ಕೊಪ್ಪಳ 03: ಕಾರ್ಮಿಕ ವರ್ಗದ ಶ್ರಮಕ್ಕೆ ಎಲ್ಲರೂ ಗೌರವ ನೀಡಬೇಕು ಹಾಗೂ ಕಾರ್ಮಿಕರಿಗೆ ಕಾನೂನಿನಲ್ಲಿರುವ ಹಕ್ಕುಗಳನ್ನು ದೊರಕಿಸಿ ಕೊಡಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಕೊಪ್ಪಳ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಮಹಾಂತೇಶ ಎಸ್ ದರಗದ ಹೇಳಿದರು.
ಅವರು ಶುಕ್ರವಾರ ಬಹದ್ದೂರಬಂಡಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಕೊಪ್ಪಳ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಜಿಲ್ಲಾ ಕಾರ್ಮಿಕ ಇಲಾಖೆ, ಬಹದ್ದೂರ ಬಂಡಿಯ ಗ್ರಾಮೀಣ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ಸಹಯೋಗದಲ್ಲಿ ಅಂತರಾಷ್ಟ್ರೀಯ ಕಾರ್ಮಿಕ ದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶ್ರಮಿಕರ ಬೆವರಿನ ಬೆಲೆಗೆ ತಕ್ಕ ಗೌರವ ಸಿಗಬೇಕು. ಶ್ರಮಿಕ ಮತ್ತು ಮಾಲೀಕನ ಸಂಬಂಧ ತಂದೆ ಮಕ್ಕಳ ರೀತಿಯಲ್ಲಿರಬೇಕು. ಕಾರ್ಮಿಕರಿಗೆ ತಾರತಮ್ಯ ಮಾಡದೆ ಕೆಳಹಂತದ ಕಾರ್ಮಿಕ ಇರಲಿ ಅಥವಾ ಮೇಲ್ಮಟ್ಟದ ಅಧಿಕಾರಿ ಇರಲಿ ಎಲ್ಲರ ಕೆಲಸಕ್ಕೆ ಗೌರವ ದೊರಕಬೇಕು. ಕಾರ್ಮಿಕರು ಶ್ರಮಜೀವಿಗಳು ಅವರು ಘನತೆಯಿಂದ ಬಾಳಬೇಕು ಎಂದು ತಿಳಿಸಿದರು.
ಅದೇ ರೀತಿ ಪೌರಕಾರ್ಮಿಕರಾಗಲಿ ಆಯುಕ್ತರಾಗಲಿ ಎಲ್ಲರನ್ನು ಸಮಾಜ ಸಮಾನವಾಗಿ ಕಾಣಬೇಕು. ಎಲ್ಲಾ ವ್ಯಕ್ತಿಗೂ ಅವರದೇ ಆದ ಮಹತ್ವ ಇದೆ. ಅದಕ್ಕೆ ಸಮಾಜದ ಪ್ರತಿಯೊಬ್ಬರೂ ಕೂಡಾ ಬೆಲೆಕೊಟ್ಟು ನಡೆದಾಗ ಸಮ ಸಮಾಜ ನಿರ್ಮಾಣ ಆಗುತ್ತದೆ. ಕಾರ್ಮಿಕರನ್ನು ಅವರ ಬಟ್ಟೆ, ವೇಷ ಭೂಷಣ ನೋಡಿ ಅಳತೆ ಮಾಡಬಾರದು. ಅವರು ಮಾಡುವ ಕಾರ್ಯಕ್ಕೆ ಬೆಲೆ ನೀಡಬೇಕು. ಕಾರ್ಮಿಕ ಇಲಾಖೆಯಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಇರುವ ಸೌಲಭ್ಯಗಳನ್ನು ಎಲ್ಲಾ ಅರ್ಹ ಕಾರ್ಮಿಕರು ಪಡೆದುಕೊಳ್ಳಬೇಕು. ಕಾರ್ಮಿಕರ ಸಮಸ್ಯೆಗಳಿದ್ದಲ್ಲಿ ಕಾರ್ಮಿಕ ಇಲಾಖೆಯ ಅಧಿಕಾರಿಗಳ ಕಛೇರಿಗೆ ಭೇಟಿ ನೀಡಿ ಪರಿಹಾರ ಕಂಡುಕೊಳ್ಳಿ ಎಂದು ತಿಳಿಸಿದ ಅವರು ಕಾರ್ಮಿಕರಿಗಾಗಿ ಇರುವ ಕಾನೂನುಗಳ ಕುರಿತು ಮಾಹಿತಿ ನೀಡಿದರು.
ಬಹದ್ದೂರಬಂಡಿ ಗ್ರಾ.ಪಂ ಅಧ್ಯಕ್ಷರಾದ ಯೋಗಾನಂದ ಲೇಬಗೇರಿ ಅವರು ಮಾತನಾಡಿ, ಕಾರ್ಮಿಕ ಇಲಾಖೆಯಲ್ಲಿ ಸಿಗುವ ಸೌಲಭ್ಯಗಳನ್ನು ನಮ್ಮೂರಿನ ಗ್ರಾಮೀಣ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಸಂಘದವರು ಪಡೆದುಕೊಳ್ಳುತ್ತಿದ್ದಾರೆ. ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಎಲ್ಲರೂ ಕ್ರಿಯಾಶೀಲರಾಗಿ ಇಲಾಖೆಯ ಸೌಲಭ್ಯಗಳನ್ನು ಗ್ರಾಮದ ಎಲ್ಲಾ ಕಾರ್ಮಿಕರಿಗೆ ಒದಗಿಸಲು ಶ್ರಮಿಸುತ್ತಿದ್ದಾರೆ ಎಂದರು.
