿಂದೆಂದಿಗಿಂತಲೂ ಇಂದು ಹೆಚ್ಚು ಪ್ರಸ್ತುತವಾಗಿವೆ. ದಿನೇ ದಿನೇ ಹಲವಾರು ಕಾರಣಗಳಿಂದ ನಮ್ಮ ಸುತ್ತಲಿನ ಸಮುದಾಯವು ಹದಗೆಡುತ್ತಿದೆ. ಮೌಲ್ಯಗಳು ಮಾಯವಾಗುತ್ತಿವೆ. ಅತಿಯಾದ ಆಸೆಯಿಂದ ಮನುಷ್ಯ ಸತ್ಯಮಾರ್ಗದಿಂದ ದುರ್ಮಾಗದತ್ತ ಸಾಗಿದ್ದಾನೆ. ಇದು ಹೀಗೇ ಮುಂದುವರೆದಲ್ಲಿ ನಮ್ಮ ಮುಂದಿನ ಪೀಳಿಗೆಯ ಭವಿಷ್ಯ ಕರಾಳವಾಗುವುದು ನಿಶ್ಚಿತ. ಹಾಗಾಗಿ ನಮ್ಮ ಮಕ್ಕಳನ್ನು ಉತ್ತಮ ಸಂಸ್ಕಾರಗಳ ಮೂಲಕ ರಕ್ಷಿಸಬೇಕಾಗಿದೆ ಇದು ಇಂದಿನ ತುರ್ತು ಅಗತ್ಯ ಎಂದು ಶಿರಹಟ್ಟಿಯ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ   ಬಸವರಾಜ ಜಿ. ಗಿರಿತಿಮ್ಮಣ್ಣವರ ನುಡಿದರು. 

ತಾಲೂಕಿನ ಅಸುಂಡಿ ಗ್ರಾಮದ ಶರಣ ಶ್ರೀ ಮಂಜುನಾಥ ಗುಡದೂರ ಇವರ ಮಹಾಮನೆಯಲ್ಲಿ ದಿ. 12 ರಂದು ಅಕ್ಕಮಹಾದೇವಿಯ ದಿನಾಚರಣೆಯ ಸಂದರ್ಭದಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಹಾಗೂ ಕದಳಿ ಮಹಿಳಾ ವೇದಿಕೆ ಗದಗ ಇವುಗಳ ಆಶ್ರಯದಲ್ಲಿ ಹಮ್ಮಿಕೊಂಡ “ಮನೆಮನದಂಗಳದಿ ವಚನರಥ-ಶರಣಪಥ” 2ನೆಯ ಕಾರ್ಯಕ್ರಮದಲ್ಲಿ “ವೈರಾಗ್ಯನಿಧಿ ಅಕ್ಕಮಹಾದೇವಿ” ಕುರಿತು ಅನುಭಾವದ ನುಡಿಗಳ ಮೂಲಕ  ಅಕ್ಕಮಹಾದೇವಿ ಬೆಳಕಾಗಿ ಜನಿಸಿ, ಬೆಳಕಾಗಿ ಬದುಕಿ, ಬೆಳಕಾಗಿಯೇ ಹೋದಳು. ಬದುಕಿನಲ್ಲಿ ಅವಳ ಆಯ್ಕೆ ಕುರಿತು ಮಾತನಾಡುತ್ತ  ನಮ್ಮ ಆಯ್ಕೆ ನಮ್ಮದಾಗಿರಬೇಕೆ ವಿನಃ ಬೇರೆಯವರ ಆಯ್ಕೆಯಾಗಿರಬಾರದು. ಅಕ್ಕ ಆಯ್ದುಕೊಂಡದ್ದನ್ನು ಆಚರಿಸಿ ಎಂಥ ಸ್ತುತಿ-ನಿಂದೆಗಳು ಬಂದರೂ ಸಹ ಸಮಾಧಾನಿಯಾಗಿ ತನ್ನ ಗುರಿಯನ್ನು ತಲುಪಿದಾಕೆ ಬಯಲಲ್ಲಿ ಬಯಲಾಗಿ ಹೋದ ಶರಣೆ ಎಂದು ಗುಣಗಾನ ಮಾಡಿ ಅಕ್ಕನ ಆದರ್ಶ ಸಾರ್ವಕಾಲಿಕ ಸಕಲರಿಗೂ ಮಾರ್ಗದರ್ಶಿಯಾದವುಗಳು ಎಂದು ನುಡಿದರು. 

ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಅಸುಂಡಿ ಗ್ರಾಮದ ಹಿರಿಯರಾದ ಶ್ರೀ ಸೋಮಣ್ಣ ಗಿರಡ್ಡಿ ಮಾತನಾಡಿ ಮಧ್ಯರಾತ್ರಿ ಎದ್ದಹೋದವರೆಲ್ಲರೂ ಬುದ್ಧರಾಗಲಿಲ್ಲ. ‘ಸಂಸಾರ ಬೇಡ, ಸಂಸ್ಕಾರ ಬೇಕು ಎಂದು ಎದ್ದು ಹೋದ ಸಿದ್ಧಾರ್ಥ ಮಾತ್ರ ಬುದ್ಧನಾದ’ ಆದಕಾರಣ ನಾವು ಮಾಡುತ್ತಿರುವ ಕೆಲಸ ಪವಿತ್ರವಾಗಿರಬೇಕು. ಶರಣರ ಹಾಗೆ ನಮ್ಮ ಕಾಯಕದಲ್ಲಿ ನಾವು ಕೈಲಾಸ ಕಾಣುವವರಾಗಬೇಕು ಎಂದು ನುಡಿದರು. 

