ಬೀಳಗಿ 17: ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾಲಯವನ್ನು ಯಥಾವತ್ತಾಗಿ ಮುಂದುವರಿಕೊಂಡು ಹೋಗಬೇಕು. ಅದನ್ನು ಕೃಷಿ,ತೋಟಗಾರಿಕೆ,ಅರಣ್ಯ,ಪಶು ಸಂಗೋಪನೆಯ ವಿಷಯಗಳ ಸಂಯುಕ್ತ (ಇಂಟಿಗ್ರೇಟೆಡ್ )ವಿಶ್ವವಿದ್ಯಾಲಯವಾಗಿ ಪರಿವರ್ತಿಸುವ ಉದ್ದೇಶವನ್ನು ಸರ್ಕಾರ ಕೈಬಿಡಬೇಕು ಎಂದು ತೋಟಗಾರಿಕೆ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ಸದಸ್ಯರೂ ಆಗಿರುವ, ವಿಧಾನ ಪರಿಷತ್ ಸದಸ್ಯ ಹನುಮಂತ. ಆರ್ ನಿರಾಣಿ ಅವರು ಪತ್ರಿಕಾ ಪ್ರಕಟಣೆ ನೀಡಿ ಆಗ್ರಹಿಸಿದ್ದಾರೆ.
ಇದೇ ಮಾರ್ಚ್ ತಿಂಗಳಲ್ಲಿ ನಡೆದ ಅಧಿವೇಶನದಲ್ಲಿ ತೋಟಗಾರಿಕೆ ವಿಶ್ವವಿದ್ಯಾಲಯವನ್ನು ಇಂಟಿಗ್ರೇಟೆಡ್ ವಿಶ್ವವಿದ್ಯಾಲಯವಾಗಿ ಪರಿವರ್ತಿಸುವ ಉದ್ದೇಶವನ್ನು ಬಹಳಷ್ಟುಶಾಸಕರು ವಿಧಾನಸಭೆ ಹಾಗೂ ವಿಧಾನ ಪರಿಷತ್ತಿನಲ್ಲಿ ವಿರೋಧಿಸಿದ್ದರು. ಸರ್ಕಾರ ಎರಡೂ ಸದನಗಳಲ್ಲಿ ಪರಿವರ್ತಿಸುವ ಉದ್ದೇಶವನ್ನು ಕೈ ಬಿಡುವುದಾಗಿ ಹೇಳಿಕೆ ನೀಡಿದೆ. ಸಚಿವ ಸಂಪುಟದ ಸಭೆಯಲ್ಲಿಯೂ ಕೈ ಬಿಡುವ ನಿರ್ಧಾರ ಆಗಿದೆ. ಆದರೆ ಇದನ್ನೆಲ್ಲ ಬದಿಗೊತ್ತಿ ಹಿರಿಯ ಐಎಎಸ್ ಅಧಿಕಾರಿ ಟಿ.ಎಂ.ವಿಜಯ ಭಾಸ್ಕರ್ ಅವರ ನೇತೃತ್ವದಲ್ಲಿ ಅಧ್ಯಯನ
ಸಮಿತಿ ನೇಮಿಸಿರುವುದು ಆಶ್ಚರ್ಯದ ಸಂಗತಿ ಎಂದು ಅವರು ಹೇಳಿದ್ದಾರೆ. ಸರಕಾರ ಸಮಿತಿ ರದ್ದು ಪಡಿಸಬೇಕು ಎಂದೂ ಅವರು ಆಗ್ರಪಡಿಸಿದ್ದಾರೆ.
ರೈತರೂ ಕೂಡ ತೋಟಗಾರಿಕೆ ವಿಶ್ವವಿದ್ಯಾಲಯವನ್ನು ಬಹು ವಿಷಯಗಳ ವಿಶ್ವವಿದ್ಯಾಲಯವಾಗಿ ಪರಿವರ್ತಿಸುವುದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.ತೋಟಗಾರಿಕೆ ವಿಶ್ವವಿದ್ಯಾಲಯ ಸಮರ್ಕವಾಗಿ, ರೈತರ ಪರವಾಗಿ ಕಾರ್ಯನಿರ್ವಹಿಸುತ್ತಿದೆ. ಅನೇಕ ಮಹತ್ವದ ಸಂಶೋಧನೆಗಳನ್ನು ಮಾಡಿದೆ. ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿದೆ. ರೈತ ಸಂಪರ್ಕ ಸಭೆಗಳನ್ನು ನಡೆಸುತ್ತಿದೆ. ಈ ವಿಶ್ವವಿದ್ಯಾಲಯಕ್ಕೆ ಹೆಚ್ಚಿನ ಅನುದಾನವನ್ನು ನೀಡಿ ಸಶಕ್ತಗೊಳಿಸಬೇಕು ಎಂದು ನಿರಾಣಿ ಆಗ್ರಹಿಸಿದ್ದಾರೆ.