ಧಾರವಾಡ 23: ವಿಕಲಚೇತನರನ್ನು ಮುಖ್ಯ ವಾಹಿನಿಗೆ ಕರೆತರುವ ಕೆಲಸಗಳು ಆಗಬೇಕು. ವಿಕಲಚೇತನರಿಗೆ ಎಲ್ಲ ರೀತಿಯ ಸರಕಾರಿ ಸೌಲಭ್ಯಗಳು ತಲುಪಬೇಕು. ಸರಕಾರಿ ಸೌಲಭ್ಯಗಳು ವಿಕಲಚೇತನರಿಗೆ ಒದಗಿಸುವ ಕೆಲಸ ಅಧಿಕಾರಿಗಳು ನಿಷ್ಠೆಯಿಂದ ನಿರ್ವಹಿಸಬೇಕು ಎಂದು ಮನೋರೋಗ ವಿಭಾಗದ ಸಹಪಾಧ್ಯಾಪಕ ಡಾ. ಮಂಜುನಾಥ ಭಜಂತ್ರಿ ಅವರು ಹೇಳಿದರು.
ಅವರು ನಿನ್ನೆ (ಮೇ. 22) ಮಧ್ಯಾಹ್ನ ಧಾರವಾಡ ಡಿಮ್ಹಾನ್ಸ್ ಆಸ್ಪತ್ರೆಯ ಆಡಿಟೋರಿಯಮ್ ಹಾಲ್ನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ, ಧಾರವಾಡ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನಗಳ ಸಂಸ್ಥೆ ಹಾಗೂ ವಿವಿಧ ಸ್ವಯಂ ಸೇವಾ ಸಂಸ್ಥೆಗಳ ದಿ. ಅಸೊಸೆಷನ್ ಆಫ್ ಪಿಪಲ್ ವಿತ್ ಡಿಜಬಲಿಟಿ (ಎಪಿಡಿ) ಇವರ ಸಂಯುಕ್ತ ಆಶ್ರಯದಲ್ಲಿ ಸುಗಮ್ಯ ಯಾತ್ರಾ ಕಾರ್ಯಕ್ರಮದಡಿಯಲ್ಲಿ ವಿಶ್ವ ಸುಲಭ ಲಭ್ಯತೆ ದಿನಾಚರಣೆಯ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು.
ವಿಕಲಚೇತನರಿಗೆ ಕೆಲವು ಕಾರ್ಯಗಾರಗಳನ್ನು ನಡೆಸುವುದು ಮತ್ತು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ನಡೆಸುತ್ತಿರಬೇಕು ಎಂದು ಹೇಳಿದರು.
ಜಿಲ್ಲಾ ವಿಶೇಷ ಚೇತನ ಕಲ್ಯಾಣ ಅಧಿಕಾರಿ ಜಗದೀಶ ಅವರು ಮಾತನಾಡಿ, ರಾಷ್ಟ್ರದಲ್ಲಿರುವ ಸರ್ಕಾರಿ ಕಚೇರಿಗಳು, ಸಾರ್ವಜನಿಕ ಕಟ್ಟಡಗಳು, ಮನರಂಜನೆ ಸ್ಥಳಗಳು, ಉದ್ಯಾನವನ, ಗ್ರಂಥಾಲಯ, ಮಾರುಕಟ್ಟೆ, ಪ್ರವಾಸಿ ತಾಣ ಮತ್ತು ಸಾರ್ವಜನಿಕ ಶೌಚಾಲಯಗಳು ಅಡೆತಡೆ ರಹಿತ ವಾತಾವರಣ ಒಳಗೊಂಡಿರುವ ಬಗ್ಗೆ ಮಾಹಿತಿ ಕಲೆ ಹಾಕಲು ಈ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಭಾರತ ಸರ್ಕಾರ ಮಂತ್ರಾಲಯವು ಸುಗಮ್ಯ ಯಾತ್ರಾ ಎಂಬ ಅರಿವು ಮೂಡಿಸುವ ಕಾರ್ಯಕ್ರಮ ಎಲ್ಲ ರಾಜ್ಯಗಳಿಗೆ ಸೂಚಿಸಿದ್ದಾರೆ ಎಂದು ಹೇಳಿದರು.
ಜನಮುಖಿ ಸಂಸ್ಥೆಯ ಬಸವರಾಜ ಮ್ಯಾಗೇರಿ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಡಿಮ್ಹಾನ್ಸನ ಮನೋ ವೈದ್ಯಕೀಯ ಸಮಾಜಕಾರಿ ವಿಭಾಗದ ಅಶೋಕ ಕೋರಿ, ಜಿಲ್ಲಾ ಸಂಯೋಜಕ ಆಸೀಪ್ ಆಸೀನ್, ಕ್ಲೇನಿಕಲ್ ಸೈಕಾಲಜಿ ವಿಭಾಗದ ಮುಖ್ಯಸ್ಥೆ ಡಾ. ಗಾಯತ್ರಿ ಹೆಗಡೆ, ರವೀಂದ್ರ ಹುಬ್ಬಳ್ಳಿ ಅವರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಜಿಲ್ಲಾ ವಿಶೇಷ ಚೇತನ ಕಲ್ಯಾಣ ಅಧಿಕಾರಿ ಕೆ.ಜಗದೀಶ ಅವರು ಸ್ವಾಗತಿಸಿದರು. ಡಾ. ಮೋಹನ ತಂಬದ ಅವರು ವಂದಿಸಿದರು.