ಗುಜರಾತ್‌ ಅಂತಾರಾಷ್ಟ್ರೀಯ ಗಡಿ ಮೂಲಕ ನುಸುಳಲು ಯತ್ನಿಸಿದ ಪಾಕ್‌ ಪ್ರಜೆಯ ಬಂಧನ

ಭೂಜ್, ಫೆ.11,ಗುಜರಾತ್‌ನ ಕಚ್‌ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿ (ಐಬಿ) ಮೂಲಕ ಭಾರತದೊಳಗೆ ನುಸುಳಲು ಯತ್ನಿಸಿದ ಪಾಕಿಸ್ತಾನದ ಪ್ರಜೆಯೊಬ್ಬನನ್ನು ಗಡಿಭದ್ರತಾ ಪಡೆ (ಬಿಎಸ್‌ಎಫ್‌) ಬಂಧಿಸಿದೆ ಎಂದು ಬಿಎಸ್‌ಎಫ್ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ. ಒಳನುಸುಳುಕೋರನನ್ನು ಪಾಕಿಸ್ತಾನದ ಕರಾಚಿಯ ಉತ್ತರದಲ್ಲಿರುವ ಶಹನಾವಾಜ್ ಭುಟ್ಟೋ ವಸಾಹತು ನಿವಾಸಿ ಅಹ್ಮದ್ ದಿಲಾವರ್ ಖಾನ್ (38) ಎಂದು ಗುರುತಿಸಲಾಗಿದೆ. ಕಚ್  ಜಿಲ್ಲೆಯ ರಾಪರ್ ತಾಲ್ಲೂಕಿನ ಬಾಲಸರ್ ಪೊಲೀಸ್ ಠಾಣೆ ವ್ಯಾಪ್ತಿಯ ವಾಗಡ್  ಪ್ರದೇಶಕ್ಕೆ ಸಮೀಪವಿರುವ ಗಡಿ ಸ್ತಂಭದ ಬಳಿ ಗಸ್ತು ತಿರುಗುತ್ತಿದ್ದ ತಂಡ ಆತನನ್ನು ಬಂಧಿಸಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಆತನನ್ನು ಬಾಲಸರ್ ಪೊಲೀಸರಿಗೆ ಒಪ್ಪಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.ಬಂಧಿತ  ಪಾಕಿಸ್ತಾನ ಪ್ರಜೆಯ ಬಗ್ಗೆ ವಿವರವಾದ ವಿಚಾರಣೆ ಜಂಟಿ ವಿಚಾರಣಾ ಕೇಂದ್ರದಲ್ಲಿ  ಮಾಡಲಾಗುವುದು ಎಂದು ಬಾಲಸರ್‌ ಪೊಲೀಸ್ ಠಾಣೆಯ ಪಿಐ ಬಿ.ಜೆ.ಪಾರ್ಮರ್ ತಿಳಿಸಿದ್ದಾರೆ. ನುಸುಳುಕೋರನಿಂದ ಪಡೆದ ಮಾಹಿತಿಯನ್ನು ಬಹಿರಂಗಪಡಿಸಲು ಅವರು ನಿರಾಕರಿಸಿದರು. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.