ಮುಂಡರಗಿ 18: ಜಗದ್ಗುರು ಅನ್ನದಾನೀಶ್ವರ ವಿದ್ಯಾ ಸಮಿತಿಯ ಶತಮಾನೋತ್ಸವ ಸಂಭ್ರಮದ ಅಡಿಯಲ್ಲಿ ಕ.ರಾ. ಬೆಲ್ಲದ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ ಮತ್ತು ಅರ್ಥಶಾಸ್ತ್ರ ಸ್ನಾತಕೋತ್ತರ ಅಧ್ಯಯನ ವಿಭಾಗ, ಹಾಗೂ ಹಿರಿಯ ವಿದ್ಯಾರ್ಥಿಗಳ ಸಂಘ ಇವುಗಳ ಸಂಯುಕ್ತ ಆಶ್ರಯದಲ್ಲಿ ಏ.20 ರಂದು ಬೆಳಗ್ಗೆ 10 ಗಂಟೆಗೆ ಕಾಲೇಜು ಆವರಣದಲ್ಲಿ ಗುರುವಂದನೆ, ಹಿರಿಯ ವಿದ್ಯಾರ್ಥಿಗಳ ಸಮಾಗಮ ಹಾಗೂ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭ ಜರುಗಲಿದೆ ಎಂದು ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ನಾಗೇಶ ಹುಬ್ಬಳ್ಳಿ ಮತ್ತು ಕಾಲೇಜಿನ ಪ್ರಾಚಾರ್ಯ ಡಾ.ಡಿ.ಸಿ.ಮಠ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪಟ್ಟಣದ ಕ.ರಾ.ಬೆಲ್ಲದ ಕಾಲೇಜಿನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 40 ವರ್ಷದಿಂದ ನಡೆದು ಬಂದಿರುವ ಕಾಲೇಜಿನಲ್ಲಿ ಅನೇಕ ವಿದ್ಯಾರ್ಥಿಗಳು ಇಲ್ಲಿ ವ್ಯಾಸಾಂಗಮಾಡಿ ಅನೇಕ ಉನ್ನತಹುದ್ದೆಗಳನ್ನು ಅಲಂಕರಿಸಿದ್ದಾರೆ. ಅವರೆಲ್ಲರನ್ನು ಒಂದುಗೂಡಿಸಿ, ಅವರಲ್ಲಿಯೇ ವಿಶೇಷ ಸಾಧನೆಮಾಡಿದ 75 ಕ್ಕೂ ಹೆಚ್ಚು ಹಿರಿಯ ವಿದ್ಯಾರ್ಥಿಗಳನ್ನು ಸತ್ಕರಿಸಲಾಗುವುದು. ಕಾಲೇಜಿನ ನಿವೃತ್ತ ಪ್ರಧ್ಯಾಪಕರನ್ನು, ಎಲ್ಲ ಸಿಬ್ಬಂದಿಗಳನ್ನು ಈ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗುವುದು.ದಿವ್ಯ ಸಾನಿಧ್ಯವನ್ನು ಮ.ನಿ.ಪ್ರ, ಜಗದ್ಗುರು, ನಾಡೋಜ, ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳವರು ವಹಿಸುವರು.ನೇತ್ರತ್ವವನ್ನು ಉತ್ತರಾಧಿಕಾರಿಗಳಾದ ಡಾ. ಮಲ್ಲಿಕಾರ್ಜುನ ಮಹಾಸ್ವಾಮಿಗಳು ವಹಿಸುವರು.
ಅಧ್ಯಕ್ಷತೆಯನ್ನು ಕ.ರಾ. ಬೆಲ್ಲದ ಕಾಲೇಜು ಮೇಲ್ವಿಚಾರಣಾ ಸಮಿತಿ ಕಾರ್ಯಾಧ್ಯಕ್ಷರಾದ ಪ್ರೊ ಆರ್. ಎಲ್. ಪೊಲೀಸ್ ಪಾಟೀಲ ವಹಿಸುವರು.ಶ್ರೀ ಜ.ಅ.ವಿ. ಸಮಿತಿಯ ಆಡಳಿತಾಧಿಕಾರಿಗಳಾದ ಡಾ. ಬಿ.ಜಿ. ಜವಳಿ ಉಪಸ್ಥಿತ ಇರುವರು.ಮುಖ್ಯಅತಿಥಿಗಳಾಗಿ ಧಾರವಾಡ ಹಿರಿಯ ಸಿವಿಲ್ ನ್ಯಾಯಾಧೀಶರಾದ ಪಿ.ಎಫ್. ದೊಡ್ಡಮನಿ, ಹುಬ್ಬಳ್ಳಿ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರಾದ ಯಮನೂರ್ಪ ಕೆ. ಮತ್ತು ಹರಪನಹಳ್ಳಿ ಡಿ.ವೈ.ಎಸ್.ಪಿ. ವೆಂಕಟಪ್ಪ ನಾಯಕ ಭಾಗವಹಿಸುವರು. ಈ ಸಮಾರಂಭದಲ್ಲಿ ಒಟ್ಟು 700 ಕ್ಕೂ ಹೆಚ್ಚು ಹಿರಿಯ ವಿದ್ಯಾರ್ಥಿಗಳು ಸೇರುವ ನೀರೀಕ್ಷೆ ಇದೆ. ಕಾರ್ಯಕ್ರಮದ ನಂತರ ಹಿರಿಯ ವಿದ್ಯಾರ್ಥಿಗಳಿಂದ ಮತ್ತು ಈಗಿನ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ತಿಳಿಸಿದರು.
ಈ ವೇಳೆ ಹಿರಿಯ ವಿದ್ಯಾರ್ಥಿ ಸಂಘದ ಮಂಜುನಾಥ ಇಟಗಿ, ರಾಘು ಕುರಿಯವರ, ವೀರೇಶ ಸಜ್ಜನರ,ಮಂಜುನಾಥ ಮುಧೋಳ ಹಾಗೂ ಸಿಬ್ಬಂದಿಗಳಾದ ಡಾ.ಸಂತೋಷ ಹಿರೇಮಠ, ಡಾ.ಸಚಿನ ಉಪ್ಪಾರ, ಡಾ.ಕೋರ್ಪಡೆ, ಡಾ.ಕುಮಾರ ಮುಂತಾದವರಿದ್ದರು.