ಕಾರ್ಯಕ್ರಮದ ಮುಖ್ಯ ಅತಿಥಿಗಳಾದ   ಎಂ.ಕೆ.ಲಮಾಣಿ ಅಧ್ಯಕ್ಷರು ಶರಣ ಸಾಹಿತ್ಯ ಪರಿಷತ್ತು ಶಿರಹಟ್ಟಿ ಇವರು ಮಾತನಾಡಿ ನಮ್ಮ ಬದುಕು ಹೇಗಿರಬೇಕೆಂದರೆ ಬಡಿಸಿದ ಮೇಲೆ ಹಸಿವು ಇರಬಾರದು, ಗುಡಿಸಿದ ಮೇಲೆ ಕಸ ಇರಬಾರದು ಎಂಬ ನುಡಿಯನ್ನು ಉದಾಹರಿಸಿ, ನಮ್ಮ ನುಡಿ-ನಡೆಗಳು ಒಂದಾಗಿರಬೇಕು. ನಾವು ಬೇಡಿದ್ದನ್ನು ಶರಣರು ಬೇಡಲಿಲ್ಲ, ಶರಣರು ಬೇಡಿದ್ದನ್ನು ನಾವು ಬೇಡುತ್ತಿಲ್ಲ. ಇದೇ ನಮಗೂ ಮತ್ತು ಶರಣರಿಗೂ ಇರುವ ವ್ಯತ್ಯಾಸ ಎಂದರು. 

ಅಧ್ಯಕ್ಷೀಯ ನುಡಿಯಲ್ಲಿ   ಕೆ.ಎ.ಬಳಿಗೇರ ಅಧ್ಯಕ್ಷರು ಶರಣ ಸಾಹಿತ್ಯ ಪರಿಷತ್ತು ಗದಗ ಜಿಲ್ಲೆ ಇವರು “ಬೆಟ್ಟದಾ ಮೇಲೊಂದು ಮನೆಯ ಮಾಡಿ.. ವಚನವನ್ನು ಸ್ಮರಿಸಿ ಅಕ್ಕ ತನ್ನ ಮನೆಯಿಂದ ಅರಮನೆಗೆ ಹೋಗಿ, ಅರಮನೆಯಿಂದ ಗುರುಮನೆಗೆ ಹೋಗಿ ಕೊನೆಯಲ್ಲಿ ಶಿವನ ಮನೆಗೆ ಹೋಗಿ, ಶಿವನಲ್ಲಿ ಲೀನಳಾದಳು ಎನ್ನುವ ಮೂಲಕ ಅಕ್ಕನ ವೈರಾಗ್ಯವನ್ನು ಕೊಂಡಾಡಿ ಅಂಥ ತ್ಯಾಗ ಸಾಮಾನ್ಯರಿಂದ ಸಾಧ್ಯವಿಲ್ಲ. ಆದರೆ ಅಕ್ಕನ ತತ್ವಾದರ್ಶಗಳನ್ನು ಪಾಲಿಸಿ ನಾವೆಲ್ಲ ಪಾವನರಾಗಬಹುದು ಎಂದರು. 

ಇದೇ ಸಂದರ್ಭದಲ್ಲಿ ಉಪನ್ಯಾಸಕಾರರು, ಉದ್ಘಾಟಕರು, ಅಧ್ಯಕ್ಷರು ಹಾಗೂ ಅತಿಥಿ ಅಭ್ಯಾಗತರನ್ನು ಸನ್ಮಾನಿಸಲಾಯಿತು. ಶರಣ ಸಾಹಿತ್ಯ ಪರಿಷತ್ತು ಹಾಗೂ ಕದಳಿ ಮಹಿಳಾ ವೇದಿಕೆಯ ವತಿಯಿಂದ ಮಹಾಮನೆಯ ಶರಣ   ಮಂಜುನಾಥ ಗುಡದೂರ ಇವರನ್ನು ಸನ್ಮಾನಿಸಲಾಯಿತು.  

ಆರಂಭದಲ್ಲಿ   ಮುಳಗುಂದ ಗುರುಮಾತೆಯರು ಪ್ರಾರ್ಥಿಸಿದರು.   ಡಿ.ಎಸ್‌.ಬಾಪುರಿ ಸ್ವಾಗತಿಸಿದರು  ಮುರಿಗೆಪ್ಪ ಲಿಂಗಧಾಳ ಹಾಗೂ  ಆರುಣಿ ಗುಡದೂರ ವಚನಗಾಯನ ಮಾಡಿದರು.   ಸತೀಶ ಚೆನ್ನಪ್ಪಗೌಡ್ರ ಉಪಸ್ಥಿತರಿದ್ದರು.   ಎಂ.ಎ.ಮಕಾನದಾರ ಕಾರ್ಯಕ್ರಮ ನಿರೂಪಿಸಿದರು.   ಡಿ.ಕೆ.ನಿಂಬನಗೌಡ್ರ ವಂದಿಸಿದರು.