ಬೆಳಗಾವಿ 23: ಶುಶ್ರೂಷಕರಿಲ್ಲದೆ ಆಸ್ಪತ್ರೆಗಳು ಕಾರ್ಯನಿರ್ವಹಿಸುವುದು ಅಸಾಧ್ಯ ಹಾಗೂ ಕೆ.ಎಲ್.ಇ. ಸಂಸ್ಥೆಯು ಸುಮಾರು 10 ಶುಶ್ರೂಷಾ ಮಹಾವಿದ್ಯಾಲಯಗಳನ್ನು ತನ್ನದೆ ಆಸ್ಪತ್ರೆಯೊಂದಿಗೆ ನಡೆಸುತ್ತಿದೆ. ಕೆ.ಎಲ್.ಇ. ಆಸ್ಪತ್ರೆ ಆಧುನಿಕ ತಂತ್ರಜ್ಞಾನವನ್ನು ಹೊಂದಿರುವ ಅತ್ಯುತ್ತಮ ಸಂಸ್ಥೆಗಳಲ್ಲಿ ಒಂದಾಗಿದೆ ಮತ್ತು ಕೌಶಲ್ಯಗಳನ್ನು ಹೆಚ್ಚಿಸಲು ಈ ಸಮ್ಮೆಳನವವು ತುಂಬಾ ಅವಶ್ಯಕವಾಗಿದ್ದು, ಸಮ್ಮೇಳನವನ್ನು ಉದ್ಘಾಟಿಸಲು ಸಂತೋಷಪಡುತ್ತೆನೆ ಎಂದು ಕೆ.ಎಲ್.ಇ. ಸಂಸ್ಥೆಯ ಅಧ್ಯಕ್ಷ ಹಾಗೂ ಬೆಳಗಾವಿ ಕೆ.ಎಲ್.ಇ. ಸ್ವಾಯತ್ತ ವಿಶ್ವವಿದ್ಯಾಲಯದ ಕುಲಪತಿ ಡಾ.ಪ್ರಭಾಕರ ಕೋರೆ ಹೇಳಿದರು.
ಬೆಳಗಾವಿಯ ಕೆ.ಎಲ್.ಇ. ಸ್ವಾಯತ್ತ ವಿಶ್ವವಿದ್ಯಾಲಯದ ಶುಶ್ರೂಷಾ ಮಹಾವಿದ್ಯಾಲಯವು ಕೆ.ಎಲ್.ಇ, ಜೆ.ಎನ್.ಎಮ್.ಸಿ ಸಭಾಂಗಣದಲ್ಲಿ ಮಕ್ಕಳ ಶುಶ್ರೂಷಾ ಉತ್ತಮ ಆರೈಕೆಗಾಗಿ ಅಧ್ಯಯನ ಮತ್ತು ಸಂಶೋಧನೆ ಎಂಬ ಶೀರ್ಷಿಕೆಯೊಂದಿಗೆ ದಿ. 23 ಮತ್ತು 24ರಂದು ಎರಡು ದಿನ ಹಮ್ಮಿಕೊಂಡ ರಾಷ್ಟ್ರೀಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಕೆ.ಎಲ್.ಇ. ಸ್ವಾಯತ್ತ ವಿಶ್ವವಿದ್ಯಾಲಯ ಬೆಳಗಾವಿಯ, ಶುಶ್ರೂಷಾ ಮಹಾವಿದ್ಯಾಲಯದ ಪ್ರಾಂಶುಪಾಲ ಪ್ರೊ.(ಡಾ).ವಿರೇಶಕುಮಾರ ನಂದಗಾವ ಅವರು ಸ್ವಾಗತಿಸಿ ಗಣ್ಯರನ್ನು ಪರಿಚಯಿಸಿದರು. ಮಕ್ಕಳ ಶುಶ್ರೂಷಾ ಉತ್ತಮ ಆರೈಕೆಗಾಗಿ ಅಧ್ಯಯನ ಮತ್ತು ಸಂಶೋಧನೆಯ ಕುರಿತಾದ ಸ್ಮರಣಿಕೆ ಮತ್ತು ಮಕ್ಕಳ ಆರೋಗ್ಯ ಮೌಲ್ಯಮಾಪನ ಕುರಿತು ಅಭಿವೃದ್ಧಿಪಡಿಸಿದ ಮೊಬೈಲ ಅಪ್ಲಿಕೆಷನನ್ನು ಬಿಡುಗಡೆಗೊಳಿಸಲಾಯಿತು.
ಮುಖ್ಯ ಅತಿಥಿಗಳಾಗಿ ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಯೋಜನಾ ಸಚಿವಾಲಯದ ನರ್ಸಿಂಗ್ ಸಲಹೆಗಾರ ಡಾ. ದೀಪಿಕಾ ಸೆಸಿಲ್ ಖಾಖಾ ಅವರು ಮಾತನಾಡುತ್ತ ಅಧ್ಯಯನ ಮತ್ತು ಸಂಶೋಧನೆಯು, ವೈದ್ಯಕೀಯ ಕೌಶಲ್ಯಗಳನ್ನು ಹೆಚ್ಚಿಸುತ್ತದೆ. ಅಭ್ಯಾಸವು ಎಂದಿಗೂ ನಮ್ಮನ್ನು ಪರಿಪೂರ್ಣರನ್ನಾಗಿ ಮಾಡುವುದಿಲ್ಲ ಆದರೆ ಪರಿಪೂರ್ಣವಾದ ಅಭ್ಯಾಸವು ನಮ್ಮನ್ನು ಯಶಸ್ವಿಗೊಳಿಸುತ್ತದೆ ಎಂದು ಉಲ್ಲೆಖಿಸಿದರು. ಮೌಲ್ಯಯುತವಾದ ಸಮ್ಮೆಳನವನ್ನು ಆಯೋಜಿಸಿದ್ದಕ್ಕಾಗಿ ಸಂಸ್ಥೆಯನ್ನು ಅಭಿನಂದಿಸಿದರು.