ಬಹದ್ದೂರಬಂಡಿ ಗ್ರಾಮೀಣ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಸಂಘದ ಅಧ್ಯಕ್ಷರಾದ ಮೆಹಬೂಬ ಮಣ್ಣೂರ ಅವರು ಮಾತನಾಡಿ, ಕಾರ್ಮಿಕ ಇಲಾಖೆಯಿಂದ ನಮ್ಮ ಕಾರ್ಮಿಕರು ಎಲ್ಲಾ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿದ್ದು, ಇಲಾಖೆ ಅಧಿಕಾರಿಗಳ ಸ್ಪಂದನೆ ಉತ್ತಮವಾಗಿದ್ದು, ಎಲ್ಲಾ ಸೌಲಭ್ಯಗಳು ದೊರೆಯುವಂತೆ ಮಾಡುತ್ತಿದ್ದಾರೆ. ಇದಕ್ಕಾಗಿ ಇಲಾಖೆಯ ಅಧಿಕಾರಿಗಳಿಗೆ ಧನ್ಯವಾದ ತಿಳಿಸಿದರು.
ಕಾರ್ಮಿಕ ನೀರೀಕ್ಷಕಿಯಾದ ಮಂಜುಳಾ ಅವರು ಕಾರ್ಮಿಕ ದಿನಾಚರಣೆ ವಿಶೇಷತೆ ಕುರಿತು ತಿಳಿಸಿದರು. ಒಕ್ಕೂಟದ ಅಧ್ಯಕ್ಷರಾದ ರಮೇಶ ಘೋರೆ್ಡ ಅವರು ಇಲಾಖೆಯ ಸೌಲಭ್ಯಗಳನ್ನು ಎಲ್ಲಾ ಕಾರ್ಮಿಕರು ಸ್ಪಷ್ಟವಾದ ಮಾಹಿತಿ ಪಡೆದುಕೊಂಡು ಸರಿಯಾದ ದಾಖಲಾತಿ ಸಲ್ಲಿಸಿ ಅರ್ಜಿ ಸಲ್ಲಿಸಿ ಪಡೆಯಬೇಕೆಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾರ್ಮಿಕ ಅಧಿಕಾರಿಗಳಾದ ಸುಧಾ ಗರಗ ಅವರು ಕಾರ್ಮಿಕ ಇಲಾಖೆಯಿಂದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಇರುವ ಎಲ್ಲಾ ಸೌಲಭ್ಯಗಳ ಕುರಿತು ಮಾಹಿತಿ ನೀಡುತ್ತಾ, ಕಾರ್ಮಿಕರಿಗೆ ಹುಟ್ಟಿನಿಂದ ಸಾವಿನವರೆಗೂ ಎಲ್ಲಾ ಸೌಲಭ್ಯಗಳಿವೆ. ಹೆರಿಗೆ ಸೌಲಭ್ಯ, ವೈಧ್ಯಕೀಯ ಸೌಲಭ್ಯ, ಮದುವೆ ಸಹಾಯಧನ, ಶೈಕ್ಷಣಿಕ ಸಹಾಯಧನ, ಪಿಂಚಣಿ ಸೌಲಭ್ಯ, ಅಂತ್ಯಕ್ರಿಯೆ ಹಾಗೂ ಮರಣ ಸಹಾಯಧನ ಹೀಗೆ ಎಲ್ಲಾ ಸೌಲಭ್ಯಗಳು ಇವೆ ಹಾಗೂ ಅಸಂಘಟಿತ ಕಾರ್ಮಿಕರಿಗೂ ಕೂಡಾ ಇಲಾಖೆಯಲ್ಲಿ ಸೌಲಭ್ಯಗಳಿವೆ. ಕಟ್ಟಡ ಕಾರ್ಮಿಕರು ಕಟ್ಟಡ ಕಾರ್ಮಿಕರಾಗಿಯೇ ಇರಿ. ಇತರೆ ಕಾರ್ಮಿಕರು ತಮ್ಮ ಬೇರೆ ಬೇರೆ ವೃತ್ತಿಯಲ್ಲಿ ಕೆಲಸ ನಿರ್ವಹಿಸುತ್ತಿರುವವರನ್ನು ನಮೂದಿಸಿ ಅಸಂಘಟಿತ ಕಾರ್ಮಿಕರಾಗಿ ನೋಂದಾಯಿಸಿ ಸೌಲಭ್ಯ ಪಡೆದುಕೊಳ್ಳಿ ಎಂದು ತಿಳಿಸಿದರು.
ಕಾರ್ಮಿಕ್ರಮದಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ವಿವಿಧ ಸಂಘದ ಪದಾಧಿಕಾರಿಗಳು, ಕಾರ್ಮಿಕ ಇಲಾಖೆಯ ಸಿಬ್ಬಂದಿಗಳು ಪಾಲ್ಗೊಂಡಿದ್ದರು. ಜಿಲ್ಲಾ ಬಾಲಕಾರ್ಮಿಕ ಯೋಜನಾ ನಿರ್ದೇಶಕ ಬಸವರಾಜ ಹಿರೇಗೌಡ್ರ ಕಾರ್ಯಕ್ರಮ ನಿರೂಪಿಸಿದರು. ಎಕ್ಸಿಕ್ಯೂಟಿವ್ ಹೇಮಂತ್ ಸಿಂಗ್ ಸ್ವಾಗತಿಸಿದರು ಹಾಗೂ ದಾದಾಪೀರ ರವರು ವಂದಿಸಿದರು.