ಗ್ರಾಮೀಣ ಸಂಪರ್ಕ ರಸ್ತೆ ಸುಧಾರಣೆಗೆ ಕಾಮಗಾರಿಗೆ ಭೂಮಿಪೂಜೆ

Groundbreaking ceremony for rural connectivity road improvement work

ಗ್ರಾಮೀಣ ಸಂಪರ್ಕ ರಸ್ತೆ ಸುಧಾರಣೆಗೆ ಕಾಮಗಾರಿಗೆ ಭೂಮಿಪೂಜೆ

ಚಿಕ್ಕೋಡಿ 12: ತಾಲೂಕಿನ ಕೇರೂರ - ಕೆಂಪಟ್ಟಿ ರಸ್ತೆಯಿಂದ ಮಾಳಿ, ಗಡದೆ ತೋಟಗಳ ಮಾರ್ಗವಾಗಿ ಕಾಡಾಪುರ ಕೆರೆಯವರೆಗೆ ನಿರ್ಮಾಣವಾಗಲಿರುವ 60 ಲಕ್ಷ ರೂ ವೆಚ್ಚದ ರಸ್ತೆ ಕಾಮಗಾರಿಗೆ ಹಾಗೂ ಕೆರೂರ ಗ್ರಾಮದ ಜೋಡಕುರಳಿ ರಸ್ತೆಯಿಂದ ಪಾಟೀಲ ತೋಟದವರೆಗೆ 50 ಲಕ್ಷ ರೂ ವೆಚ್ಚದ ರಸ್ತೆ ಕಾಮಗಾರಿಗೆ ಕೆರೂರ, ಕಾಡಾಪುರ ಹಾಗೂ ಜೋಡಕುರಳಿ ಗ್ರಾಮದ ಮುಖಂಡರ ನೇತೃತ್ವದಲ್ಲಿ ಭೂಮಿ ಪೂಜೆ ನೆರವೇರಿಸಲಾಯಿತು. 

ಭೂಮಿ ಪೂಜೆಯನ್ನು ನೆರವೇರಿಸಿ ಗ್ರಾಮದ ಮುಖಂಡರಾದ ಮಲ್ಲಿಕಾರ್ಜುನ ಪಾಟೀಲ ಅವರು ಮಾತನಾಡಿ ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಹಾಗೂ ವಿಧಾನ ಪರಿಷತ್ ಸದಸ್ಯರಾದ ಪ್ರಕಾಶ ಹುಕ್ಕೇರಿ ಮತ್ತು ಶಾಸಕರಾದ ಗಣೇಶ ಹುಕ್ಕೇರಿ ಅವರ ಪ್ರಯತ್ನದಿಂದ ಗ್ರಾಮಗಳ ರಸ್ತೆ ಸುಧಾರಣೆಗಾಗಿ ಒಟ್ಟು 1.10 ಕೋಟಿ ರೂ. ಅನುದಾನ ಮಂಜೂರಾಗಿದ್ದು, ಗ್ರಾಮದ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಹೇಳಿದರು. 

ಜೋಡಕುರಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮುರಾರಿ ನಾಗನೂರೆ ಮಾತನಾಡಿ ಬಹುದಿನಗಳ ಬೇಡಿಕೆಗೆ ಸ್ಪಂದಿಸಿ ರಸ್ತೆ ನಿರ್ಮಾಣಕ್ಕೆ 50 ಲಕ್ಷ ರೂ. ಅನುದಾನ ಮಾಡಿರುವುದು ನಮ್ಮೆಲ್ಲರಿಗೂ ಸಂತಸದ ವಿಷಯ. ಈ ರಸ್ತೆಯು ಕೆರೂರ, ಜೋಡಕುರಳಿ ಹಾಗೂ ಉಮರಾಣಿ ಗ್ರಾಮದ ರೈತರಿಗೆ ಕೃಷಿ ಉತ್ಪನ್ನಗಳ ಸಾಗಣೆಗೆ ಬಹುಮುಖ್ಯವಾಗಿ ಉಪಯೋಗವಾಗಲಿದೆ ಎಂದು ಹೇಳಿದರು. 

ತಾಲೂಕಾ ಪಂಚಾಯತ್ ಸದಸ್ಯ ಪ್ರಕಾಶ ರಾಚನ್ನವರ ಮಾತನಾಡಿ ಮೊದಲು ಮಳೆಗಾಲದಲ್ಲಿ ಹದಗೆಟ್ಟ ರಸ್ತೆಯಿಂದ ಈ ಭಾಗದ ನಿವಾಸಿಗಳು ತುಂಬಾ ಕಷ್ಟ ಅನುಭವಿಸಬೇಕಾಗಿತ್ತು, ಈ ರಸ್ತೆ ನಿರ್ಮಾಣದಿಂದ ತೋಟಪಟ್ಟಿ ಪ್ರದೇಶದಲ್ಲಿ ನೆಲೆಸಿರುವ ರೈತರು, ಕೆಲಸಗಾರರು ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ಹೇಳಿದರು. 

ಕೆರೂರ ಗ್ರಾಮ ಪಂಚಾಯಿತಿ ಅಧ್ಯಕ್ಷ ವೀರೇಂದ್ರ ಪಾಟೀಲ, ಉಪಾಧ್ಯಕ್ಷ ಸತ್ತೆಪ್ಪ ಖೋತ, ಮಹೇಶ ಪಾಟೀಲ, ಮಲ್ಲಪ್ಪ ಬಾಗಿ, ರವಿ ಪಾಟೀಲ, ರವಿ ತುಬಾಕೆ, ಯಲ್ಲಪ್ಪ ಸನದಿ, ಹರಕೆ, ಖಾನಪ್ಪ ಬಾಡಕರ, ಅಭಿಯಂತರ ವೀನೀತ, ಗುತ್ತಿಗೆದಾರರಾದ ಬಿ ಜಿ ಪಾಟೀಲ, ಶಿವಾನಂದ ಕರೋಶಿ, ಕಾಕಾಸಾಬ ಚಿಮನೆ, ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.