ಮುಖ್ಯ ಅತಿಥಿ ಕೆ.ಎಲ್.ಇ. ಸ್ವಾಯತ್ತ ವಿಶ್ವವಿದ್ಯಾಲಯದ ಕುಲಪತಿ ಡಾ.ನಿತಿನ್ ಗಂಗನೆ ಅವರು ಶುಶ್ರೂಷಾ ಶಿಕ್ಷಣವು ಕೌಶಲ್ಯ ಆಧಾರಿತ ವೃತ್ತಿಯಾಗಿದ್ದು, ಕೆ.ಎಲ್.ಇ. ಸ್ವಾಯತ್ತ ವಿಶ್ವವಿದ್ಯಾಲಯ ಬೆಳಗಾವಿಯ, ಶುಶ್ರೂಷಾ ಮಹಾವಿದ್ಯಾಲಯವು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.
ಕೃಷ್ಣ ವಿಶ್ವವಿದ್ಯಾಲಯ ಕರಾಡ, ಶುಶ್ರೂಷಾ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ವೈಶಾಲಿ ಮೋಹಿತೆ, ಅವರು ಕೆ.ಎಲ್.ಇ. ಸಂಸ್ಥೆಗೆ ಅಭಿನಂದನೆಯನ್ನು ಸಲ್ಲಿಸಿ, ಶುಶ್ರೂಷಕ ವೃತ್ತಿಯು ದೈವಿಕ ವೃತ್ತಿಯಾಗಿದ್ದು, ಉತ್ತಮ ಶುಶ್ರೂಷಕರು ಸಮಾಜಕ್ಕೆ ಸಹಾನುಭೂತಿಯ ಆರೈಕೆ ನೀಡಲು ನೆರವಾಗುತ್ತಾರೆ ಎಂದು ಹೇಳಿದರು
ಈ ಎರಡು ದಿನಗಳಲ್ಲಿ ಉಪನ್ಯಾಸ, ಫಲಕ ಚರ್ಚೆ, ಪೇಪರ್ ಹಾಗು ಪೊಸ್ಟರ್ ಪ್ರದರ್ಶನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜನೆಗೊಳ್ಳಲಿವೆ. ಭಾರತದ ಕರ್ನಾಟಕ, ಮಹಾರಾಷ್ಟ್ರ, ಗೋವಾ, ಗುಜರಾತ, ತೆಲಂಗಾಣ, ಉತ್ತರ ಪ್ರದೇಶ, ಪಂಜಾಬ, ಮತ್ತು ತಮಿಳುನಾಡು ರಾಜ್ಯಗಳಿಂದ ಸುಮಾರು 520 ಪ್ರತಿನಿಧಿಗಳು, ಉನ್ನತ ಸಂಪನ್ಮೂಲ ವ್ಯಕ್ತಿಗಳು, ಪ್ರಸವಶಾಸ್ತ್ರದ ಶಿಕ್ಷಣ ತಜ್ಞರು, ಶುಶ್ರೂಷಾ ಅಧಿಕಾರಿಗಳು, ಅಧ್ಯಾಪಕರು ಮತ್ತು ಪಿಎಚ್.ಡಿ ವಿದಾಂಸರು ಸಮ್ಮೆಳನದಲ್ಲಿ ಭಾಗವಹಿಸಲಿದ್ದಾರೆ.
ಕೆ.ಎಲ್.ಇ. ಸಂಸ್ಥೆಯ ನಿರ್ದೇಶಕ ಮಹಾಂತೇಶ ಕವಟಗಿಮಠ, ಕೆ.ಎಲ್.ಇ. ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ವೈದ್ಯಕೀಯ ನಿರ್ದೇಶಕ ಡಾ.ಎಂ.ದಯಾನಂದ ಕೆ.ಎಲ್.ಇ. ವಿ.ಕೆ.ದಂತ ವಿಜ್ಞಾನ ಸಂಸ್ಥೆಯ ಪ್ರಾಂಶುಪಾಲ, ಡಾ. ಅಲ್ಕಾ ಕಾಳೆ ಮತ್ತು ಕೆ.ಎಲ್.ಇ ವಿವಿಧ ಸಂಸ್ಥೆಗಳ ಪ್ರಾಂಶುಪಾಲರು ಹಾಗು ಅಧಿಕಾರಿಗಳು ಉಪಸ್ಥಿತರಿದ್ದರು.
ಕೆ.ಎಲ್.ಇ. ಸ್ವಾಯತ್ತ ವಿಶ್ವವಿದ್ಯಾಲಯ, ನರ್ಸಿಂಗ ಕಾಲೇಜಿನ ಪ್ರಾಧ್ಯಾಪಕರು ಹಾಗೂ ಸಮ್ಮೇಳನದ ಸಂಘಟನಾ ಕಾರ್ಯದರ್ಶಿ ಪ್ರೊ.(ಡಾ). ಗವಿಸಿದ್ದಯ್ಯ ಸಾಲೀಮಠ ವಂದಿಸಿದರು. ಉಪಪ್ರಾಂಶುಪಾಲ ಪ್ರೊ.(ಡಾ). ಸಂಗೀತಾ ಖರಡೆ, ಡೀನ ಪ್ರೊ.(ಡಾ).ಪ್ರೀತಿ ಭೂಪಾಲಿ ವೇದಿಕೆ ಮೇಲೆ ಇದ್ದರು.