ಗೋವಾ ಹುಲಿಗಳಿಗೆ ಮೃತ್ಯುಕೂಪವಾಗಬಹುದು; ಎನ್ ಟಿಸಿಎ

ಪಣಜಿ, ಫೆ 11, ಗೋವಾದ ಮಹಾದಾಯಿ ವನ್ಯಜೀವಿ ಧಾಮ (ಎಂಡಬ್ಲ್ಯುಎಸ್ ) ಅನ್ನು ಹುಲಿ ಅಭಯಾರಣ್ಯವನ್ನಾಗಿ ಬದಲಿಸಿ ಸಂರಕ್ಷಿಸದಿದ್ದಲ್ಲಿ,  ಅದು ಹುಲಿಗಳ ಸಾವಿನ ಕೂಪವಾಗಿ ಪರಿಣಮಿಸಲಿದೆ ಎಂದು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್ ಟಿಸಿಎ) ವರದಿ ತಿಳಿಸಿದೆ. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರಾಜೇಂದ್ರ ಗರವಾಡ್ ಅವರು ಸಲ್ಲಿಸಿರುವ ವರದಿಯಲ್ಲಿ, ಮಹಾದಾಯಿ ವನ್ಯಜೀವಿ ಧಾಮಕ್ಕೆ ಕಾನೂನಾತ್ಮಕ ಸ್ಥಾನಮಾನ ನೀಡಲು ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಶಿಫಾರಸು ಮಾಡಲಾಗಿದೆ. ರಾಜ್ಯದಲ್ಲಿ ಹುಲಿಗಳ ಸಾವು ಹೆಚ್ಚಳದ ಹಿನ್ನೆಲೆಯಲ್ಲಿ ವನ್ಯಧಾಮವನ್ನು ಹುಲಿ ಸಂರಕ್ಷಿತ ಪ್ರದೇಶವನ್ನಾಗಿ ಬದಲಾಯಿಸಿ, ಅದಕ್ಕೆ ಸೂಕ್ತ ತಾಂತ್ರಿಕ, ಆರ್ಥಿಕ ಹಾಗೂ ನಿರ್ವಹಣೆಯ ಸೌಲಭ್ಯಗಳನ್ನು ಒದಗಿಸಬೇಕು ಎಂದಿದೆ. 

ಅಲ್ಲಿನ ಅಭಯಾರಣ್ಯದಲ್ಲಿ ಹುಲಿಗಳು ವಾಸಿಸುತ್ತಿರುವ ವಿಷಯ ಖಚಿತಪಟ್ಟಿದ್ದು, ಸ್ಥಳೀಯ ನಿವಾಸಿಗಳಿಗೆ ಆ ಕುರಿತು ಮಾಹಿತಿ ಇದ್ದರೂ, ಅವುಗಳ ಸಂರಕ್ಷಣೆಗೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಆದ್ದರಿಂದ ಅದು ಹುಲಿಗಳಿಗೆ ಮೃತ್ಯುಕೂಪವಾಗಿ ಬದಲಾಗುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ ಎಂದು ವರದಿಯಲ್ಲಿ ಆತಂಕ ವ್ಯಕ್ತಪಡಿಸಲಾಗಿದೆ. ಕಳೆದ ಜನವರಿಯಲ್ಲಿ ನಾಲ್ಕು ಹುಲಿಗಳು ವಿಷಾಹಾರ ಸೇವಿಸಿ ಮೃತಪಟ್ಟ ಹಿನ್ನೆಲೆಯಲ್ಲಿ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯ ವಸ್ತುಸ್ಥಿತಿಯನ್ನು ಪರಿಶೀಲಿಸಲು ಈ ಸಮತಿಯನ್ನು ರಚಿಸಿತ್ತು.