ಮಾಂಜರಿ 23: ಬಿಸಲಿನ ಧಗೆ ಹಾಗೂ ನೀರಿನ ಕೊರತೆಯಿಂದಾಗಿ ಬೇಸತ್ತಿದ್ದ ಗಡಿಭಾಗದ ಜನತೆಗೆ ಕೃತ್ತಿಕಾ ಮಳೆ ಕೈ ಹಿಡಿದಿದೆ. ನೆರೆಯ ಮಹಾರಾಷ್ಟ್ರದ ಕೊಲ್ಲಾಪುರ, ಸಾಂಗಲಿ ಮತ್ತು ಸಾತಾರಾ ಜಿಲ್ಲೆಯಲ್ಲಿ ಹಾಗೂ ಚಿಕ್ಕೋಡಿ ಮತ್ತು ನಿಪ್ಪಾಣಿ ತಾಲೂಕಿನಲ್ಲಿ ಸುರಿದ ಮಳೆಯಿಂದಾಗಿ ಗಡಿಯ ಕೃಷ್ಣಾ ದೂಧಗಂಗಾ ಮತ್ತು ವೇದಗಂಗಾ ನದಿಗಳಿಗೆ 4 ಅಡಿಯಷ್ಟು ನೀರಿನ ಮಟ್ಟ ದಿಢೀರ್ ಏರಿಕೆಯಾಗಿದೆ.
ಬರಿದಾಗಿದ್ದ ಕೃಷ್ಣಾ ಮತ್ತು ಉಪ ನದಿಗಳಿಗೆ ಜೀವಕಳೆ ಬಂದಂತಾಗಿದೆ. ನಿರಂತರವಾದ ಸುರಿಯುತ್ತಿರುವ ಮಳೆಯಿಂದಾಗಿ ಕೃಷ್ಣಾ, ದೂಧಗಂಗಾ ಮತ್ತು ವೇದಗಂಗಾ ನದಿಗಳ ನೀರಿನಮಟ್ಟ ಸುಮಾರು 4 ಅಡಿಯಷ್ಟು ಏರಿಕೆಯಾಗಿದೆ. ತಗ್ಗು ಪ್ರದೇಶಗಳಲ್ಲಿ ನೀರು ನಿಂತು ಕೆರೆಯಾಗಿ ಪರಣಮಿಸಿವೆ.
ಚಿಕ್ಕೋಡಿ ಮತ್ತು ನಿಪ್ಪಾಣಿ ತಾಲೂಕಿನ ನದಿ ತೀರದ ಗ್ರಾಮಗಳ ಹಾಗೂ ಪಟ್ಟಣಗಳ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿತ್ತು. ಆದರೆ ಕಳೆದೆರಡು ದಿನಗಳಿಂದ ನೀರಿನ ಮಟ್ಟ ಏರಿಕೆಕೊಂಡು ಜನರ ಸಂತಸ ವ್ಯಕ್ತಪಡಿಸಿದ್ದಾರೆ.