ಮುಖ್ಯಶಿಕ್ಷಕನಿಂದ ಶಾಲಾ ಸೌಂದರ್ಯೀಕರಣಕ್ಕಾಗಿ 40ಸಾವಿರ ದೇಣಿಗೆ

Headmaster donates Rs 40,000 for school beautification

ಹಾರೂಗೇರಿ 16: ಸರಕಾರಿ ಶಾಲೆಗಳ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಪ್ರತಿಯೊಬ್ಬ ಶಿಕ್ಷಕರು ಮತ್ತು ಸಮುದಾಯದ ಪಾತ್ರ ಪ್ರಮುಖವಾಗಿದೆ. ಬಡಮಕ್ಕಳ ಶೈಕ್ಷಣಿಕ ಪ್ರಗತಿಗೆ ಸಹಕಾರ ಅಗತ್ಯವಿದೆ ಎಂದು ಮುರಗುಂಡಿ ಸಿಆರ್‌ಪಿ ವಿಶುಕುಮಾರ ಮಾಳಿ ಹೇಳಿದರು. 

ಸಮೀಪದ ಖೀಳೆಗಾಂವ ಗ್ರಾಮದ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಮುಖ್ಯಶಿಕ್ಷಕ ವಾಯ್‌.ಎ.ಮೇತ್ರಿ ಅವರ ಬೀಳ್ಕೊಡುವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು. 

ಶಾಲೆಯಿಂದ ವರ್ಗಾವಣೆಗೊಂಡ ಮುಖ್ಯಶಿಕ್ಷಕ ವಾಯ್‌.ಎ.ಮೇತ್ರಿ ಅವರನ್ನು ಗ್ರಾಮದ ಮುಖಂಡರು ಮತ್ತು ಎಸ್‌ಡಿಎಂಸಿ ಸದಸ್ಯರು ಸತ್ಕರಿಸಿ, ಬೀಳ್ಕೊಟ್ಟರು. ಸತ್ಕಾರ ಸ್ವೀಕರಿ ಮಾತನಾಡಿದ ಮೇತ್ರಿ ಅವರು ಕಳೆದ 5 ವರ್ಷಗಳಿಂದ ಮಕ್ಕಳು, ಪಾಲಕರು ಹಾಗೂ ಗ್ರಾಮಸ್ತರು ತಮ್ಮ ಕುಟುಂಬದ ಸದಸ್ಯರಂತೆ ಸಹಕಾರ ನೀಡಿದ್ದಕ್ಕೆ ಧನ್ಯವಾದ ತಿಳಿಸಿದ ಅವರು ಶಾಲೆಯ ಸೌಂದರ್ಯೀಕರಣಕ್ಕಾಗಿ 40ಸಾವಿರ ರೂಗಳನ್ನು ದೇಣಿಗೆಯಾಗಿ ನೀಡಿದರು. 

ಪಶುವೈದ್ಯ ಹಾಗೂ ಸಮಾಜ ಸೇವಕ ಶಿವರಾಜ ಕೆಂಪವಾಡೆ ಅವರು ಶಾಲೆಯನ್ನು ದತ್ತು ತೆಗೆದುಕೊಂಡು ಗಡಿ ಭಾಗದ ಕನ್ನಡ ಶಾಲೆಯನ್ನು ಉಳಿಸಿ ಬೆಳೆಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು. 

ಮುಖ್ಯಅತಿಥಿಗಳಾಗಿ ಸಿಆರ್‌ಪಿ ಎ.ಎಸ್‌.ಭಾಗವಾನ್, ಆರ್‌.ಡಿ ಪ್ರೌಢಶಾಲೆ ಮುಖ್ಯಶಿಕ್ಷಕ ಚಿಕ್ಕಮಠ, ಎಸ್‌ಡಿಎಂಸಿ ಸದಸ್ಯರಾದ ಸಂಜು ಸಕಾನಟ್ಟಿ, ಪ್ರಕಾಶ ಕಡೇಮನಿ ಮತ್ತೀತರರು ಉಪಸ್ಥಿತರಿದ್ದರು. 

ಪ್ರಭಾರಿ ಮುಖ್ಯಶಿಕ್ಷಕಿ ಸೌಮ್ಯಾ ಗೋಕಾಕ ಸ್ವಾಗತಿಸಿದರು. ಪ್ರೀಯಾ ಕಂಕಣವಾಡಿ ಕಾರ್ಯಕ್ರಮ ನಿರೂಪಿಸಿದರು.